ನಮ್ಮ ಸಾಧನೆಗಳನ್ನು ನಮ್ಮವರೇ ಅರ್ಥ ಮಾಡಿಕೊಳ್ಳಲಿ

ಮಂಗಳವಾರ, ಏಪ್ರಿಲ್ 23, 2019
33 °C
ಗಾಣಿಗ ಸಮಾಜದ ಸಭೆಯಲ್ಲಿ ಮತಯಾಚಿಸಿದ ಮಲ್ಲಿಕಾರ್ಜುನ ಖರ್ಗೆ

ನಮ್ಮ ಸಾಧನೆಗಳನ್ನು ನಮ್ಮವರೇ ಅರ್ಥ ಮಾಡಿಕೊಳ್ಳಲಿ

Published:
Updated:

ಕಲಬುರ್ಗಿ: ‘50 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್‌ ಸರ್ಕಾರ ಏನು ಸಾಧನೆ ಮಾಡಿದೆ ಎಂದು ವಿರೋಧಿಗಳು ಕೇಳುತ್ತಾರೆ. ಅದಕ್ಕೆ ಉತ್ತರ ಕೊಡಬಹುದು. ಆದರೆ, ಕಾಂಗ್ರೆಸ್ಸಿನವರೇ ಈ ಪ್ರಶ್ನೆ ಕೇಳಿದರೆ ಏನು ಹೇಳುವುದು?’ ಎಂದು ಕಾಂಗ್ರೆಸ್‌ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ಗುರುವಾರ ಜಿಲ್ಲಾ ಗಾಣಿಗರ ಸಂಘದ ಸದಸ್ಯರ ಸಭೆಯಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು, ‘ಕಾಂಗ್ರೆಸ್‌ ಹೆಸರು ಹೇಳಿಕೊಂಡೇ ಸಂಸದ, ಶಾಸಕರಾದವರು, ಜಿಲ್ಲಾ ಪಂಚಾಯಿತಿ ಗದ್ದುಗೆ ಏರಿದ ಕೆಲವರು ಕಾಂಗ್ರೆಸ್‌ ಸಾಧನೆ ಏನೆಂದು ನನ್ನನ್ನೇ ಕೇಳಿದ್ದಾರೆ. ನಮ್ಮ ಸರ್ಕಾರ ಕೆಲಸ ಮಾಡದಿದ್ದರೆ ಇವರು ಆಯ್ಕೆಯಾಗಲು ಸಾಧ್ಯವಿತ್ತೇ?’ ಎಂದು ಪ್ರಶ್ನಿಸಿದರು.

‘ದೇಶ ಇಂದಿಗೂ ಸಶಕ್ತವಾಗಿದೆ ಎಂದರೆ ಅದಕ್ಕೆ ನಮ್ಮ ಸರ್ಕಾರವೇ ಕಾರಣ ಅಲ್ಲವೇ? ಭದ್ರತೆ, ನೀರಾವರಿ, ಕೈಗಾರಿಕೋದ್ಯಮ, ರಾಷ್ಟ್ರೀಯ ಹೆದ್ದಾರಿ, ವೈದ್ಯಕೀಯ ಸೇವೆ, ಶಿಕ್ಷಣ ಕ್ಷೇತ್ರದ ಬೆಳವಣಿಗೆ ಹೀಗೆ ಹೇಳುತ್ತ ಹೋದರೆ ಸಮಯ ಸಾಲುವುದಿಲ್ಲ. ದೆಹಲಿಯಲ್ಲಿ ಕುಳಿತ ಕೆಲವರು ನಮ್ಮವರಿಗೆ ಕುಮ್ಮಕ್ಕು ನೀಡಿ, ನನ್ನ ವಿರುದ್ಧವೇ ಎತ್ತಿಕಟ್ಟುತ್ತಿದ್ದಾರೆ. ಹೀಗಾಗಿ, ಇಂಥ ಪ್ರಶ್ನೆಗಳು ನಮ್ಮವರಲ್ಲೇ ಹುಟ್ಟುತ್ತಿವೆ’ ಎಂದೂ ಖರ್ಗೆ ಹೇಳಿದರು.

‘ಮೇಲ್ವರ್ಗಗಳು ಮಾತ್ರ ಸೌಖ್ಯದಿಂದ ಇರಬೇಕು ಎಂಬುದು ಬಿಜೆಪಿ ಅಜೆಂಡಾ. ಆದರೆ, ಸಮಾಜದ ಎಲ್ಲ ವರ್ಗಗಳಿಗೂ ಸಮಾನ ಪ್ರಾಶಸ್ತ್ಯ ನೀಡುವುದು ಕಾಂಗ್ರೆಸ್‌ ಮಾತ್ರ. ಈ ಭಾಗಕ್ಕೆ ಅನುಕೂಲವಾಗುವ ಇಎಸ್‌ಐ ಆಸ್ಪತ್ರೆ, ಜಯದೇವ, ಕಿದ್ವಾಯಿ ಆಸ್ಪತ್ರೆ, ಮೆಡಿಕಲ್‌ ಕಾಲೇಜು, ಕೇಂದ್ರೀಯ ವಿಶ್ವವಿದ್ಯಾಲಯ, ಬ್ರಿಜ್‌ ಕಂ ಬ್ಯಾರೇಜ್‌... ಇಂಥ ನೂರಾರು ಕೆಲಸ ಮಾಡಿದ್ದೇನೆ. ಅದಕ್ಕಾಗಿ ಮತ ಕೊಡಿ ಎಂದು ಕೇಳುವ ನೈತಿಕತೆ ನನಗಿದೆ. ಆದರೆ, ಭಾವನಾತ್ಮಕವಾಗಿ ಕೆರಳಿಸಿ ಮತ ಕೇಳುವವರಿಗೆ ಏನು ನೈತಿಕತೆ ಇದೆ?’ ಎಂದೂ ಅವರು ಬಿಜೆಪಿ ಅಭ್ಯರ್ಥಿಯನ್ನು ತಿವಿದರು.

ಶಾಸಕ ಡಾ.ಆನಂದಸಿಂಗ್‌ ಮಾತನಾಡಿ, ‘ಖರ್ಗೆ ಅವರು ಈ ಭಾಗಕ್ಕೆ ಮಾಡಿದ ಕೆಲಸ ನೋಡಿದರೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಬೇಕು. ಇಂಥ ಹಿರಿಯರು ಸಂಸತ್ತಿನಲ್ಲಿ ಇದ್ದರೆ ಅದು ಸಂಸತ್ತಿಗೇ ಗೌರವ. ಗಾಣಿಗರನ್ನು ಹಿಂದುಳಿದವರ ಪಟ್ಟಿಗೆ ಸೇರಿಸಿ, ಮೀಸಲಾತಿ ಸಿಗುವಂತೆ ಮಾಡಿದ ಅವರ ಋಣ ತೀರಿಸಲು ಈಗ ಅವಕಾಶ ಸಿಕ್ಕಿದೆ’ ಎಂದರು.

ಶಾಸಕ ಎಂ.ವೈ.ಪಾಟೀಲ, ಗಾಣಿಗ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಅಪ್ಪಾರಾಯಗೌಡ ಪಾಟೀಲ, ಮಹಿಳಾ ಘಟಕದ ಅಧ್ಯಕ್ಷೆ ಸವಿತಾ ಸಜ್ಜನ, ಮುಖಂಡರಾದ ಮಕ್ಬುಲ್‌ ಪಟೇಲ್‌, ಬಸವರಾಜ ಭೀಮಳ್ಳಿ, ಜಿಲ್ಲಾ ಪ್ರಚಾರ ಸಮಿತಿ ಉಪಾಧ್ಯಕ್ಷ ಶ್ಯಾಮರಾವ ಪ್ಯಾಟಿ ಮಾತನಾಡಿದರು.

**

ಕೇಂದ್ರದಲ್ಲಿ ಹಾಗೂ ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರವೇ ಇದೆ. ಆದರೂ ಐದು ವರ್ಷಗಳಿಂದ ರಾಮಮಂದಿರ ನಿರ್ಮಿಸಲಿಲ್ಲ. ಈಗ ಅದನ್ನೇ ಚುನಾಚಣಾ ಅಜೆಂಡಾ ಮಾಡಿದ್ದು ಜನರಿಗೆ ಮಾಡಿದ ದ್ರೋಹ.
–ಆನಂದ ನ್ಯಾಮಗೌಡ, ಶಾಸಕ

**

ಗಾಣಿಗ ಸಮಾಜವನ್ನು ‘2ಎ’ ವರ್ಗಕ್ಕೆ ಸೇರಿಸುವಲ್ಲಿ ಮಲ್ಲಿಕಾರ್ಜುನನ ಖರ್ಗೆ ಹಾಗೂ ಧರ್ಮಸಿಂಗ್‌ ಅವರ ಪ್ರಯತ್ನ ದೊಡ್ಡದು. ಖರ್ಗೆ ಅವರನ್ನು ಗೆಲ್ಲಿಸುವ ಮೂಲಕ ಋಣ ತೀರಿಸಬೇಕಿದೆ.
–ಡಾ.ಅಜಯಸಿಂಗ್‌, ಶಾಸಕ

**
ಒಬ್ಬ ಸಂಸದನಾಗಿ ನಾನು ಎಷ್ಟು ಮಾಡಲು ಸಾಧ್ಯವೋ ಅಷ್ಟು ಕೆಲಸ ಮಾಡಿದ್ದೇನೆ. ಮುಖ್ಯಮಂತ್ರಿ ಆಗಿದ್ದರೆ ಇನ್ನೂ ಹೆಚ್ಚು ಕೆಲಸ ಮಾಡಲು ಸಾಧ್ಯವಾಗುತ್ತಿತ್ತು ಎಂದು ನನಗೂ ಅನ್ನಿಸಿದೆ.
–ಮಲ್ಲಿಕಾರ್ಜುನ ಖರ್ಗೆ, ಸಂಸದ

**
ಜಿಲ್ಲೆಯಲ್ಲಿ ಗಾಣಿಗ ಸಮಾಜದ ಎಲ್ಲ ಕೆಲಸಗಳನ್ನೂ ಮಲ್ಲಿಕಾರ್ಜುನ ಖರ್ಗೆ ಅವರು ಮಾಡಿದ್ದಾರೆ. ರಾಜಕೀಯವಾಗಿ, ಸಂಘಟನಾತ್ಮಕವಾಗಿ ಮಹಿಳೆಯರಿಗೆ ಆದ್ಯತೆ ಕೊಟ್ಟಿದ್ದಾರೆ. ಇಡೀ ಸಮಾಜದ ಬೆಂಬಲ ಅವರಿಗೆ ಇರಲಿ
–ಸವಿತಾ ಸಜ್ಜನ, ಅಧ್ಯಕ್ಷೆ, ಜಿಲ್ಲಾ ಗಾಣಿಗ ಸಮಾಜ

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !