ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವನ್ಯಜೀವಿ ದಾಳಿ: 5 ವರ್ಷದಲ್ಲಿ 53 ಜನ ಬಲಿ

ಚಾಮರಾಜನಗರ: ಜಿಲ್ಲೆಯ ಅಭಯಾರಣ್ಯಗಳಲ್ಲಿ ನಿಲ್ಲದ ಮಾನವ–ವನ್ಯಜೀವಿ ಸಂಘರ್ಷ
Last Updated 11 ಜನವರಿ 2019, 20:00 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿರುವ ನಾಲ್ಕು ಅಭಯಾರಣ್ಯಗಳ ವ್ಯಾಪ್ತಿಯಲ್ಲಿ ವನ್ಯಜೀವಿಗಳ ದಾಳಿ ಯಿಂದಾಗಿ ಐದು ವರ್ಷಗಳಲ್ಲಿ (2013–18) 53 ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ, ಮಲೆಮಹದೇಶ್ವರ ವನ್ಯಧಾಮ ಮತ್ತು ಕಾವೇರಿ ವನ್ಯಧಾಮಗಳ ವ್ಯಾಪ್ತಿಯಲ್ಲಿರುವ ಕಾಡಂಚಿನ ಗ್ರಾಮಗಳಲ್ಲಿ ಅರಣ್ಯ ಇಲಾಖೆಯು ಸೌರಬೇಲಿ, ಕಂದಕಗಳ ನಿರ್ಮಾಣ, ರೈಲ್ವೆ ಕಂಬಿಯ ಬೇಲಿ ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಂಡಿದ್ದರೂ ಮಾನವ– ವನ್ಯಜೀವಿ ಸಂಘರ್ಷ ಮುಂದುವರಿದಿದೆ.

ಆನೆ ಸೇರಿದಂತೆ ವಿವಿಧ ವನ್ಯಪ್ರಾಣಿಗಳು ನಡೆಸಿರುವ ದಾಳಿಯಲ್ಲಿ 146 ಜನರು ಗಾಯಗೊಂಡಿದ್ದಾರೆ. ಮೂವರು ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗಿದ್ದಾರೆ. 1,192 ಜಾನುವಾರುಗಳು ಬಲಿಯಾಗಿವೆ. ಈ ಅವಧಿಯಲ್ಲಿ ಕಾಡು ಪ್ರಾಣಿಗಳ ದಾಳಿಯಿಂದಾಗಿ ರೈತರ ಬೆಳೆ ನಷ್ಟ ಆಗಿರುವ 13,240 ಪ್ರಕರಣಗಳು ವರದಿಯಾಗಿವೆ.

ಜೀವ ಹಾನಿ ಕಡಿಮೆ: ಜಿಲ್ಲೆಯ ಕೆಲವು ಕಡೆಗಳಲ್ಲಿ ಅರಣ್ಯ ಇಲಾಖೆ ಕೈಗೊಂಡಿರುವ ನಿಯಂತ್ರಣ ಕ್ರಮಗಳು ಫಲ ನೀಡಿವೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ 2017–18ರಲ್ಲಿ ಪ್ರಾಣಿ ಗಳ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. ಅದಕ್ಕೂ ಮೊದಲಿನ ನಾಲ್ಕು ವರ್ಷಗಳಲ್ಲಿ ಸರಾಸರಿ 12 ಜನರು ಮೃತ ಪಟ್ಟಿದ್ದರು. ಆದರೆ, ಕಳೆದ ವರ್ಷ ಪ್ರಾಣ ಕಳೆದುಕೊಂಡವರ ಸಂಖ್ಯೆ 6ಕ್ಕೆ ಇಳಿದಿದೆ. ಬೆಳೆ ಹಾನಿ ಪ್ರಕರಣಗಳೂ ಇಳಿಕೆ ಕಂಡಿವೆ. ಗಾಯಗೊಂಡವರ ಸಂಖ್ಯೆ ಕೊಂಚ ಇಳಿದಿದೆ. ಆದರೆ,ಜಾನುವಾರುಗಳ ಸಾವಿನ ಪ್ರಮಾಣ ಹೆಚ್ಚಾಗಿದೆ.

ಅಧಿಕಾರಿಗಳು ಏನು ಹೇಳುತ್ತಾರೆ?: ‘ಈ ಸಂಘರ್ಷಕ್ಕೆ ಹಲವಾರು ಕಾರಣಗಳಿವೆ ಇವೆ. ಜನಸಂಖ್ಯೆ ಮತ್ತು ಅರಣ್ಯದ ಅಂಚಿನಲ್ಲಿ ಕೃಷಿ‌ ಚಟುವಟಿಕೆಗಳು ಹೆಚ್ಚಾಗಿರುವುದನ್ನು ನಾವು ಗಮನಿಸ ಬೇಕಾಗುತ್ತದೆ. ಇಲಾಖೆಯು ಸೋಲಾರ್‌ ಬೇಲಿ, ಕಂದಕ ನಿರ್ಮಾಣ ಅಥವಾ ಇನ್ನಿತರ ಕ್ರಮಗಳನ್ನು ಕೈಗೊಳ್ಳದೇ ಹೋಗಿದ್ದರೆ ದಾಳಿ ಪ್ರಕರಣಗಳು ಇನ್ನಷ್ಟು ಹೆಚ್ಚಾಗುತ್ತಿದ್ದವು’ ಎಂದು ಚಾಮರಾಜನಗರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಿಸಿಎಫ್‌) ವಿಜಯ್‌ಲಾಲ್‌ ಮೀನಾ ಅವರು ತಿಳಿಸಿದರು.

‘ನಮ್ಮ ವ್ಯಾಪ್ತಿಗೆ ಬರುವ ಓಂಕಾರ, ಹೆಡಿಯಾಲ ವಲಯಗಳಲ್ಲಿ ರೈತರು ಒಂದೆರಡು ವರ್ಷಗಳ ಹಿಂದೆ ಆನೆಗಳ ಹಾವಳಿಯಿಂದ ಬೇಸತ್ತು ಹೋಗಿದ್ದರು. ಜಮೀನು ಮಾರುವ ಸ್ಥಿತಿಗೂ ಬಂದಿ ದ್ದರು. ಆ ಭಾಗದಲ್ಲಿ ರೈಲ್ವೆ ಕಂಬಿ ಬೇಲಿ, ಕಂದಕ ನಿರ್ಮಾಣದ ಬಳಿಕ ರೈತರು ಸ್ವಲ್ಪ ನೆಮ್ಮದಿಯಿಂದ ಇದ್ದಾರೆ. ಈಗಲೂ ಅಲ್ಲಿ ಕಾಡು ಹಂದಿಗಳ ಹಾವಳಿ ಇದೆ. ಆದರೆ, ಆನೆಗಳಿಂದಲೇ ಬೆಳೆ ಹಾನಿಯಾಗುವುದು ಹೆಚ್ಚು’ ಎಂದು ಹೇಳುತ್ತಾರೆ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಅಂಬಾಡಿ ಮಾಧವ್‌.

‘ಮನುಷ್ಯ ಇರುವವರೆಗೆ ಈ ಸಂಘರ್ಷ ಮುಂದುವರೆಯುತ್ತಲೇ ಇರುತ್ತದೆ. ಕಾಡಂಚಿನ ಪ್ರದೇಶ ಗಳಲ್ಲಿಮಾನವರ ಚಟುವಟಿಕೆ ಹೆಚ್ಚಾದಷ್ಟೂ ಬೆಳೆ ನಾಶ, ಆಸ್ತಿ ನಾಶ, ಜೀವ ಹಾನಿಯಂತಹ ಪ್ರಕರಣಗಳು ನಡೆಯುತ್ತವೆ’ ಎಂದು ಅವರು ವಿವರಿಸಿದರು.

****

‘ಕಾಡಿನ ಗುಣಮಟ್ಟ ಕಾಪಾಡಿದರೆ ಸಮಸ್ಯೆ ಇಲ್ಲ’
‘ಪ್ರಾಣಿಗಳಿಗೆ ಉತ್ತಮ ಆಹಾರ ಸಿಗಬೇಕಾದರೆ ಕಾಡಿನ ಗುಣಮಟ್ಟ ಕಾಪಾಡುವುದು ಅತ್ಯಂತ ಮುಖ್ಯ. ಅಂದರೆ ಕಾಡಿನಲ್ಲಿ ವಿವಿಧ ರೀತಿಯ, ಜಾತಿಯ ಸಾಕಷ್ಟು ಮರಗಳು, ಗಿಡಗಳು, ಬಳ್ಳಿಗಳು ಇರಬೇಕು. ಆದರೆ, ಈಗ ಲಂಟಾನ ಕಳೆಯು ನಮ್ಮ ಬಹುತೇಕ ಅರಣ್ಯವನ್ನು ಆಕ್ರಮಿಸಿ, ಸಣ್ಣಪುಟ್ಟ ಗಿಡಗಳು, ಬಳ್ಳಿಗಳನ್ನು ನಾಶಮಾಡುತ್ತಿವೆ. ಇದರಿಂದ ಇಡೀ ಕಾಡಿನ ಸಹಜ ಸಂರಚನೆಗೆ ಧಕ್ಕೆಯಾಗಿದೆ’ ಎಂದು ಖ್ಯಾತ ವನ್ಯಜೀವಿ ವಿಜ್ಞಾನಿ ಕೃಪಾಕರ ‘ಪ್ರಜಾವಾಣಿ’ಗೆ ತಿಳಿಸಿದರು.

ಐದು ವರ್ಷಗಳಲ್ಲಿ ವನ್ಯಜೀವಿ– ಮಾನವ ಸಂಘರ್ಷ ಅಂಕಿ ಅಂಶಗಳು

(ಜಿಲ್ಲೆಯ ನಾಲ್ಕು ರಕ್ಷಿತಾರಣ್ಯಗಳಲ್ಲಿ 2013–14ರಿಂದ 2017–18ರ ಅವಧಿ)

ಮೃತಪಟ್ಟವರು–53

ಗಾಯಗೊಂಡವರು– 146

ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದವರು–3

ಪ್ರಾಣ ಕಳೆದುಕೊಂಡ ಜಾನುವಾರುಗಳು– 1,192

ಬೆಳೆ ನಾಶ ಪ್ರಕರಣಗಳು– 13,240

ಆಸ್ತಿ ನಾಶ ಪ್ರಕರಣಗಳು–45

–––––––––

ಎಲ್ಲಿ, ಎಷ್ಟು ಜನರ ಸಾವು?

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ–15

ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ– 10

ಮಲೆ ಮಹದೇಶ್ವರ ವನ್ಯಧಾಮ–14

ಕಾವೇರಿ ವನ್ಯಧಾಮ–14

––––––––––––

ವರ್ಷವಾರು ಸಾವು ಜನರು

2013–14- 14

2014–15- 11

2015–16- 10

2016–17- 12

2017–18- 6

–––

ಜಾನುವಾರುಗ‌ಳು

2013–14- 111

2014–15- 119

2015–16- 263

2016–17- 349

2017–18- 350

–––––––––––––––

ಐದು ವರ್ಷಗಳಲ್ಲಿ ಗಾಯಗೊಂಡವರ ಸಂಖ್ಯೆ

2013–14;43

2014–15;23

2015–16;23

2016–17;32

2017–18;25

––––––––––

ನಾಲ್ಕು ರಕ್ಷಿತಾರಣ್ಯಗಳಲ್ಲಿ ವನ್ಯಜೀವಿ– ಮಾನವ ಸಂಘರ್ಷ ನಿಯಂತ್ರಣಕ್ಕೆ ಇಲಾಖೆ ಕೈಗೊಂಡ ಕ್ರಮಗಳು

395.5 ಕಿ.ಮೀ -ನಿರ್ಮಿಸಲಾಗಿರುವ ಸೋಲಾರ್‌ ಬೇಲಿಯ ಉದ್ದ

538.5 ಕಿ.ಮೀ -ಆನೆಗಳ ಹಾವಳಿ ನಿಯಂತ್ರಣಕ್ಕೆ ನಿರ್ಮಿಸಲಾಗಿರುವ ಕಂದಕದ ಉದ್ದ

–––––––––––

₹7.65 ಕೋಟಿ -ಐದು ವರ್ಷಗಳಲ್ಲಿ ಅರಣ್ಯ ಇಲಾಖೆ ಸಂತ್ರಸ್ತರಿಗೆ ನೀಡಿರುವ ಪರಿಹಾರ

––––––––––––––––––––

ಸಂಘರ್ಷಕ್ಕೆ ಕಾರಣಗಳು

* ಅರಣ್ಯದ ಸುತ್ತಮುತ್ತ ಜನಸಂಖ್ಯೆ ಹೆಚ್ಚಳ

* ಆನೆ ಹಾಗೂ ಇತರೆ ವನ್ಯಜೀವಿಗಳ ಸಂಖ್ಯೆಯಲ್ಲಿ ಏರಿಕೆ

* ಕಾಡಂಚಿನ ಪ್ರದೇಶಗಳಲ್ಲಿ ಕೃಷಿ ಭೂಮಿ ವಿಸ್ತರಣೆ

* ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯದ ಮೇಲೆ ಮಾನವನ ಹಸ್ತಕ್ಷೇಪ

* ಕಾಡಿನಲ್ಲಿ ಆಹಾರದ ಕೊರತೆ

***

ಮಾನವ– ವನ್ಯಜೀವಿ ಸಂಘರ್ಷವನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಿಲ್ಲ. ಅವುಗಳನ್ನು ಕಡಿಮೆ ಮಾಡುವುದಕ್ಕೆ ಪ್ರಯತ್ನಿಸುತ್ತಿದ್ದೇವೆ.
-ವಿಜಯ್‌ಲಾಲ್‌ ಮೀನಾ ಸಿಸಿಎಫ್‌, ಚಾಮರಾಜನಗರ ವೃತ್ತ

ಮಾಹಿತಿ: ಅರಣ್ಯ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT