ಭಾರೀ ಮಳೆ, ಭೂಕುಸಿತದಲ್ಲಿ ಐದು ಕುಟುಂಬದ ಪ್ರಾಣ ಉಳಿಸಿದ ಯುವಕ

ಸೋಮವಾರಪೇಟೆ: ಭಾರಿ ಮಳೆ, ಭೂಕುಸಿತದ ವೇಳೆ ಇಗ್ಗೋಡ್ಲು ಗ್ರಾಮದ ಯುವಕ ಐದು ಕುಟುಂಬದವರ ಪ್ರಾಣರಕ್ಷಿಸಿ ನಿಜ ಜೀವನದಲ್ಲಿ ಹೀರೊ ಆಗಿದ್ದಾನೆ. ಕುಟ್ಟಂಡ ಪ್ರದೀಪ್ ಜನರ ಜೀವ ಉಳಿಸುವ ಮೂಲಕ ಮನದಲ್ಲಿ ನೆಲೆಸಿದ್ದಾರೆ.
ಆ. 16ರಂದು ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಗ್ಗೋಡ್ಲು ಗ್ರಾಮದಲ್ಲಿ ಭಾರಿ ಮಳೆ ಸುರಿಯುತ್ತಿತ್ತು. ಇಗ್ಗೋಡ್ಲು, ಮುವತ್ತೊಕ್ಲು, ಶಿರಂಗಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಭೂಕುಸಿತ ಆರಂಭವಾಗಿತ್ತು. ವಿದ್ಯುತ್, ಮೊಬೈಲ್ ಸಂಪರ್ಕವೂ ಇಲ್ಲದೇ ಜನರಿಗೆ ಯಾವುದೇ ಅನಾಹುತಗಳ ಮಾಹಿತಿ ಇರಲಿಲ್ಲ. ಕೆಳಭಾಗದಲ್ಲಿ
ಬೆಟ್ಟ ಕುಸಿಯುತ್ತಿದ್ದರೂ ಅವರ ಅರಿವಿಗೆ ಬಂದಿರಲಿಲ್ಲ. ಭೂಕುಸಿತದಿಂದ ಬೆಟ್ಟಕ್ಕೆ ಹೋಗುವ ಎಲ್ಲ ದಾರಿಗಳು ಮುಚ್ಚಿದ್ದವು. ಇಂತಹ ಸಂದರ್ಭದಲ್ಲಿ ಕೆಸರು ಮಣ್ಣಿನ ನಡುವೆ ಬೆಟ್ಟವನ್ನೇರಿ ಸಮಯ ಪ್ರಜ್ಞೆ ತೋರಿದ ಪ್ರದೀಪ್ ಹಲವರ ಪ್ರಾಣ ಉಳಿಸಿದ್ದಾರೆ.
‘ಸುತ್ತಲೂ ಬೆಟ್ಟ ಕುಸಿಯುತ್ತಿದ್ದರೂ ನಮಗೆ ಅದರ ಮಾಹಿತಿಯಿರಲಿಲ್ಲ. ಅಪಾಯದ ಮುನ್ಸೂಚನೆ ಅರಿತು ಬೆಟ್ಟವನ್ನೇರಿ ಬಂದ ಕುಟ್ಟಂಡ ಪೊನ್ನಮ್ಮ ಅವರ ಪುತ್ರ ಪ್ರದೀಪ್ ಸುರಕ್ಷಿತ ಪ್ರದೇಶಕ್ಕೆ ಬರುವಂತೆ ಮನವಿ ಮಾಡಿದರು. ಏನೂ ಆಗುವುದಿಲ್ಲವೆಂದು ಹೇಳಿದರೂ ಬಲವಂತದಿಂದ ಸುರಕ್ಷಿತ ಸ್ಥಳಕ್ಕೆ ಕರೆ ತಂದರು. ಅಲ್ಲೇ ಉಳಿದಿದ್ದರೆ ಮನೆ, ಕಾಫಿ ತೋಟದೊಂದಿಗೆ ಎಲ್ಲರೂ ಪ್ರಾಣ ಕಳೆದುಕೊಳ್ಳುತ್ತಿದ್ದೆವು’ ಎಂದು ಮಾದಾಪುರ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಜಗ್ಗಾರಂಡ ನಳಿನಿ ದೇವಯ್ಯ ಘಟನೆ ನೆನಪಿಸಿ, ಕಣ್ಣೀರು ಸುರಿಸಿದರು.
‘ನಮ್ಮೊಂದಿಗೆ ಅಕ್ಕಪಕ್ಕದ ನಾಲ್ಕು ಕುಟುಂಬಗಳೂ ಸುರಕ್ಷಿತ ಸ್ಥಳಕ್ಕೆ ಬಂದು ಜೀವ ಮಾತ್ರ ಉಳಿಸಿಕೊಂಡರು. ಪ್ರಾಣದ ಹಂಗು ತೊರೆದು ಬೆಟ್ಟವನ್ನೇರಿ ಬಂದ ಪ್ರದೀಪ್ಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು’ ಎಂದು ಅವರು ಗದ್ಗದಿತರಾದರು.
ಇಗ್ಗೋಡ್ಲು ಗ್ರಾಮದ ನಿವೃತ್ತ ಹವಾಲ್ದಾರ್ ಜೆ. ದೇವಯ್ಯ ಅವರ ಕನಸಿನ ಮನೆ, ತೋಟ ಎಲ್ಲವೂ ಸರ್ವನಾಶವಾಗಿದೆ. ದೇಶ ಸೇವೆ ಮಾಡಿದ ಯೋಧನ ಕುಟುಂಬವನ್ನೂ ಮಹಾಮಳೆಯು ಬೀದಿಗೆ ತಂದು ನಿಲ್ಲಿಸಿದೆ.
‘ಮಾದಾಪುರ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಭೂಕುಸಿತಕ್ಕೆ ಸಿಲುಕಿ ಆಸ್ತಿ ಕಳೆದುಕೊಂಡಿದ್ದಾರೆ. ₹ 25 ಲಕ್ಷದಿಂದ ₹ 30 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಮನೆಗಳು ನೆಲಸಮವಾಗಿವೆ. ಅವರಿಗೆ ಸೇರಿದ ಜಾಗದಲ್ಲಿಯೇ ಪುನರ್ವಸತಿ ಕಲ್ಪಿಸುವ ಮೂಲಕ ಈ ನಾಡಿನ ಸಂಸ್ಕೃತಿ, ಹಿರಿಮೆಯನ್ನು ಕಾಪಾಡಬೇಕು’ ಎಂದು ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯೆ ಮೋಟನಾಳಿರ ಸನ್ನಿ ಕಾರ್ಯಪ್ಪ ಮನವಿ ಮಾಡುತ್ತಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.