ಮಾದರಿಯಾದ ‘ಮಕ್ಕಳ ಮನೆ’

7
ರಾಜ್ಯದಲ್ಲೇ ಮೊದಲ ಬಾರಿಗೆ

ಮಾದರಿಯಾದ ‘ಮಕ್ಕಳ ಮನೆ’

Published:
Updated:
Deccan Herald

ಮಂಡ್ಯ: ಕೆ.ಆರ್‌.ಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಶತಮಾನದ ಶಾಲೆ) ‘ಮಕ್ಕಳ ಮನೆ’ಯು ಖಾಸಗಿ ಶಾಲೆ, ಇಂಗ್ಲಿಷ್‌ ಭಾಷಾ ವ್ಯಾಮೋಹಕ್ಕೆ ಸಡ್ಡು ಹೊಡೆದಿದೆ. ಅಧಿಕಾರಿಗಳು, ಶಾಲಾ–ಕಾಲೇಜು ಅಧ್ಯಾಪಕರು, ರಾಜಕಾರಣಿಗಳು, ಅನುಕೂಲಸ್ಥರ ಮಕ್ಕಳು ಇಲ್ಲಿ ಎಲ್‌.ಕೆ.ಜಿ, ಯು.ಕೆ.ಜಿ ಕಲಿಯುತ್ತಿದ್ದಾರೆ.

ಸರ್ಕಾರಿ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ನೀಡುವ ಉದ್ದೇಶದಿಂದ 2014–15ನೇ ಸಾಲಿನಲ್ಲಿ ಆರಂಭವಾದ ‘ಮಕ್ಕಳಮನೆ’ ಇಡೀ ರಾಜ್ಯಕ್ಕೆ ಸ್ಫೂರ್ತಿಯಾಯಿತು. ಮಕ್ಕಳ ಕೊರತೆಯಿಂದ ಮುಚ್ಚಿಹೋಗುವ ಹಂತ ತಲುಪಿದ್ದ ಶತಮಾನದ ಶಾಲೆಯನ್ನು ಉಳಿಸಿದ್ದು ಇದೇ ಮಕ್ಕಳು. 21 ಚಿಣ್ಣರಿಂದ ಆರಂಭವಾಗಿದ್ದು, ಈಗ 187ಕ್ಕೆ ತಲುಪಿದೆ.

ಇಲ್ಲಿಗೆ ಮಕ್ಕಳನ್ನು ದಾಖಲು ಮಾಡುವುದು ಪೋಷಕರಿಗೆ ಹೆಮ್ಮೆಯ ವಿಷಯ. ಕನ್ನಡ ಮಾಧ್ಯಮ ಶಾಲೆಯಾದರೂ ಇಂಗ್ಲಿಷ್‌ ವಿಷಯವನ್ನು ಒಂದು ಭಾಷೆಯಾಗಿ ಕಲಿಸಲಾಗುತ್ತಿದೆ. ನಾಲ್ವರು ಶಿಕ್ಷಕರು ಇಲ್ಲಿದ್ದಾರೆ. ಮಕ್ಕಳು ಹಾಗೂ ಶಿಕ್ಷಕರಿಗೆ ಪ್ರತ್ಯೇಕ ಸಮವಸ್ತ್ರ ರೂಪಿಸಲಾಗಿದೆ. ಎಲ್‌.ಕೆ.ಜಿ, ಯು.ಕೆ.ಜಿ.ಗೆ ತಲಾ ಎರಡು ವಿಭಾಗಗಳಿವೆ. ಮಕ್ಕಳಮನೆ ಆರಂಭವಾದ ನಂತರ ಪ್ರಾಥಮಿಕ ಶಾಲೆಗೂ ಬೇಡಿಕೆ ಬಂದಿದ್ದು, ಮಕ್ಕಳ ಸಂಖ್ಯೆ 753ಕ್ಕೆ ಏರಿದೆ.

‘ವಿಷಯವಾರು, ತರಗತಿವಾರು ಶಿಕ್ಷಕರ ಕೊರತೆಯಿಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕುಸಿಯುತ್ತಿದೆ ಎಂಬ ಸತ್ಯ ನಮಗೆ ಅರ್ಥವಾಗಿತ್ತು. ಮಕ್ಕಳ ಮನೆ ಸ್ಥಾಪನೆಯಲ್ಲಿ ಆಗಿನ ಉಪವಿಭಾಗಾಧಿಕಾರಿ ಎಚ್‌.ಎಲ್‌.ನಾಗರಾಜು, ಬಿಇಒ ಜವರೇಗೌಡ ಅವರ ಶ್ರಮ ಬಲು ದೊಡ್ಡರು. ನಮ್ಮ ಶ್ರಮಕ್ಕೆ ಈಗ ಫಲ ಸಿಕ್ಕಿದೆ. ಕೆ.ಆರ್‌.ಪೇಟೆ ತಾಲ್ಲೂಕಿನಲ್ಲಿ 12, ರಾಜ್ಯದಲ್ಲಿ 700 ಮಕ್ಕಳಮನೆ ಸ್ಥಾಪನೆಗೊಂಡಿವೆ. ಇವುಗಳಿಗೆ ಸರ್ಕಾರದ ಅನುದಾನ ಇಲ್ಲ. ಎಸ್‌ಡಿಎಂಸಿ ಶ್ರಮ ಹಾಗೂ ದಾನಿಗಳ ಸಹಾಯದಿಂದ ನಡೆಯುತ್ತಿವೆ’ ಎಂದು ಎಸ್‌ಡಿಎಂಸಿ ಅಧ್ಯಕ್ಷ, ಸರ್ಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕ ಕೆ.ಎಂ.ವಾಸು ತಿಳಿಸಿದರು. ವಾಸು ಅವರ ಪುತ್ರ ಕೂಡ ಶತಮಾನದ ಶಾಲೆಯಲ್ಲಿ 4ನೇ ತರಗತಿ ಕಲಿಯುತ್ತಿದ್ದಾನೆ.

ಪ್ರಕಾಶ್‌ ರೈ ಸಹಾಯ: ಚಿತ್ರನಟ ಪ್ರಕಾಶ್‌ ರೈ ಕೂಡ ಶತಮಾನದ ಶಾಲೆ ಹಾಗೂ ಮಕ್ಕಳ ಮನೆಯ ಚಿಣ್ಣರ ಕಲರವ ಅನುಭವಿಸಿದ್ದಾರೆ. ಮಕ್ಕಳ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಶಾಲೆಗೆ ಇಬ್ಬರು ಶಿಕ್ಷಕರ ನೇಮಕ, ಒಂದು ಭೋಜನಾಲಯ ನಿರ್ಮಿಸಿಕೊಡುವ ಭರವಸೆ ಕೊಟ್ಟಿದ್ದಾರೆ. ಅಡುಗೆ ಸಿಬ್ಬಂದಿಗೆ ‘ಪ್ರಕಾಶ್ ರಾಜ್‌ ಫೌಂಡೇಷನ್‌’ನಿಂದ ಕನಿಷ್ಠ ಕೂಲಿ ನೀಡುವ ಭರವಸೆಯನ್ನೂ ಕೊಟ್ಟಿದ್ದಾರೆ.

**

ನಮ್ಮ ಮಕ್ಕಳಮನೆ ಕನ್ನಡ ಮಾಧ್ಯಮದಲ್ಲಿ ನಡೆಯುತ್ತಿದೆ. ಆದರೆ ನಮ್ಮ ಚಿಣ್ಣರು ಪಟಪಟನೆ ಇಂಗ್ಲಿಷ್‌ ಮಾತನಾಡುತ್ತಾರೆ. ಇಂಗ್ಲಿಷ್‌ ಒಂದು ವಿಷಯವನ್ನಾಗಿ ಕಲಿಸುತ್ತಿದ್ದೇವೆ.

-ಎಂ.ಟಿ.ಸ್ವಾಮಿ, ಮುಖ್ಯಶಿಕ್ಷಕ

ಬರಹ ಇಷ್ಟವಾಯಿತೆ?

 • 16

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !