ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀವ್ರ ಅಪೌಷ್ಟಿಕತೆ ನಿವಾರಣೆಗೆ ಮಾ.31 ಗಡುವು

ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳಿಗೆ ಸೂಚನೆ
Last Updated 26 ಡಿಸೆಂಬರ್ 2018, 19:59 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ 80 ಸಾವಿರ ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಆಹಾರ ಆಯೋಗ, 2019ರ ಮಾರ್ಚ್‌ 31ರ ಒಳಗಾಗಿ ಈ ಎಲ್ಲ ಮಕ್ಕಳನ್ನು ಸಾಮಾನ್ಯ ಸ್ಥಿತಿಗೆ ತರಬೇಕು ಎಂದು ಆರೋಗ್ಯ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳಿಗೆ ಗಡುವು ವಿಧಿಸಿದೆ.

‘ತೀವ್ರ ಅಪೌಷ್ಟಿಕತೆ ನಿವಾರಿಸುವ ನಿಟ್ಟಿನಲ್ಲಿ ಸಾಧಿಸಿದ ಪ್ರಗತಿಯನ್ನು ಪ್ರತಿ 15 ದಿನಗಳಿಗೊಮ್ಮೆ ನಮಗೆ ಸಲ್ಲಿಸಬೇಕು. ಈ ವಿಚಾರದಲ್ಲಿ ನಾವೇ ನಿಗಾ ವಹಿಸುತ್ತೇವೆ’ ಎಂದು ಈ ಎರಡೂ ಇಲಾಖೆಗಳಿಗೆ ಆಯೋಗ ಸೂಚನೆ ನೀಡಿದೆ.

‘ಅಪೌಷ್ಟಿಕತೆ ಕುರಿತ ಪ್ರಕರಣ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ಹಂತದಲ್ಲಿದೆ. ಹೀಗಾಗಿ, ಈ ಗಡುವಿನ ಒಳಗೆ ಗುರಿ ಸಾಧಿಸದೇ ಇದ್ದರೆ ರಾಜ್ಯ ಸರ್ಕಾರ ತೀವ್ರ ಮುಖಭಂಗ ಅನುಭವಿಸಬೇಕಾದೀತು’ ಎಂಬ ಅಂಶವನ್ನು ರಾಜ್ಯ ಮುಖ್ಯ ಕಾರ್ಯದರ್ಶಿ (ಸಿ.ಎಸ್‌) ಟಿ.ಎಂ. ವಿಜಯಭಾಸ್ಕರ್‌ ಅವರ ಗಮನಕ್ಕೆ ತರಲು ಕೂಡಾ ಆಯೋಗ ಮುಂದಾಗಿದೆ.

ಅಪೌಷ್ಟಿಕತೆ ನಿವಾರಿಸುವ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಈವರೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಕಿಡಿಕಾರಿರುವ ಆಯೋಗ, ‘ಕೇವಲ ಸುತ್ತೋಲೆ, ಆದೇಶಗಳಿಂದ ಬದಲಾವಣೆ ಸಾಧ್ಯವಿಲ್ಲ. ಅವುಗಳನ್ನು ಪಾಲಿಸದೇ ಇರುವುದರಿಂದಲೇ ಈ ಇಲಾಖೆಯಲ್ಲಿ ಅವ್ಯವಸ್ಥೆ ಮುಂದುವರಿದಿದೆ. ಜಿಲ್ಲಾಮಟ್ಟದ ಉಪ ನಿರ್ದೇಶಕರು, ತಾಲ್ಲೂಕುಮಟ್ಟದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು (ಸಿಡಿಪಿಓ) ಮತ್ತು ಮೇಲ್ವಿಚಾರಕರು ತಮಗೆ ವಹಿಸಿದ ಕರ್ತವ್ಯಗಳನ್ನು ಸಮರ್ಪಕವಾಗಿ ನಿಭಾಯಿಸಿದರೆ ಮಾತ್ರ ಕೇಂದ್ರ– ರಾಜ್ಯ ಸರ್ಕಾರಗಳ ಉದ್ದೇಶ ಈಡೇರಲು ಸಾಧ್ಯ’ ಎಂದು ಆಯೋಗ ಅಭಿಪ್ರಾಯಪಟ್ಟಿದೆ.

ಅಂಗನವಾಡಿಗಳಿಗೆ ಆರು ವರ್ಷದ ಒಳಗಿನ ಮಕ್ಕಳು ಬರುತ್ತಿದ್ದು, ಈ ವಯೋಮಾನದಲ್ಲಿ ಈ ಮಕ್ಕಳಿಗೆ ಕಾಯ್ದೆಯಲ್ಲಿ ರೂಪಿಸಿದ ಪೌಷ್ಟಿಕಾಂಶ ಸಿಗುವುದು ಅತಿಅವಶ್ಯ. ಅಪೌಷ್ಟಿಕ ಮಕ್ಕಳು ಭವಿಷ್ಯದಲ್ಲಿ ಸಮಾಜಕ್ಕೆ ಹಾಗೂ ದೇಶಕ್ಕೆ ಹೊರೆ. ಅಪೌಷ್ಟಿಕತೆಯಿಂದ ಯಾವುದೇ ಮಗು ನರಳುತ್ತಿದ್ದರೆ ಅದನ್ನು ಇಲಾಖೆಯ ಕರ್ತವ್ಯ ಚ್ಯುತಿ ಎಂದೇ ಭಾವಿಸಬೇಕಾಗುತ್ತದೆ ಎಂದೂ ಆಯೋಗ ಹೇಳಿದೆ.

ತೀವ್ರ ಅಪೌಷ್ಟಿಕತೆಯಿಂದ ಬಳುತ್ತಿರುವ ಮಕ್ಕಳ ಆರೈಕೆಗಾಗಿ ಜಿಲ್ಲಾಮಟ್ಟದಲ್ಲಿ ಮಕ್ಕಳ ಆರೋಗ್ಯ ಪುನಃಶ್ಚೇತನ ಕೇಂದ್ರಗಳನ್ನು (ಎನ್‌ಆರ್‌ಸಿ) ಸ್ಥಾಪಿಸಲಾಗಿದೆ. ಆದರೆ, ಈ ಕೇಂದ್ರಗಳಲ್ಲಿರುವ ಸವಲತ್ತುಗಳನ್ನು ಪೂರ್ಣ ಪ್ರಮಾಣದಲ್ಲಿ ಉಪಯೋಗಿಸಿಕೊಂಡಿಲ್ಲ. ಇಲ್ಲಿ ಚಿಕಿತ್ಸೆಗೆ ದಾಖಲಾಗುವ ಮಕ್ಕಳು ಶೇ 95ರಷ್ಟು ಆಯಾ ಆಸ್ಪತ್ರೆಗಳ ಹೊರರೋಗಿಗಳ ವಿಭಾಗದಿಂದ ಗುರುತಿಸಲ್ಪಟ್ಟಿವೆ. ತೀವ್ರ ಅಪೌಷ್ಟಿಕತೆಯಿಂದ ಬಳುತ್ತಿರುವ ಹಾಗೂ ಸಾಮಾನ್ಯ ಅಪೌಷ್ಟಿಕತೆಯಿಂದ ಬಳುತ್ತಿರುವ ಮಕ್ಕಳ ಸಂಖ್ಯೆ ಒಟ್ಟು ಮಕ್ಕಳ ಸಂಖ್ಯೆಯ ಶೇ 25ರಿಂದ 30ರಷ್ಟಿದೆ ಎನ್ನುವುದು ಇಲಾಖೆ ನೀಡಿದ ಅಂಕಿ–ಅಂಶಗಳಿಂದಲೇ ಸ್ಪಷ್ಟವಾಗುತ್ತದೆ.

‘ಮೊದಲ ಹಂತದಲ್ಲಿ ತೀವ್ರ ಅಪೌಷ್ಟಿಕತೆಯಿಂದ ನರಳುತ್ತಿರುವ ಎಲ್ಲ ಮಕ್ಕಳನ್ನು ಸಾಮಾನ್ಯ ಸ್ಥಿತಿಗೆ ತರುವುದು ಪ್ರಥಮ ಆದ್ಯತೆ ಆಗಬೇಕು. ಇದಕ್ಕೆ ಆರೋಗ್ಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜೊತೆಯಾಗಿ ಕಾರ್ಯನಿರ್ವಹಿಸಬೇಕು. ಸಾವಿರಾರು ಸಂಖ್ಯೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರು ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ ಈ ಅಂಶವನ್ನು ನಿರ್ಲಕ್ಷಿಸಲಾಗಿದೆ. ಇದು ಗಂಭೀರ ಸಂಗತಿಯಾಗಿದ್ದು, ಇದಕ್ಕೆ ಎರಡೂ ಇಲಾಖೆಗಳು ಜವಾಬ್ದಾರ’ ಎಂದೂ ಆಯೋಗ ಚಾಟಿ ಬೀಸಿದೆ.

**

ಅಪೌಷ್ಟಿಕ ಮಕ್ಕಳನ್ನು ಗುರುತಿಸಿ ಸಾಮಾನ್ಯ ಸ್ಥಿತಿಗೆ ತರುವ ಕೆಲಸ ತುರ್ತಾಗಿ ಆಗಬೇಕಿದೆ. ಈ ನಿಟ್ಟಿನಲ್ಲಿ ಅಂಗನವಾಡಿಗಳು ಸಮರ್ಪಕವಾಗಿ ಕೆಲಸ ನಿರ್ವಹಿಸಬೇಕು
–ಡಾ.ಎನ್. ಕೃಷ್ಣಮೂರ್ತಿ, ಅಧ್ಯಕ್ಷ, ರಾಜ್ಯ ಆಹಾರ ಆಯೋಗ

**

ಮುಖ್ಯಾಂಶಗಳು

15 ದಿನಗಳಿಗೊಮ್ಮೆ ವರದಿ ಸಲ್ಲಿಸಲು ಸೂಚನೆ

ಶೇ 30ರಷ್ಟು ಮಕ್ಕಳಲ್ಲಿ ಅಪೌಷ್ಟಿಕತೆ

ಸುತ್ತೋಲೆ, ಆದೇಶದಿಂದ ಉದ್ದೇಶ ಈಡೇರಲ್ಲ–ಆಯೋಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT