18 ವರ್ಷಗಳಿಂದ ನಿರಾಹಾರ ಜೀವನ!

7
ಗಾಳಿ–ಬಿಸಿಲೇ ಆಹಾರ; ವಾರಕ್ಕೊಮ್ಮೆ ಎರಡು ಲೀಟರ್ ನೀರು ಮಾತ್ರ ಸೇವನೆ

18 ವರ್ಷಗಳಿಂದ ನಿರಾಹಾರ ಜೀವನ!

Published:
Updated:
Deccan Herald

ಕಾರವಾರ: ಆರೋಗ್ಯವಂತ ಮಾನವ ಆಹಾರವನ್ನೇ ಸೇವಿಸದೆ 21 ದಿನಗಳವರೆಗೆ ಜೀವಿಸಬಹುದು ಎನ್ನುತ್ತದೆ ವಿಜ್ಞಾನ. ಆದರೆ, ಇಲ್ಲೊಬ್ಬರು 18 ವರ್ಷಗಳಿಂದ ನಿರಾಹಾರಿಯಾಗಿ ಅಚ್ಚರಿ ಮೂಡಿಸಿದ್ದಾರೆ.

ಅಮೆರಿಕದ ಎಲಿ ಟಾಮ್ ಎಂಬುವವರು ಈ ಕಾರಣದಿಂದ ಸುದ್ದಿಯಲ್ಲಿದ್ದಾರೆ. ಕುಮಟಾ ತಾಲ್ಲೂಕಿನ ಕಡ್ಲೆ ಗ್ರಾಮದ ಅಶ್ವಿನಿ ಆಯುರ್ವೇದಿಕ್ ಕೇಂದ್ರಕ್ಕೆ ಒಂದು ವಾರದ ಹಿಂದೆ ಬಂದಿರುವ ಅವರು, ಕುತೂಹಲದ ಕೇಂದ್ರವಾಗಿದ್ದಾರೆ.

ತಾನು ಇದ್ದಕ್ಕಿದ್ದಂತೆ ಆಹಾರ ಸೇವನೆ ಬಿಟ್ಟಿಲ್ಲ, ಹಂತಹಂತವಾಗಿ ನಿಲ್ಲಿಸಿದ್ದಾಗಿ ಹೇಳುವ ಅವರು, ಆರಂಭದಲ್ಲಿ ವಾರಕ್ಕೆ ಒಂದು ದಿನ ಮಾತ್ರ ಉಪವಾಸ ಮಾಡಿದರಂತೆ. ಬಳಿಕ ವಾರಕ್ಕೆ ಎರಡು ದಿನ ನಿರಾಹಾರಿಯಾದರು. ಹೀಗೆ ರೂಢಿಯಾದ ಬಳಿಕ ವಾರಕ್ಕೆ ಮೂರು ದಿನ ಉಪವಾಸವಿದ್ದು, 4–5 ವರ್ಷಗಳಾಗುವಾಗ ವಾರಕ್ಕೆ ಆರು ದಿನ ಆಹಾರ ತ್ಯಜಿಸಿದರಂತೆ. ಹೀಗೆ ವಿಶಿಷ್ಟ ಹವ್ಯಾಸ ರೂಢಿಸಿಕೊಂಡು 18 ವರ್ಷಗಳಾದವು. ತನಗೆ ಕೇವಲ ಗಾಳಿ ಮತ್ತು ಸೂರ್ಯನ ಬಿಸಿಲೇ ಆಹಾರದಂತೆ ಎನ್ನುತ್ತಾರೆ ಅವರು.

ಅವರ ಈ ಹಟಸಾಧನೆಯ ಬಗ್ಗೆ ಆಯುರ್ವೇದಿಕ್ ಕೇಂದ್ರದ ವೈದ್ಯ ಡಾ.ರವಿರಾಜ್ ಕಡ್ಲೆ ಅವರೂ ಆಶ್ಚರ್ಯ ವ್ಯಕ್ತಪಡಿಸುತ್ತಾರೆ.

‘ನಾನು ಅವರ ಈ ಜೀವನ ಕ್ರಮವನ್ನು ವೈಯಕ್ತಿಕವಾಗಿ ಒಪ್ಪುವುದಿಲ್ಲ. ನಮ್ಮ ಪುರಾಣಗಳಲ್ಲಿ ಋಷಿ ಮುನಿಗಳು ಹೀಗೆಯೇ ಉಪವಾಸ ಇರುತ್ತಿದ್ದರು ಎಂಬುದನ್ನು ಕೇಳಿದ್ದೇವೆ. ಹಾಗಾಗಿ ಟಾಮ್ ಮಾಡುತ್ತಿರುವುದು ಅಸಾಧ್ಯ ಎಂದೂ ಹೇಳುವುದಿಲ್ಲ. ಅವರ ಮಾತುಗಳನ್ನು, ದಿನಚರಿಯನ್ನು ಗಮನಿಸಿದಾಗ ನನಗೆ ಕಪಟ ಕಾಣಲಿಲ್ಲ’ ಎನ್ನುತ್ತಾರೆ.

‘ಈಚೆಗೆ 10 ತಿಂಗಳ ಹಿಂದೆ ಒಮ್ಮೆ ಬಲವಂತವಾಗಿ ಸ್ವಲ್ಪವೇ ಆಹಾರ ಸೇವಿಸಿದ್ದಾಗಿ ಹೇಳಿದ್ದಾರೆ. ಅದರ ಹೊರತಾಗಿ, ದೇಹದೊಳಗಿನ ಕಲ್ಮಶವನ್ನು ಹೊರಹಾಕಲು ವಾರಕ್ಕೊಮ್ಮೆ 2 ಲೀಟರ್ ನೀರು ಸೇವಿಸುತ್ತಾರೆ’ ಎಂದು ಅವರು ಹೇಳುತ್ತಾರೆ.

ಪ್ರಾಣಾಯಾಮದಿಂದ ಸಾಧ್ಯವಾಯಿತು...’

‘ನಮ್ಮ ದೇಹವು ಮಿದುಳಿನ ಮಾತನ್ನು ಕೇಳುತ್ತದೆ. ಉಪವಾಸಕ್ಕೂ ಮೊದಲು ಮಿದುಳು ಅದಕ್ಕೆ ಸಿದ್ಧವಾಗುವಂತೆ ಮಾಡಬೇಕು. ಇದು ನನಗೆ ಪ್ರಾಣಾಯಾಮದಿಂದ ಸಾಧ್ಯವಾಗಿದೆ’ ಎನ್ನುತ್ತಾರೆ 50ರ ಹರೆಯದ ಟಾಮ್.

‘18 ವರ್ಷದ ಹಿಂದೆ ಅನಾರೋಗ್ಯ ಕಾಣಿಸಿಕೊಂಡಾಗ ಮಾಂಸಾಹಾರವನ್ನು ಬಿಟ್ಟೆ. ನಂತರ ಸಸ್ಯಾಹಾರ, ದ್ರವ ಆಹಾರವನ್ನೂ ತ್ಯಜಿಸಿದೆ. ಮಿದುಳಿನ ನಿಗ್ರಹದಿಂದ ಇದೆಲ್ಲ ಸಾಧ್ಯ. ಧ್ಯಾನದ ಮೂಲಕ ನಾನು ನನ್ನ ಮನಸ್ಸನ್ನು ನಿಯಂತ್ರಿಸಿಕೊಂಡಿದ್ದೇನೆ’ ಎನ್ನುತ್ತಾರೆ ಅವರು.

ಸವಾಲಿಗೆ ಒಪ್ಪಿಗೆ!

‘ಟಾಮ್ ಅವರು ‘ಕಾಯಕಲ್ಪ’ ಚಿಕಿತ್ಸೆ ಪಡೆಯಲು ನಮ್ಮ ಕೇಂದ್ರಕ್ಕೆ ಬಂದಿದ್ದಾರೆ. ಇನ್ನೊಂದು ವಾರ ಇಲ್ಲಿರುತ್ತಾರೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದ ಡಾ.ರವಿರಾಜ್ ಕಡ್ಲೆ, ‘ಅವರು ಇರುವ ಕೊಠಡಿಗೆ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸುವುದಾಗಿ ಸವಾಲು ಹಾಕಿದೆ. ಅದಕ್ಕವರು ಒಪ್ಪಿಕೊಂಡಿದ್ದಾರೆ. ಅವರ ಜೀವನಕ್ರಮ ಆಶ್ಚರ್ಯ ತರಿಸಿದೆ’ ಎಂದು ಹೇಳಿದರು.

 

Tags: 

ಬರಹ ಇಷ್ಟವಾಯಿತೆ?

 • 24

  Happy
 • 3

  Amused
 • 0

  Sad
 • 2

  Frustrated
 • 2

  Angry

Comments:

0 comments

Write the first review for this !