ಶನಿವಾರ, ಫೆಬ್ರವರಿ 29, 2020
19 °C
ವಿವಿಧ ಕ್ಷೇತ್ರಗಳ ಸಾಧಕರಿಗೆ, ಗಣ್ಯರಿಗೆ ಸನ್ಮಾನ

ಸಂವಿಧಾನ ರಕ್ಷಿಸದಿದ್ದರೆ, ದೇಶಕ್ಕೆ ಅನ್ಯಾಯ: ಮಲ್ಲಿಕಾರ್ಜು ಖರ್ಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀವಿಜಯ ಪ್ರಧಾನ ವೇದಿಕೆ (ಕಲಬುರ್ಗಿ): ‘ಪ್ರಸ್ತುತ ದಿನಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಪಾಯವಾದ ಸಂವಿಧಾನಕ್ಕೆ ಕುತ್ತು ಬಂದಿದ್ದು, ಪ್ರಶ್ನಿಸುವ ಮನೋಭಾವ ಕಸಿದುಕೊಳ್ಳಲಾಗುತ್ತಿದೆ. ಈ ಬೆಳವಣಿಗೆಗೆ ಈಗಲೇ ತಡೆಯೊಡ್ಡದಿದ್ದರೆ, ದೇಶಕ್ಕೆ ಅಕ್ಷರಶಃ ಅನ್ಯಾಯ ಮಾಡಿದಂತಾಗುತ್ತದೆ' ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿಮಲ್ಲಿಕಾರ್ಜುನ ಖರ್ಗೆ ಕಳವಳ ವ್ಯಕ್ತಪಡಿಸಿದರು.

ಸಮ್ಮೇಳನದಲ್ಲಿ ಗುರುವಾರ ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ‘ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಈಗ ಧ್ವನಿ ಎತ್ತದಿದ್ದರೆ, ಮುಂದಿನ ಪೀಳಿಗೆಯವರು ಖಂಡಿತ ನಮ್ಮನ್ನು ಕ್ಷಮಿಸುವುದಿಲ್ಲ' ಎಂದರು.

‘ಡಾ. ಬಿ.ಆರ್.ಅಂಬೇಡ್ಕರ್, ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರೂ, ಸರ್ದಾರ್‌ ವಲ್ಲಭ ಭಾಯ್ ಪಟೇಲ್ ಅವರು ಕಂಡ ಕನಸುಗಳನ್ನು ನನಸು ಮಾಡಬೇಕೇ ಹೊರತು ಅವುಗಳನ್ನು ನುಚ್ಚುನೂರು ಮಾಡುವಂತಹ ಕೃತ್ಯಕ್ಕೆ ಇಳಿಯಬಾರದು. ನಿರಂತರ ಚಳವಳಿ ಮೂಲಕ ಅವರು ದೇಶಕ್ಕೆ ದೊರಕಿಸಿಕೊಟ್ಟ ಸ್ವಾತಂತ್ರ್ಯ ಮತ್ತು ಅನುಷ್ಠಾನಕ್ಕೆ ತಂದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಿಕೊಳ್ಳದಿದ್ದರೆ, ನಾವು ಉತ್ತಮ ಪ್ರಜೆಗಳೆಂದು ಹೇಳಿಕೊಳ್ಳಲು ಆಗುವುದಿಲ್ಲ’ ಎಂದರು.

‘ಸಿಎಎ, ಎನ್ಆರ್‌ಸಿ, ಕಾಯ್ದೆ ಜಾರಿಗೊಳಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹದಗೆಡಿಸಲಾಗುತ್ತಿದೆ. ಭವಿಷ್ಯದಲ್ಲಿ ನಾವು ಮಾತನಾಡುವ ಮತ್ತು ಪ್ರಶ್ನಿಸುವ ಸ್ವಾತಂತ್ರ್ಯ ಸಹ ಕಳೆದುಕೊಳ್ಳುತ್ತೇವೆ. ಇಂಥ ಅಪಾಯಕಾರಿ ದಿನಗಳು ಬಾರದಂತೆ ನಾವು ಎಚ್ಚರ ವಹಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಿಕೊಳ್ಳಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ' ಎಂದರು.

‘ಯಾವುದಾದರೂ ವಿಷಯ ಮುಂದಿಟ್ಟುಕೊಂಡು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುವ ಬದಲು ಎಲ್ಲರೂ ಜೊತೆಗೂಡಿ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ಪ್ರದೇಶ, ಪ್ರಗತಿ ಕುರಿತು ಅಂದ ಚೆಂದ ಪದಗಳಲ್ಲಿ ವರ್ಣನೆ ಮಾಡುವ ಬದಲು ವಾಸ್ತವಾಂಶವನ್ನು ಅರಿತು ಅಭಿವೃದ್ಧಿ ಕಾರ್ಯದಲ್ಲಿ ತೊಡಗಬೇಕು' ಎಂದು ಅವರು ಹೇಳಿದರು.

ಅನುದಾನಕ್ಕಾಗಿ ಬಫೆ ಪದ್ಧತಿಯಲ್ಲಿ ನಿಲ್ಲಬೇಕು!: ‘ಬಫೆಯಲ್ಲಿ ನಿಂತು ಸ್ವಲ್ಪ ಸ್ವಲ್ಪ ತೆಗೆದುಕೊಂಡು ಬರುವವರಿಗೆ ಮತ್ತು ಅದನ್ನು ರೂಢಿಸಿಕೊಂಡವರಿಗೆ ಅನುದಾನ ಸಿಗುತ್ತದೆಯೇ ಹೊರತು ನಿಯಮಬದ್ಧವಾಗಿ ಸಾಲಿನಲ್ಲಿ ನಿಂತು ಹಕ್ಕಿನಿಂದ ಕೇಳುವವರಿಗೆ ಅನುದಾನ ಸಿಗುವುದಿಲ್ಲ' ಎಂದು  ಖರ್ಗೆ ವ್ಯಂಗ್ಯವಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು