ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಳಚಿತು ಖರ್ಗೆ ಜಯದ ಕೊಂಡಿ’

Last Updated 23 ಮೇ 2019, 19:48 IST
ಅಕ್ಷರ ಗಾತ್ರ

ಕಲಬುರ್ಗಿ:‘ಮಲ್ಲಿಕಾರ್ಜುನ ಖರ್ಗೆ ಮುಂದಿನ ಬಾರಿ ಈ ಸದನಕ್ಕೆ ಬರುವುದಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಸಂಸತ್‌ ಅಧಿವೇಶನದಲ್ಲಿ ಖರ್ಗೆ ಸಮ್ಮುಖದಲ್ಲೇ ಹೇಳಿದ್ದರು. ಅದು ಈಗ ನಿಜವಾಗಿದೆ.

ಅಧಿಕೃತ ಸ್ಥಾನಮಾನ ನೀಡದಿದ್ದರೂ ಕೇವಲ 44 ಸಂಸದರನ್ನು ಕಟ್ಟಿಕೊಂಡು ಖರ್ಗೆ ಲೋಕಸಭೆಯ ‘ವಿರೋಧ ಪಕ್ಷದ ನಾಯಕ’ರಾಗಿ ಸಮರ್ಥವಾಗಿ ಕೆಲಸ ಮಾಡಿದ್ದರು. ತಮ್ಮ ಪಕ್ಷದ ನಿಲುವುಗಳ ಪರ ಗಟ್ಟಿಯಾಗಿ ನಿಂತು ಸಮಯ ಸಿಕ್ಕಾಗಲೆಲ್ಲ ಮೋದಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು. ಇದೇ ಕಾರಣಕ್ಕೆ ‘ಮೋದಿ ಮತ್ತು ಟೀಂ’ನ ಕೆಂಗಣ್ಣಿಗೆ ಗುರಿಯಾಗಿದ್ದರು.

ಖರ್ಗೆ ಅವರನ್ನು ಸೋಲಿಸಲೇಬೇಕು ಎಂದು ಆರು ತಿಂಗಳ ಮುಂಚೆಯಿಂದಲೇ ಸಿದ್ಧತೆ ಆರಂಭಿಸಿದ್ದ ಬಿಜೆಪಿ, ಚಿಂಚೋಳಿಯ ಕಾಂಗ್ರೆಸ್‌ ಶಾಸಕ ಡಾ.ಉಮೇಶ ಜಾಧವ ಅವರನ್ನು ಕರೆತಂದು ಕಣಕ್ಕಿಳಿಸಿತು. ಜಾತಿ ಸಮೀಕರಣಕ್ಕೆ ಒತ್ತು ನೀಡಿತು. ‘ಖರ್ಗೆ ಸೋಲುತ್ತಾರೆ’ ಎಂಬುದನ್ನು ಬಲವಾಗಿ ಬಿಂಬಿಸಿ, ಮತದಾರರು ತನ್ನ ಪರವಾಗಿ ಗಟ್ಟಿಯಾಗಿ ನಿಲ್ಲುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಯಡಿಯೂರಪ್ಪ ಅವರು ಲಿಂಗಾಯತ ಮತಗಳನ್ನು ಕ್ರೋಢೀಕರಿಸಿದರು. ಮಾಲೀಕಯ್ಯ ಗುತ್ತೇದಾರ (ಈಡಿಗ), ಬಾಬುರಾವ ಚಿಂಚನಸೂರ (ಕೋಲಿ), ಡಾ.ಎ.ಬಿ. ಮಾಲಕರಡ್ಡಿ (ಲಿಂಗಾಯತ ರಡ್ಡಿ) ಅವರ ಪ್ರಚಾರ ನೆರವಿಗೆ ಬಂತು.

ಬಂಜಾರ ಸಮುದಾಯ ಇಡೀಯಾಗಿ ಡಾ.ಜಾಧವ ಅವರ ಬೆನ್ನಿಗೆ ನಿಂತಿತು. ಕಾರ್ಯಕರ್ತರ ಶ್ರಮ, ಮೋದಿ ಅಲೆ, ಸಾಂಪ್ರದಾಯಿಕ ಮತಗಳು ಬಿಜೆಪಿ ಗೆಲುವಿಗೆ ಕಾರಣವಾದವು.

ಸಚಿವ ಪ್ರಿಯಾಂಕ್‌ ಖರ್ಗೆ ರಾಜ್ಯ ಸರ್ಕಾರದಲ್ಲಿ ಸಚಿವರಾದ ನಂತರ ‘ಪುತ್ರ ವ್ಯಾಮೋಹಿ’ ಎಂಬ ಕಳಂಕ ಖರ್ಗೆ ಅವರಿಗೆ ಅಂಟಿಕೊಂಡಿತು. ‘ಪ್ರಿಯಾಂಕ್‌ ಆಕ್ರಮಣಕಾರಿ ನಡವಳಿಕೆ ಹೊಂದಿದ್ದಾರೆ, ಹಿರಿಯರಿಗೆ ಗೌರವ ಕೊಡುವುದಿಲ್ಲ’ ಎಂಬ ಆರೋಪ ವ್ಯಾಪಕವಾಯಿತು. ಖರ್ಗೆ ‘ವಿರೋಧಿ’ಗಳೆಲ್ಲ ಒಂದಾದರು.

ಸಚಿವ ಸ್ಥಾನ ಸಿಗಲಿಲ್ಲ ಎಂದು ಮುನಿಸಿಕೊಂಡಿದ್ದ ಡಾ.ಉಮೇಶ ಜಾಧವ ಅವರನ್ನು ಸಮಾಧಾನ ಪಡಿಸುವ ಕೆಲಸವನ್ನು ಖರ್ಗೆ ಮಾಡಲಿಲ್ಲ. ಮಾಲೀಕಯ್ಯ, ಬಾಬುರಾವ್‌, ಮಾಲಕರಡ್ಡಿ ಅವರನ್ನು ಗಂಭೀರವಾಗಿ ಪರಿಗಣಿಸದೆ, ‘ಸೋತ ಪೈಲ್ವಾನರ ಸಂಘ’ ಎಂದು ಜರಿದರು. ಜಾತಿ ಮತಗಳ ಸಮೀಕರಣ ವಿಷಯದಲ್ಲಿ ಆರಂಭದಲ್ಲಿ ಎಡವಿದರು. ಕೊನೆಗಳಿಗೆಯಲ್ಲಿ ಎಚ್ಚೆತ್ತುಕೊಂಡು ಮಠ–ಮಂದಿರ ಸುತ್ತಿದರು. ಪ್ರಚಾರದಲ್ಲಿ ಇದೇ ಮೊದಲ ಬಾರಿಸಾಕಷ್ಟು ಬೆವರು ಸುರಿಸಿದರು.

ಗುರುಮಠಕಲ್‌ ವಿಧಾನಸಭಾ ಕ್ಷೇತ್ರವನ್ನು ಖರ್ಗೆ ಅವರ ‘ತವರು’ ಎಂದೇ ಕರೆಯಲಾಗುತ್ತದೆ. ನಾಗನಗೌಡ ಕಂದಕೂರ ಇಲ್ಲಿಯ ಜೆಡಿಎಸ್‌ ಶಾಸಕರು. ಇಲ್ಲಿ ‘ಮೈತ್ರಿ ಧರ್ಮ’ ಪಾಲನೆಯಾಗಲಿಲ್ಲ. ಹೀಗಾಗಿ ಇಲ್ಲಿಂದ ಹೆಚ್ಚಿನ ಮತ ಸೆಳೆಯಲು ಸಾಧ್ಯವಾಗಲಿಲ್ಲ.

‘ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದಖಮರುಲ್‌ ಇಸ್ಲಾಂ ಅವರನ್ನು ಸಂಪುಟದಿಂದ ವಜಾ ಮಾಡಲು ಖರ್ಗೆ ಕಾರಣ’ ಎಂಬ ವಿರೋಧಿಗಳ ಆರೋಪ ಖರ್ಗೆ ಅವರಿಗೆ ಭಾರವಾಯಿತು.ಈ ಕಾರಣಕ್ಕಾಗಿ ಮುಸ್ಲಿಂ ಸಮುದಾಯದ ಮತಗಳು ಹೆಚ್ಚಾಗಿ ಚಲಾವಣೆಯಾಗಲಿಲ್ಲ.

‘ಚಿನ್ನದ ಮೊಟ್ಟೆ ಇಡುವ ಕೋಳಿ’ ಎಂದೇ ಕರೆಯಲ್ಪಡುವ 371 (ಜೆ) ಮೀಸಲಾತಿಯ ವಿಷಯವೂ ಅವರ ನೆರವಿಗೆ ಬರಲಿಲ್ಲ.

ಅಭಿವೃದ್ಧಿ ವಿಷಯ ಗೌಣವಾಗಿ, ಜಾತಿ ವಿಷಯ ಮುನ್ನೆಲೆಗೆ ಬಂತು. ಒಂಬತ್ತು ವಿಧಾನಸಭೆ, ಎರಡು ಲೋಕಸಭೆ ಚುನಾವಣೆಯಲ್ಲಿ ಗೆದ್ದಿದ್ದ ಖರ್ಗೆ ಅವರ ‘ಸೋಲಿಲ್ಲದ ಸರದಾರ’ ಕಿರೀಟ ಕಳಚಿತು.

ಸಂಸತ್‌ನಲ್ಲಿ ಕರ್ನಾಟಕದ ‘ದೊಡ್ಡ ಧ್ವನಿ’ ಈ ಬಾರಿ ಇಲ್ಲವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT