ಮಹಿಳೆಯರು ಬರೀ ಧಾರಾವಾಹಿ ಜೀವಿಗಳೇ?

ಮಂಗಳವಾರ, ಮಾರ್ಚ್ 19, 2019
21 °C

ಮಹಿಳೆಯರು ಬರೀ ಧಾರಾವಾಹಿ ಜೀವಿಗಳೇ?

Published:
Updated:

ಮಾರುಕಟ್ಟೆ ಕೇಂದ್ರಿತ ಯುಗದಲ್ಲಿ ಗ್ರಾಹಕನೇ ಬಂಡವಾಳ, ಉತ್ಪಾದಕ ಹಾಗೂ ಪ್ರೇರಕನೂ ಹೌದು. ಪ್ರಚಾರಕ್ಕಾಗಿ, ಆಕರ್ಷಣೆ, ಗ್ಲಾಮರ್‌, ಮಾದಕತೆಯನ್ನು ಸಮಪ್ರಮಾಣದಲ್ಲಿ ಬೆರೆಸಿ ಪ್ರದರ್ಶನಕ್ಕಿಡಲು, ಹಾಗೆ ಪ್ರದರ್ಶನಕ್ಕಿಟ್ಟ ವಸ್ತುಗಳು ಇನ್ನಿಲ್ಲದಂತೆ ಲಾಭ ತಂದುಕೊಡಲು ಜಾಹೀರಾತುಗಳು ಬಹಳ ಮುಖ್ಯ. ಧಾರಾವಾಹಿಗಳೂ ಪ್ರಭಾವಶಾಲಿ ಮಾಧ್ಯಮವಾಗಿ ಇದೇ ಬಗೆಯ ಆಕರ್ಷಣೆ; ಇದೇ ಸೂತ್ರದ ಮೇಲೆ ತಯಾರಾಗುತ್ತಿರುವುದು ವಿಷಾದನೀಯ.

ಧಾರಾವಾಹಿಗಳು ಮೊದಮೊದಲು ವಾರಕ್ಕೊಮ್ಮೆ ಪ್ರಸಾರ ಕಂಡು ನಂತರ ದಿನಕ್ಕೊಮ್ಮೆ ಪ್ರಸಾರ ಕಾಣತೊಡಗಿದಾಗ ಮಂದಿ ಎಡೆಬಿಡದೇ ವೀಕ್ಷಿಸತೊಡಗಿದ್ದು ಅಚ್ಚರಿಯೇ ಹೌದು. ಅದರಲ್ಲೂ ಧಾರಾವಾಹಿಗಳೆಂದರೆ ಮಹಿಳೆಯರು; ಮಹಿಳೆಯರೆಂದರೆ ಕಣ್ಣೆವೆ ಮಿಟುಕಿಸದೆ ಟೀವಿ ಮುಂದೆ ಪಟ್ಟಾಗಿ ಕೂರುವ ಧಾರಾವಾಹಿಜೀವಿಗಳೆಂಬ ಹಣೆಪಟ್ಟಿ ಸುಲಭವಾಗಿ ಸ್ತ್ರೀಯರಿಗೆ ಅಂಟಿಕೊಂಡುಬಿಟ್ಟಿತು.

ಹಾಗಾಗಿ ಈ ಧಾರಾವಾಹಿಗಳು ಸ್ತ್ರೀಯರನ್ನೇ ಗಮನದಲ್ಲಿಟ್ಟುಕೊಂಡು ನಿರ್ಮಾಣವಾಗುತ್ತಿರುವುದು, ರಭಸ ಹಾಗೂ ಸ್ಫೋಟಕೀಯ ಬದಲಾವಣೆ ಹಾಗೂ ರಂಜನೆ ತರಲು ಸ್ತ್ರೀ ಬಳಕೆಯಾಗುತ್ತಿರುವುದು ಮಾತ್ರ ನಾಗರಿಕ ಸಮಾಜಕ್ಕೆ ಅಗೌರವ ತರುವಂಥದ್ದು. ಸ್ತ್ರೀಯನ್ನು ಅಲಂಕಾರದ ಬೊಂಬೆಯನ್ನಾಗಿ ನಿಲ್ಲಿಸಿ ಗ್ಲಾಮರ್‌ ಪರಾಕಾಷ್ಠೆಯನ್ನು ವೈಭವೀಕರಿಸುತ್ತಾ, ಯಶಸ್ಸಿನ ತಂತ್ರ ಎನ್ನುವ ಧಾರಾವಾಹಿಗಳು ಮಹಿಳೆಯ ಜ್ಞಾನ, ಸಮ್ಮಾನವನ್ನು ನಿರ್ಲಕ್ಷಿಸಿ ಗೌರವಕ್ಕೆ ಧಕ್ಕೆ ತರುತ್ತಿರುವುದಂತೂ ಸತ್ಯ. ಸ್ತ್ರೀದೇಹವನ್ನು ಹೇಗ್ಹೇಗೋ ಉಪಯೋಗಿಸುವುದರ ಜೊತೆಗೆ, ಅದರ ಹಿಂದಿನ ಹುನ್ನಾರವಿರುವುದು ಸ್ತ್ರೀಯನ್ನು ವ್ಯಕ್ತಿಯನ್ನಾಗಿ ಕಾಣದ, ಆ ವ್ಯಕ್ತಿತ್ವಕ್ಕೆ ಗೌರವವಿರದ, ಬುದ್ಧಿ ಭಾವಗಳಿಗೆ ಮನ್ನಣೆಯಿಲ್ಲದ, ಸಮಾಜದ ಸ್ವಾಸ್ಥ್ಯಕ್ಕೆ ಆಕೆ ಅಭೂತ ಕೊಡುಗೆ ನೀಡುತ್ತಿದ್ದರೂ ಅದನ್ನು ಹಾಳುಗೆಡುಹುವ, ಮಾತೃಸ್ವರೂಪಿಗಳನ್ನು ಕೀಳಾಗಿ ಕಾಣುತ್ತಿರುವ ಮನಸ್ಸುಗಳು.

ತಮ್ಮ ಕಲೆ, ಪ್ರತಿಭೆಯನ್ನು ಎಲ್ಲಾ ಕೋನಗಳಲ್ಲೂ ಸಾಬೀತುಪಡಿಸಿಕೊಳ್ಳುವ ಅವಕಾಶವಿದ್ದಾಗಲೂ ಆ ನಿಟ್ಟಿನಲ್ಲಿ ಕೆಲವೊಮ್ಮೆ ಮನಸ್ಸು ಮಾಡದ ಧಾರಾವಾಹಿ ಮಾಧ್ಯಮ, ಪೂರ್ಣಪ್ರಮಾಣದಲ್ಲಿ ಮಹಿಳೆಗೆ ನ್ಯಾಯವಿತ್ತಿದೆಯೆಂದು ಹೇಳಲಾಗದು. ಅಲ್ಲಿ ಅಡಗಿರುವುದೂ ಮಾರುಕಟ್ಟೆ ತಂತ್ರ.

ಅಶ್ಲೀಲ, ಅಸಭ್ಯ, ದ್ವಂದ್ವಾರ್ಥ ಸಂಭಾಷಣೆಗಳು ಮನಸಿಗೆ ಅಪಘಾತವೆನಿಸುವ ಕ್ರೂರ ಸನ್ನಿವೇಶಗಳು, ಢಾಳು ಢಾಳು ಅಲಂಕಾರಗಳು, ಮನೆಮುರುಕ ಪಾತ್ರಗಳು, ಒಬ್ಬರ ಮೇಲೊಬ್ಬರು ವಿಷ ಕಾರುವ ದೃಶ್ಯಗಳು, ವಿಪರೀತವಾಗಿ ಹೆಣ್ಣನ್ನ ಹೆಣ್ಣಿಗೇ ಶತ್ರುವನ್ನಾಗಿಸಿ ತಮಾಷೆ ನೋಡುವ ಮನಸ್ಥಿತಿಗಳು ಇವೆಲ್ಲವುಗಳ ಹಿಂದಿವೆ.

ಪ್ರತಿ ಹಂತಗಳಲ್ಲೂ ಹುನ್ನಾರ ಹೊಸೆಯುತ್ತ, ಮನೆಯ ಪ್ರತಿಯೊಬ್ಬರ ಮೇಲೂ ಎಗರಾಡುವ, ಕೆಡುಕನ್ನೇ ಬಯಸುವ ಹೆಣ್ಣಿನ ಪಾತ್ರಗಳ ಸೃಷ್ಟಿ ಈ ಕಾಲದ ಬಹು ದೊಡ್ಡ ವ್ಯಂಗ್ಯ. ಸಾರ್ವಜನಿಕ ಬದುಕಿನಲ್ಲಿ ಜರುಗುವ ಘಟನೆಗಳೇ ತೆರೆಯ ಮೇಲೆ ಪುನರ್ ಸೃಷ್ಟಿಯಾಗುತ್ತವೆ ಎನ್ನುವ ಹುಸಿ ಸುಳ್ಳನ್ನೇ ತಂತ್ರವನ್ನಾಗಿಸಿಕೊಂಡು ಈ ಋಣಾತ್ಮಕ ಪರಿಣಾಮ ಬೀರುವ ಅಂಶಗಳಿಗೆ ಸ್ತ್ರೀಯರನ್ನು ದಾಳವಾಗಿಸಿಕೊಂಡು ಪರದೆಯಲ್ಲಿ ಚಿತ್ರಿಸಲಾಗುತ್ತಿದೆ. ಕ್ರೂರತೆ ಹಾಗೂ ಕುತಂತ್ರಗಳು ಸಮಾಜದಲ್ಲಿ ಘಟಿಸುತ್ತಿದ್ದರೂ ಅದಕ್ಕೆಲ್ಲಾ ಹೊಣೆ ಹೆಣ್ಣು ಮಾತ್ರ ಆಗಿರಲು ಹೇಗೆ ಸಾಧ್ಯ? ಇದರ ಹಿಂದಿರುವುದು ಎಲ್ಲಾ ಕ್ಷೇತ್ರದ ಮೇಲೂ ಹಿಡಿತವಿರಬೇಕೆನ್ನುವ ಗಂಡಿನ ಮನಸ್ಥಿತಿ ಹಾಗೂ ನಗದಾಗಿಸಿಕೊಳ್ಳುವ ವ್ಯಾಪಾರಿ ಮನೋಭಾವ. ಅದೇ ಮನೋಧರ್ಮವನ್ನು ಆವಾಹಿಸಿಕೊಂಡ ಮಹಿಳೆಯ ಮನೋವೃತ್ತಿಯ ಪರಿಣಾಮ.

ಒಟ್ಟಿನಲ್ಲಿ ಕೆಲವು ಧಾರಾವಾಹಿಗಳನ್ನು ಹೊರತುಪಡಿಸಿದರೆ ಹೆಣ್ಣನ್ನು ಚಿತ್ರಿಸುವ ಪರಿ ಗೌರವದಿಂದ ಕೂಡಿಲ್ಲ. ಅಗತ್ಯವಿಲ್ಲದ ಪಾತ್ರಗಳು, ಅನವಶ್ಯಕ ಸನ್ನಿವೇಶಗಳನ್ನು ಕಂಡು ಮಹಿಳೆಯರು–ಮಕ್ಕಳು ದಿಗ್ಭ್ರಾಂತರಾದರೂ ಅನಿರ್ವಾಯವಾಗಿ (ದುಷ್ಟ) ಮನೋರಂಜನೆಯ ರೂಪದಲ್ಲಿ ಕಾಣುತ್ತಿರುವುದು ವಿಷಾದ. ಕಿರುತೆರೆಗಳೇ ಮಹಿಳೆಯ ಬೌದ್ಧಿಕ ಹಾಗೂ ಮಾನಸಿಕ ವಿಕಾಸಕ್ಕೆ ಧಕ್ಕೆ ತರುತ್ತಿರುವುದು ವಿಪರ್ಯಾಸ.

ಇತ್ತೀಚೆಗೆ ಮಕ್ಕಳನ್ನೂ ಎಳೆದುತಂದು ಅದರಲ್ಲೂ ಹೆಣ್ಣುಮಕ್ಕಳ ಚರಿಷ್ಮಾವನ್ನು ನಿರ್ಭೀಡೆಯಿಂದ ನಿಸ್ಸಂಕೋಚವಾಗಿ ಪ್ರದರ್ಶಿಸುವ, ಮತ್ತೆ ಮತ್ತೆ ಮಹಿಳೆಯರು ಮಕ್ಕಳನ್ನು ಅದೇ ಅನಾರೋಗ್ಯಕರ ವ್ಯಕ್ತಿತ್ವಹೀನ ಬಲೆಯೊಳಗೆ ಸಿಲುಕಿಸುವ ಸಂಚು ವ್ಯಾಪಕವಾಗಿ ನಡೆಯುತ್ತಿದೆ ಎನ್ನುವುದರಲ್ಲಿ ಸಂಶಯವಿಲ್ಲ.

ಲೇಖಕಿ ಶಿಕ್ಷಕಿ, ಕವಯಿತ್ರಿ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !