7
ವಿಡಿಯೊಗಳು ವೈರಲ್‌, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ

ಮುಖ್ಯಮಂತ್ರಿ ವಿರುದ್ಧ ಮಂಡ್ಯ ರೈತರ ವಾಟ್ಸ್‌ಆ್ಯಪ್‌ ಸಮರ

Published:
Updated:

ಮಂಡ್ಯ: ‘ಕುಮಾರಣ್ಣ ಮುಖ್ಯಮಂತ್ರಿಯಾದರೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡುತ್ತಾರೆ ಎಂದುಕೊಂಡಿದ್ದೆ. ಅಭ್ಯರ್ಥಿಗಳ ಮುಖ ನೋಡದೇ ಜೆಡಿಎಸ್‌ಗೆ ಮತ ಹಾಕಿದ್ದೆವು. ಆದರೆ, ಬಡ್ಡಿ ಕಟ್ಟದ ಸುಸ್ತಿದಾರರ ಸಾಲ ಮಾತ್ರ ಮನ್ನಾ ಮಾಡಿ ನಿಜವಾದ ರೈತರಿಗೆ ಮೋಸ ಮಾಡಿದ್ದಾರೆ...’

ಮಳವಳ್ಳಿ ತಾಲ್ಲೂಕಿನ ರೈತರೊಬ್ಬರು ವಾಟ್ಸ್‌ಆ್ಯಪ್‌ ಮೂಲಕ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಹೀಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಜೆಟ್‌ ಮಂಡನೆಯಾದ ನಂತರ ಇಂಥ ಹತ್ತಾರು ವಾಟ್ಸ್‌ಆ್ಯಪ್‌ ವಿಡಿಯೊಗಳು ವೈರಲ್‌ ಆಗಿವೆ. ಫೇಸ್‌ಬುಕ್‌, ಟ್ವಿಟರ್‌ ಖಾತೆಗಳಲ್ಲಿ ಹಂಚಿಕೆಯಾಗಿವೆ.

ಕೆಲವು ರೈತರು ಅಸಂವಿಧಾನಿಕ ಪದ ಬಳಸಿ ನಿಂದಿಸಿದ್ದಾರೆ. ಸಾಲ ಮನ್ನಾ ಕುರಿತು ಪರ, ವಿರೋಧ ಚರ್ಚೆಗಳು ನಡೆಯುತ್ತಿವೆ. ಹಾಸನ, ರಾಮನಗರ ಜಿಲ್ಲೆಗೆ ಕೊಟ್ಟಷ್ಟು ಕೊಡುಗೆಗಳನ್ನು ಮಂಡ್ಯ ಜಿಲ್ಲೆಗೆ ನೀಡಿಲ್ಲ ಎಂಬ ಅಸಮಾಧಾನವೂ ವ್ಯಕ್ತವಾಗಿದೆ. ಕೆಲವರು ವೈಯಕ್ತಿಕ ಹಾಗೂ ಜಾತಿಯ ನೆಲೆಯಲ್ಲೂ ಜಗಳವಾಡಿಕೊಂಡಿದ್ದಾರೆ.

ಮಾತು ನಂಬಿ ಕೆಟ್ಟೆವು: ಕೆ.ಆರ್‌.ಪೇಟೆ ತಾಲ್ಲೂಕಿನ ರೈತರೊಬ್ಬರು, ‘ಅಧಿಕಾರ ಸ್ವೀಕರಿಸಿದ 24 ಗಂಟೆಯಲ್ಲಿ ಸಂಪೂರ್ಣ ಸಾಲ ಮನ್ನಾ ಮಾಡುತ್ತೇನೆ ಎಂಬ ಮಾತು ನಂಬಿ ಕೆಟ್ಟೆವು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರೆ ₹1 ಲಕ್ಷದವರೆಗೆ ಸಾಲ ಮನ್ನಾ ಮಾಡುತ್ತಿದ್ದರು. ಈಗ ಅದೂ ಇಲ್ಲವಾಯಿತು. ಕುಮಾರಸ್ವಾಮಿ ಎಲ್ಲವನ್ನು ಕೆಡಿಸಿ ಚಿತ್ರಾನ್ನ ಮಾಡಿದ್ದಾರೆ. ಸಿದ್ದರಾಮಯ್ಯ ಯಾವುದೇ ಭೇದಭಾವ ಮಾಡದೇ ಸಹಕಾರ ಸಂಘಗಳ ₹ 50 ಸಾವಿರದವರೆಗಿನ ಸಾಲ ಮನ್ನಾ ಮಾಡಿದ್ದರು’ ಎಂದು ಹೇಳಿರುವ ವಿಡಿಯೊಗಳು ವೈರಲ್‌ ಆಗಿದೆ.

‘ಕುಮಾರಸ್ವಾಮಿ ಹೀಗೆ ಮೋಸ ಮಾಡುತ್ತಾರೆ ಎಂದು ಕನಸು, ಮನಸ್ಸಿನಲ್ಲೂ ಎಣಿಸಿರಲಿಲ್ಲ. ಅನ್ನಭಾಗ್ಯ ಅಕ್ಕಿಯಲ್ಲಿ 2 ಕೆ.ಜಿ ಕಿತ್ತುಕೊಂಡಿದ್ದಾರೆ. ಮುಖ್ಯಮಂತ್ರಿಯಾಗಿ ಆರು ತಿಂಗಳೂ ರಾಜ್ಯಭಾರ ಮಾಡಲು ಸಾಧ್ಯವಿಲ್ಲ. ಪೆಟ್ರೋಲ್‌, ಡೀಸೆಲ್‌ ಬೆಲೆ ಜಾಸ್ತಿ ಮಾಡಿದ್ದು, ಬಸ್‌, ಆಟೊ ಪ್ರಯಾಣ ದರವೂ ಹೆಚ್ಚಾಗುತ್ತದೆ. ಮಣ್ಣಿನ ಮಗ ರೈತರಿಗೆ ಸರಿಯಾದ ಕೊಡುಗೆಯನ್ನೇ ಕೊಟ್ಟಿದ್ದಾರೆ’ ಎಂದು ಮತ್ತೊಬ್ಬ ರೈತ ಆರೋಪಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !