ಕ್ರಿಮಿನಲ್‌ ಒಳಸಂಚು ಆರೋಪದಲ್ಲಿ ಬಂಧಿತ ತಸ್ಲೀಮ್‌ಗೆ ಬಿಜೆಪಿ ನಂಟು

7
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ ಚಿತ್ರಗಳು

ಕ್ರಿಮಿನಲ್‌ ಒಳಸಂಚು ಆರೋಪದಲ್ಲಿ ಬಂಧಿತ ತಸ್ಲೀಮ್‌ಗೆ ಬಿಜೆಪಿ ನಂಟು

Published:
Updated:

ಮಂಗಳೂರು: ಕ್ರಿಮಿನಲ್‌ ಒಳಸಂಚು ನಡೆಸಿರುವ ಆರೋಪದ ಮೇಲೆ ದೆಹಲಿ ಪೊಲೀಸರಿಂದ ಬಂಧಿತನಾಗಿರುವ ಕೇರಳದ ಕಾಸರಗೋಡು ಜಿಲ್ಲೆಯ ಚೆಂಬರಿಕ ನಿವಾಸಿ ಮುಹತಾಸಿಮು ಸಿ.ಎಂ. ಅಲಿಯಾಸ್‌ ತಸ್ಲೀಂ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದ ಎಂಬುದು ಈಗ ಬಹಿರಂಗವಾಗಿದೆ.

ಆರೋಪಿಯು ಕೇರಳದ ಬಿಜೆಪಿ ಮುಖಂಡರು ಹಾಗೂ ರಾಜ್ಯದ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ಮುಖಂಡ ರಹೀಂ ಉಚ್ಚಿಲ್‌ ಸೇರಿದಂತೆ ಹಲವರೊಂದಿಗೆ ಇರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ತಸ್ಲೀಮ್‌ ಕೆಲವು ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರಿಯನಾಗಿದ್ದ ಎಂಬುದು ಗೊತ್ತಾಗಿದೆ.

ಇದನ್ನೂ ಓದಿ: ದಕ್ಷಿಣ ಭಾರತ ಪ್ರಮುಖ ನಾಯಕರ ಹತ್ಯೆಗೆ ಸಂಚು: ತಸ್ಲೀಮ್ ಸಹಚರರ ಪತ್ತೆಗೆ ಹುಡುಕಾಟ

ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಕಾಸರಗೋಡು ಜಿಲ್ಲೆಯ ಉದುಮ ಮಂಡಲ ಘಟಕದಲ್ಲಿ ಮೂರು ವರ್ಷಗಳ ಹಿಂದೆ ಸಕ್ರಿಯವಾಗಿದ್ದ. ಕೆಲವು ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದ್ದ. ಕಳೆದ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ ಪರವಾಗಿ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ತಸ್ಲೀಮ್‌ ಜೊತೆಗಿನ ಸಂಪರ್ಕದ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ರಹೀಂ ಉಚ್ಚಿಲ್‌, ‘ಮೂರು ವರ್ಷದ ಹಿಂದೆ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದಿಂದ ಆಯೋಜಿಸಿದ್ದ ಕಾರ್ಯಾಗಾರವೊಂದರಲ್ಲಿ ತಸ್ಲೀಮ್‌ ಕೂಡ ಪಾಲ್ಗೊಂಡಿದ್ದ. ಆ ದಿನ ನನಗೆ ಪರಿಚಿತನಾಗಿದ್ದ. ಆ ಬಳಿಕ ಹಲವು ಬಾರಿ ಮಾತನಾಡಿದ್ದ’ ಎಂದರು.

ಚೆಂಬರಿಕದ ಖಾಜಿ ಸಿ.ಎಂ.ಉಸ್ತಾದ್‌ ಎಂಬುವವರು ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಾಗ ತನಿಖೆಗೆ ಆಗ್ರಹಿಸಿ ಆತ ಹೋರಾಟ ನಡೆಸಿದ್ದ. ಆ ಸಂದರ್ಭದಲ್ಲಿ ಬಿಜೆಪಿಯ 15 ಹಿರಿಯ ಮುಖಂಡರ ನಿಯೋಗವನ್ನು ಖಾಝಿಯವರ ಮನೆಗೆ ಕರೆದೊಯ್ದಿದ್ದ. ಆ ಫೋಟೊಗಳೇ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಹೋಟೆಲ್‌ ಒಂದರಲ್ಲಿ ಊಟ ಮಾಡುತ್ತಿದ್ದಾಗ ಬಂದು ತನ್ನೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದ. ಆ ಚಿತ್ರವೂ ಸೇರಿದೆ ಎಂದು ಹೇಳಿದರು.

ತನಿಖೆಗೆ ಆಗ್ರಹ

‘ತಸ್ಲೀಮ್‌ ವಿರುದ್ಧ ಯಾವ ಪ್ರಕರಣ ದಾಖಲಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿ ಗೊತ್ತಿಲ್ಲ. ಆತ ಐಎಸ್‌ನಂತಹ ಭಯೋತ್ಪಾದಕ ಸಂಘಟನೆ ಜೊತೆ ನಂಟು ಹೊಂದಿರುವುದು ಹೌದಾದಲ್ಲಿ ಉನ್ನತಮಟ್ಟದ ತನಿಖೆ ನಡೆಸಬೇಕು. ಸತ್ಯಾಂಶ ಏನು ಎಂಬುದು ಬಹಿರಂಗವಾಗಬೇಕು’ ಎಂದು ರಹೀಂ ಆಗ್ರಹಿಸಿದರು.

ಒಳಸಂಚು ಆರೋಪ

ತಸ್ಲೀಮ್‌ ಬಂಧನದ ಕುರಿತು ಕಾಸರಗೋಡು ಜಿಲ್ಲಾ ಪೊಲೀಸರಿಗೂ ಸ್ಪಷ್ಟವಾದ ಮಾಹಿತಿ ಇಲ್ಲ. ಕ್ರಿಮಿನಲ್‌ ಕೃತ್ಯವೊಂದಕ್ಕೆ ಸಂಬಂಧಿಸಿದಂತೆ ಒಳಸಂಚು ನಡೆಸಿದ ಆರೋಪದ ಮೇಲೆ ದೆಹಲಿಯಲ್ಲಿ ಪ್ರಕರಣ ದಾಖಲಾಗಿದೆ ಎಂಬ ಮಾಹಿತಿಯನ್ನಷ್ಟೇ ದೆಹಲಿ ಪೊಲೀಸರು ತಮ್ಮೊಂದಿಗೆ ಹಂಚಿಕೊಂಡಿದ್ದಾರೆ ಎಂದು ಕಾಸರಗೋಡು ಎಸ್‌ಪಿ ಡಾ.ಎ.ಶ್ರೀನಿವಾಸ್‌ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 1

  Sad
 • 1

  Frustrated
 • 2

  Angry

Comments:

0 comments

Write the first review for this !