4
ಬೆಂಗಳೂರಿನ ಜೆ.ಪಿ.ನಗರದ ಬ್ರಿಗೇಡ್‌ ಸ್ಕೂಲ್ ಪರೀಕ್ಷಾ ಕೇಂದ್ರದ ಸಿಬ್ಬಂದಿ ವಿರುದ್ಧ ಅಭ್ಯರ್ಥಿಗಳ ಆಕ್ರೋಶ

ತಾಳಿ, ಕಾಲುಂಗುರ ತೆಗೆದರೆ ಮಾತ್ರ ಪರೀಕ್ಷೆ

Published:
Updated:

ಬೆಂಗಳೂರು: ಜೆ.ಪಿ.ನಗರದ ಬ್ರಿಗೇಡ್‌ ಸ್ಕೂಲ್‌ನಲ್ಲಿ ತೆರೆಯಲಾಗಿದ್ದ ಕೇಂದ್ರದಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಅರ್ಹತಾ ಪರೀಕ್ಷೆಗೆ (ಎನ್‌ಇಟಿ) ತಾಳಿ, ಕಾಲುಂಗುರ ತೆಗೆದ ನಂತರವೇ ಹಾಜರಾಗಲು ಅವಕಾಶ ನೀಡಲಾಗಿದೆ. ಈ ಕ್ರಮಕ್ಕೆ ಅಭ್ಯರ್ಥಿಗಳು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಆದರೆ, ಬೇರೆ ಯಾವ ಕೇಂದ್ರದಲ್ಲೂ ಆಭರಣಗಳನ್ನು ತೆಗೆಸಿದ ಬಗ್ಗೆ ವರದಿಯಾಗಿಲ್ಲ. 

ಯಾವುದೇ ರೀತಿಯ ಎಲೆಕ್ಟ್ರಿಕ್‌ ವಸ್ತುಗಳನ್ನು ಪರೀಕ್ಷಾ ಕೇಂದ್ರದೊಳಗೆ ತರುವಂತಿಲ್ಲ ಎಂದು ಕೇಂದ್ರದ ಹೊರಗೆ ಅಂಟಿಸಲಾಗಿದ್ದ ಸೂಚನಾಪತ್ರದಲ್ಲಿ ತಿಳಿಸಲಾಗಿತ್ತು. ಆಭರಣಗಳನ್ನು ಧರಿಸಿರಬಾರದು ಎಂಬ ಯಾವ ಸೂಚನೆಯೂ ಅದರಲ್ಲಿರಲಿಲ್ಲ. 

‘ಪ್ರವೇಶ ಪತ್ರದಲ್ಲಿ ಲೋಹದ ಆಭರಣಗಳನ್ನು ಧರಿಸಬಾರದು ಎಂದಿದೆ. ಆದರೆ, ಯಾವ ಕೇಂದ್ರದಲ್ಲೂ ಇಲ್ಲದ ಕಠಿಣ ನಿಯಮ ಇಲ್ಲಿ ಮಾತ್ರ ಏಕೆ?  ನಾನು ಎರಡನೇ ಬಾರಿ ಪರೀಕ್ಷೆ ಬರೆಯುತ್ತಿದ್ದೇನೆ. ಹಿಂದಿನ ಬಾರಿ ಈ ರೀತಿ ತಾಳಿ ಕಾಲುಂಗುರ ತೆಗೆಸಿರಲಿಲ್ಲ. ಈ ಬಗ್ಗೆ ಯಾವುದೇ ಮಾಹಿತಿಯಿಲ್ಲದೆ ಒಬ್ಬರೇ ಪರೀಕ್ಷೆ ಬರೆಯಲು ಬಂದಿದ್ದವರು ಲಕ್ಷಾಂತರ ಮೌಲ್ಯದ ತಾಳಿ
ಯನ್ನು ಎಲ್ಲಿ ತೆಗೆದಿಡಬೇಕು’ ಎಂದು ಅಭ್ಯರ್ಥಿ ಅನ್ಸರಿ ಮೊಯಿನ್ ಪ್ರಶ್ನಿಸಿದರು.

‘ಕಾಲುಂಗುರ ತೆಗೆಯಲು ಬಾರದೆ ಕೆಲವರು ಒದ್ದಾಡಿದರು. ಪತಿ, ಪತ್ನಿ ಇಬ್ಬರೂ ಪರೀಕ್ಷೆ ಬರೆಯಲು ಬಂದಿದ್ದರು. ಪತ್ನಿಯ ಆಭರಣಗಳನ್ನು ಇಟ್ಟುಕೊಳ್ಳುವ ಸಲುವಾಗಿ ಕೆಲವರು ಪರೀಕ್ಷೆ ಬರೆಯಲೇ ಇಲ್ಲ’ ಎಂದು ಹೇಳಿದರು.

‘ನಿಯಮವಿದ್ದರೆ, ಎಲ್ಲಾ ಕಡೆಯೂ ಕಟ್ಟುನಿಟ್ಟಾಗಿ ಪಾಲಿಸಬೇಕು. ಒಂದೊಂದು ಕೇಂದ್ರದಲ್ಲಿ ಒಂದೊಂದು ನಿಯಮ ಪಾಲಿಸಿದರೆ, ಕೆಲವರಿಗೆ ಅನ್ಯಾಯವಾಗುತ್ತದೆ. ಧಾರ್ಮಿಕ ನಂಬಿಕೆಗಳಿಗೆ ವಿರುದ್ಧವಾದ ನಿಯಮಗಳನ್ನು ಮಾಡುವುದು ಸರಿಯಲ್ಲ’ ಎಂದು ಅಭ್ಯರ್ಥಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.

ಸಿಬಿಎಸ್‌ಇಯಿಂದ ಪರೀಕ್ಷೆ ಆಯೋಜನೆ
ಕೇಂದ್ರ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ಈ ಬಾರಿ ಎನ್‌ಇಟಿ ಪರೀಕ್ಷೆಯನ್ನು ಆಯೋಜಿಸಿತ್ತು. ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (ಎನ್‌ಇಇಟಿ–ನೀಟ್) ಕಟ್ಟುನಿಟ್ಟಿನ ನಿಯಮಗಳನ್ನೇ ಇದಕ್ಕೂ ಅಳವಡಿಸಿಕೊಂಡಿದೆ. 

ಈ ಬಾರಿ ಅತ್ಯಂತ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ ಎಂದು ಮಂಡಳಿ ತಿಳಿಸಿದೆ.

***

ಅಂಕಿಅಂಶ

91 – ಪರೀಕ್ಷಾ ಕೇಂದ್ರಗಳು

84 – ವಿಷಯಗಳು

11.48 ಲಕ್ಷ – ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 1

  Sad
 • 1

  Frustrated
 • 5

  Angry

Comments:

0 comments

Write the first review for this !