ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ಮನ್ನಾ ಮಾಡದಿದ್ದರೆ ರಾಜಕೀಯ ನಿವೃತ್ತಿ: ಕುಮಾರಸ್ವಾಮಿ

Last Updated 7 ಡಿಸೆಂಬರ್ 2018, 20:00 IST
ಅಕ್ಷರ ಗಾತ್ರ

ಪಾಂಡವಪುರ: ‘ರೈತರ ಎಲ್ಲ ಬೇಡಿಕೆಗಳನ್ನು ಒಂದೇ ರಾತ್ರಿಯಲ್ಲಿ ಈಡೇರಿಸಲು ಸಾಧ್ಯವಿಲ್ಲ ಎಂದು ಗಿಳಿಗೆ ಹೇಳಿದಂತೆ ಹೇಳಿದ್ದೇನೆ. ಆದರೆ, ಮುಖ್ಯಮಂತ್ರಿಗೆ ಸಾಲ ಮನ್ನಾ ವಿಚಾರದಲ್ಲಿ ಸ್ಪಷ್ಟತೆ ಇಲ್ಲ ಎಂದು ಮಾಧ್ಯಮಗಳು ಗೊಂದಲ ಸೃಷ್ಟಿಸಿವೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ತಾಲ್ಲೂಕಿನ ಸೀತಾಪುರ ಗ್ರಾಮದಲ್ಲಿ ಶುಕ್ರವಾರ ಭತ್ತ ಕೊಯ್ಲು ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಗುರುವಾರ ನಡೆದ ರೈತ ಮುಖಂಡರ ಸಭೆಯಲ್ಲಿ ಗಿಳಿಪಾಠ ಮಾಡಿದ್ದೇನೆ. ರಾತ್ರೋರಾತ್ರಿ ಸಂಪೂರ್ಣ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಏಳು ತಿಂಗಳಿಂದ ನಿರಂತರವಾಗಿ ಶ್ರಮಪಡುತ್ತಿದ್ದೇನೆ. ಆದರೆ ಸಾರ್ವಜನಿಕರು– ನನ್ನ ನಡುವೆ ಅಪನಂಬಿಕೆಯನ್ನು ಮಾಧ್ಯಮಗಳು ಸೃಷ್ಟಿಸುತ್ತಿವೆ. ಆ ಮೂಲಕ ರೈತರಲ್ಲಿ ಸಾಲ ಮನ್ನಾ ಆಗುವುದಿಲ್ಲ ಎಂಬ ಆತಂಕ ಸೃಷ್ಟಿಯಾಗಿದೆ. ಇದರಿಂದ ರೈತರ ಆತ್ಮಹತ್ಯೆಯೂ ಹೆಚ್ಚಾಗುತ್ತಿದೆ. ನನ್ನ ರೈತ ಬಂಧುಗಳು ಅಪಪ್ರಚಾರ ನಂಬಬಾರದು. ಆತ್ಮಹತ್ಯೆ ಮಾಡಿಕೊಳ್ಳಬಾರದು. ಸಾಲ ಮನ್ನಾ ಮಾಡದಿದ್ದರೆ ನಾನು ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ’ ಎಂದರು.

‘ದೊಡ್ಡಬಳ್ಳಾಪುರ, ಸೇಡಂನಲ್ಲಿ ಶನಿವಾರ ಸಾಲ ಮನ್ನಾಕ್ಕೆ ಚಾಲನೆ ನೀಡಲಾಗುವುದು. ಸಾಲ ಮನ್ನಾ ಪ್ರಮಾಣ ಪತ್ರವನ್ನು ಅಧಿಕಾರಿಗಳು ಮನೆಗೆ ತಂದುಕೊಡಲಿದ್ದಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ, ನನ್ನನ್ನು ನಂಬಿ’ ಎಂದು ಮನವಿ ಮಾಡಿದರು.

ಸೂರ್ಯ ಮುಳುಗಿದ ನಂತರಭತ್ತದ ಕೊಯ್ಲಿಗೆ ಚಾಲನೆ

ಪಾಂಡವಪುರ: ತಾಲ್ಲೂಕಿನ ಸೀತಾಪುರ ಗ್ರಾಮದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶುಕ್ರವಾರ ರೈತ ಸಮುದಾಯದ ಸಂಪ್ರದಾಯ ಮುರಿದು ಸೂರ್ಯ ಮುಳುಗಿದ ನಂತರ ಭತ್ತದ ಕೊಯ್ಲಿಗೆ ಚಾಲನೆ ನೀಡಿದರು.

ಕಾರ್ಯಕ್ರಮ 4 ಗಂಟೆಗೆ ನಿಗದಿಯಾಗಿತ್ತು. ಆದರೆ ಅವರು ಗದ್ದೆಗೆ ಇಳಿದಾಗ ಸಂಜೆ 6 ಆಗಿತ್ತು. ಅಷ್ಟೊತ್ತಿಗೆ ಸೂರ್ಯ ಮುಳುಗಿದ್ದ.

ಕುಮಾರಸ್ವಾಮಿ ಭತ್ತದ ಕೊಯ್ಲು ಮಾಡಲಿಲ್ಲ. ಬದಲಾಗಿ ಭತ್ತದ ಗದ್ದೆಗೆ ಪೂಜೆ ಸಲ್ಲಿಸಿ ಕೊಯ್ಲಿಗೆ ಚಾಲನೆ ನೀಡಿದರು. ರೈತರು ಕೊಯ್ಲು ಮುಂದುವರಿಸಿದರು. ರೈತರು ಕುಡುಗೋಲು ನೀಡಲು ಮುಂದಾದರು. ಆದರೆ ಮುಖ್ಯಮಂತ್ರಿ ನಿರಾಕರಿಸಿದರು. ಗದ್ದೆಗೆ ನೂರಾರು ಜನರು ಒಮ್ಮೆಲೆ ನುಗ್ಗಿದ ಕಾರಣ ಗೊಂದಲ ಉಂಟಾಯಿತು. ಮೊದಲೇ ಕೊಯ್ಲು ಮಾಡಿ ರಾಶಿ ಹಾಕಿದ್ದ ಭತ್ತಕ್ಕೆ ಪೂಜೆ ಸಲ್ಲಿಸಿದರು.

‘ಸೂರ್ಯ ಮುಳುಗಿದ ನಂತರ ಭತ್ತ ಕೊಯ್ಲು ಮಾಡಿದರೆ ಒಳ್ಳೆಯದಲ್ಲ. ಬೆಳಕಲ್ಲೇ ಕೊಯ್ಲು ಮಾಡುವುದು ಸಂಪ್ರದಾಯ’ ಎಂದು ಅರಳಕುಪ್ಪೆ ಗ್ರಾಮದ ರೈತ ಶಿವಣ್ಣಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT