ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕರಣಕ್ಕೆ ಪ್ರತೀಕಾರ ಶಂಕೆ ಬಸ್‌ಗಳ ಮೇಲೆ ಕಲ್ಲು

ಬಜರಂಗದಳ ಮುಖಂಡನ ಮೇಲಿನ ಪ್ರಕರಣಕ್ಕೆ ಪ್ರತೀಕಾರದ ಶಂಕೆ
Last Updated 25 ಜೂನ್ 2019, 18:37 IST
ಅಕ್ಷರ ಗಾತ್ರ

ಮಂಗಳೂರು: ವಿಟ್ಲ ಠಾಣಾ ವ್ಯಾಪ್ತಿಯ ಸೂರಿಕುಮೇರ್, ಪುತ್ತೂರು ಠಾಣಾ ವ್ಯಾಪ್ತಿಯ ಸತ್ತಿಕಲ್, ಬಂಟ್ವಾಳ ಠಾಣಾ ವ್ಯಾಪ್ತಿಯ ಕುದ್ರೆಬೆಟ್ಟುನಲ್ಲಿ ಮಂಗಳವಾರ ಬೆಳಿಗ್ಗೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಬಸ್‌ಗಳ ಮೇಲೆ ಕಲ್ಲು ತೂರಾಡಿದ್ದು, ಬಸ್ ಚಾಲಕ ಹಾಗೂ ಮೂವರು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ.

ಮಂಗಳೂರು ಕಡೆಯಿಂದ ಮಾಣಿ ಮೂಲಕ ಪುತ್ತೂರು ಕಡೆಗೆ ತೆರಳುವ ಸೆಲಿನಾ, ಸೇಪ್ವೇ, ಕೇರಳ ಸಾರಿಗೆ ಹಾಗೂ ಕರ್ನಾಟಕ ಸಾರಿಗೆ ಸೇರಿದಂತೆ 11 ಖಾಸಗಿ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಬಸ್‌ಗಳ ಗಾಜುಗಳು ಜಖಂ ಆಗಿವೆ. ಬಸ್‌ನಲ್ಲಿ ವಿದ್ಯಾರ್ಥಿಗಳು ಸೇರಿ ಅನೇಕ ಮಂದಿ ಪ್ರಯಾಣಿಸುತ್ತಿದ್ದು, ಕಿಟಕಿ ಗಾಜು ಹಾಗೂ ಕಲ್ಲಿನ ಏಟಿನಿಂದ ಮೂವರು ವಿದ್ಯಾರ್ಥಿಗಳ ತಲೆಭಾಗಕ್ಕೆ ಪೆಟ್ಟಾಗಿದೆ.

ಸೋಮವಾರ ಕೇರಳದ ಅಡ್ಯನಡ್ಕದಲ್ಲಿ ಗೋ ಸಾಗಣೆದಾರರ ಮೇಲೆ ಹಲ್ಲೆ ನಡೆಸಿ, ಹಣ ಹಾಗೂ ಪಿಕಪ್ ವಾಹನ ದರೋಡೆ ಮಾಡಿದ್ದಾರೆ ಎಂದು ಆರೋಪಿಸಿ ವಿಟ್ಲ ಪ್ರಖಂಡದ ಬಜರಂಗ ದಳದ ಮುಖಂಡ ಅಕ್ಷಯ್ ರಜಪೂತ್ ಸೇರಿ ಹಲವು ಮಂದಿ ಮೇಲೆ ಬದಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿರಬಹುದು ಎಂದು ಶಂಕಿಸಲಾಗಿದೆ.

ಮುಖಂಡರ ಮೇಲೆ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ವಿಟ್ಲ ಪ್ರಖಂಡದ ಪ್ರದೇಶಗಳಲ್ಲಿ ಬಂದ್ ಮಾಡಲಾಗುವುದು ಎಂದು ಕೆಲವು ಸಂಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹರಿಯಬಿಟ್ಟಿದ್ದವು.

ವ್ಯಾಪಕ ಬಂದೋಬಸ್ತ್‌: 11 ಬಸ್‌ಗಳ ಮೇಲೆ ಕಲ್ಲು ತೂರಾಡಿದ ಬಗ್ಗೆ ಪ್ರಕರಣ ದಾಖಲಾಗಿದ್ದು, ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸಲು ಪೊಲೀಸರ ತಂಡ ರಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮಿಪ್ರಸಾದ ತಿಳಿಸಿದ್ದಾರೆ.

ಸಾರ್ವಜನಿಕರು ಆತಂಕಕ್ಕೆ ಒಳಗಾಗಬಾರದು. ಸಾಮಾಜಿಕ ಜಾಲತಾಣದಲ್ಲಿ ಬರುವ ಸಂದೇಶಗಳಿಗೆ ಕಿವಿಗೊಡಬಾರದು. ಬಂಟ್ವಾಳ ವ್ಯಾಪ್ತಿಯಲ್ಲಿ ಹೆಚ್ಚುವರಿ ಅಧಿಕಾರಿ ಹಾಗೂ ಪೊಲೀಸ್ ಸಿಬ್ಬಂದಿ ನೇಮಕ ಮಾಡಿದ್ದು, ಬಂದೋಬಸ್ತ್‌ ಮಾಡಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT