ಶುಕ್ರವಾರ, ಜನವರಿ 17, 2020
23 °C
.ವಿ ಕೋರ್ಸ್‌ ಕಾಲೇಜು ವ್ಯಾಪ್ತಿಗೆ

ಮಂಡ್ಯ ವಿ.ವಿ: ವಿಶೇಷಾಧಿಕಾರಿ ವಜಾ, ಇಲಾಖಾ ತನಿಖೆಗೆ ಸೂಚನೆ

ಪ್ರಜಾವಾಣಿ ವಾರ್ತೆ‌ Updated:

ಅಕ್ಷರ ಗಾತ್ರ : | |

ಮಂಡ್ಯ: ಅಧಿಕಾರ ದುರ್ಬಳಕೆ, ನಿಯಮ ಉಲ್ಲಂಘನೆ, ನೇಮಕಾತಿಯಲ್ಲಿ ಅಕ್ರಮ ನಡೆಸಿದ ಆರೋಪ ಹೊತ್ತಿದ್ದ ಮಂಡ್ಯ ಕೇಂದ್ರೀಕೃತ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಡಾ.ಎಂ.ಎಸ್‌.ಮಹದೇವ ನಾಯಕ್‌ ಅವರನ್ನು ವಜಾಗೊಳಿಸಿ, ಉನ್ನತ ಶಿಕ್ಷಣ ಇಲಾಖೆ ಆದೇಶಿಸಿದೆ.

ಕಳೆದ ಡಿ.24ರಂದೇ ಇಲಾಖೆ ಆದೇಶ ಹೊರಡಿಸಿದೆ. ಆದರೂ ಅವರು ಹುದ್ದೆಯಿಂದ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಜ.2ರಂದು ಮತ್ತೊಂದು ಆದೇಶ ಹೊರಡಿಸಿ ಸರ್ಕಾರಿ ಮಹಾವಿದ್ಯಾಲಯದ (ಸ್ವಾಯತ್ತ) ಪ್ರಾಂಶುಪಾಲರನ್ನು ಪ್ರಭಾರ ವಿಶೇಷಾಧಿಕಾರಿಯಾಗಿ ನೇಮಿಸಿ ಆದೇಶ ಹೊರಡಿಸಿದೆ. ತಕ್ಷಣ ಅಧಿಕಾರ ಹಸ್ತಾಂತರಿಸಿ ಮಾತೃಸಂಸ್ಥೆಯಾದ ಬೆಂಗಳೂರಿನ ಸೆಂಟ್ರಲ್‌ ಕಾಲೇಜಿನಲ್ಲಿ ವರದಿ ಮಾಡಿಕೊಳ್ಳುವಂತೆ ಮಹದೇವ ನಾಯಕ್‌ ಅವರಿಗೆ ಸೂಚನೆ ನೀಡಿದೆ.

ವಿಶೇಷಾಧಿಕಾರಿ ಹುದ್ದೆಯಿಂದ ಬಿಡುಗಡೆಯಾದ ಬಗ್ಗೆ ಖಚಿತಪಡಿಸುವಂತೆ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರಿಗೆ; ಜ.3ರಂದು ಸೆಂಟ್ರಲ್‌ ಕಾಲೇಜಿನಲ್ಲಿ ವರದಿ ಮಾಡಿಕೊಳ್ಳುವಲ್ಲಿ ವಿಫಲರಾದರೆ ಈ ಕುರಿತು ಸರ್ಕಾರಕ್ಕೆ ವರದಿ ನೀಡುವಂತೆ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗೂ ಸೂಚಿಸಿದೆ.

ಮೊಕದ್ದಮೆ: ಮಂಡ್ಯ ವಿವಿಯಲ್ಲಿ ಸಿಂಡಿಕೇಟ್‌, ಸೆನೆಟ್‌ ಮುಂತಾದ ಶೈಕ್ಷಣಿಕ ಮಂಡಳಿ ರಚನೆಯಾಗದಿದ್ದರೂ, ಸರ್ಕಾರದ ಅನುಮೋದನೆ ಪಡೆಯದಿದ್ದರೂ ಮಹದೇವ ನಾಯಕ್‌ ಅವರು, ಆಡಳಿತ ಹಾಗೂ ಮೌಲ್ಯಮಾಪನ ವಿಭಾಗಕ್ಕೆ ಇಬ್ಬರು ಕುಲಸಚಿವರನ್ನು ಅಕ್ರಮವಾಗಿ ನೇಮಕ ಮಾಡಿಕೊಂಡಿದ್ದಾರೆ. ಕುಲಸಚಿವರ ಸಹಾಯದಿಂದ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಂಡು ಕರ್ತವ್ಯ ಲೋಪ ಎಸಗಿದ್ದಾರೆ. ಮಹದೇವ ನಾಯಕ್‌ ಸೇರಿದಂತೆ ಕುಲಸಚಿವರ ವಿರುದ್ಧ ಪ್ರಕರಣ ದಾಖಲಿಸಿ ಇಲಾಖಾ ವಿಚಾರಣೆ ಪ್ರಾರಂಭಿಸುವಂತೆ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರಿಗೆ ಸೂಚಿಸಲಾಗಿದೆ.

ವಿವಿ ಕೋರ್ಸ್‌: ಸಿಂಡಿಕೇಟ್ ರಚನೆಯಾಗದಿದ್ದರೂ ಮಹದೇವ ನಾಯಕ್‌ ಮಂಡ್ಯ ವಿವಿ ಅಡಿ ವಿವಿಧ ಕೋರ್ಸ್‌ ಆರಂಭಿಸಿ ಅನಧಿಕೃತವಾಗಿ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಂಡಿದ್ದಾರೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೋರ್ಸ್‌ಗಳನ್ನು ಸರ್ಕಾರಿ ಮಹಾವಿದ್ಯಾಲಯದ ಅಡಿಯಲ್ಲೇ ಮುಂದುವರಿಸುವಂತೆ ಮಹಾವಿದ್ಯಾಲಯದ ಪ್ರಾಂಶುಪಾಲರಿಗೆ ಸೂಚಿಸಲಾಗಿದೆ. ನಿಗದಿತ ಶುಲ್ಕಕ್ಕಿಂತ ಹೆಚ್ಚುವರಿ ಶುಲ್ಕ ವಸೂಲಿ ಮಾಡಲಾಗಿದ್ದು ಹೆಚ್ಚುವರಿ ಶುಲ್ಕವನ್ನು ವಿದ್ಯಾರ್ಥಿಗಳಿಗೆ ವಾಪಸ್‌ ನೀಡುವಂತೆ ಆದೇಶ ನೀಡಿದೆ.

ಮಂಡ್ಯ ವಿವಿ ಅಕ್ರಮ ನೇಮಕಾತಿ ಕುರಿತು ‘ಅತಿಥಿ ಉಪನ್ಯಾಸಕ ಹುದ್ದೆಗೂ ₹ 10 ಲಕ್ಷ ಲಂಚ’ ಶೀರ್ಷಿಕೆಯಡಿ ಕಳೆದ ಸೆ.19ರಂದು ‘ಪ್ರಜಾವಾಣಿ’ಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು.

ಅಧಿಕಾರ ದುರ್ಬಳಕೆ, ನಿಯಮ ಉಲ್ಲಂಘನೆ, ನೇಮಕಾತಿಯಲ್ಲಿ ಅಕ್ರಮ ನಡೆಸಿದ ಆರೋಪ ಹೊತ್ತಿದ್ದ ಮಂಡ್ಯ ಕೇಂದ್ರೀಕೃತ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಡಾ.ಎಂ.ಎಸ್‌.ಮಹದೇವ ನಾಯಕ್‌ ಅವರನ್ನು ವಜಾಗೊಳಿಸಿ, ಉನ್ನತ ಶಿಕ್ಷಣ ಇಲಾಖೆ ಆದೇಶಿಸಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು