ಭಾನುವಾರ, ಆಗಸ್ಟ್ 18, 2019
23 °C

ಗೊತ್ತಿಲ್ಲದ ವಿ.ವಿಗಳ ಗೌರವ ಡಾಕ್ಟರೇಟ್‌

Published:
Updated:

ಮಂಗಳೂರು: ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿನ ಸಾಧನೆಗಾಗಿ ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್‌ಗೆ ಖ್ಯಾತಿ ಪಡೆದಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕಾಸಿನ ಡಾಕ್ಟರೇಟ್‌ ಹುಚ್ಚು ಹೆಚ್ಚಾಗುತ್ತಿದೆ. ಕಳೆದ ಆರು ತಿಂಗಳಲ್ಲಿಯೇ ಹೆಸರು ಕೇಳಿರದ ವಿಶ್ವವಿದ್ಯಾಲಯಗಳಿಂದ 10–12 ಮಂದಿ ಗೌರವ ಡಾಕ್ಟರೇಟ್‌ ಪಡೆದಿದ್ದಾರೆ.

ಸ್ವವಿವರ ಹಾಗೂ ಸಂಸ್ಥೆಯ ಬೇಡಿಕೆ ಪೂರೈಸುವ ಮೂಲಕ ಸುಲಭದಲ್ಲಿ ಗೌರವ ಡಾಕ್ಟರೇಟ್‌ ಪಡೆಯುವ ಹಾದಿಯಲ್ಲಿ ಬಹಳಷ್ಟು ಜನ ಸಾಗುತ್ತಿದ್ದಾರೆ. ಸಿಂಗಪುರ, ದುಬೈ, ಪುಣೆ, ಮುಂಬೈನಲ್ಲಿರುವ ಕೆಲವು ಸಂಸ್ಥೆಗಳು ಗೌರವ ಡಾಕ್ಟರೇಟ್‌ ನೀಡುತ್ತಿದ್ದು, ಜಿಲ್ಲೆಯ ಉದ್ಯಮಿಗಳು, ಸಹಕಾರ ಸಂಘದ ಮುಖಂಡರು, ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರು ಸೇರಿದಂತೆ ಅನೇಕರು ಗೌರವ ಡಾಕ್ಟರೇಟ್‌ ಪಡೆದುಕೊಂಡಿದ್ದಾರೆ.

‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹುತೇಕರು ವೈದ್ಯರಿದ್ದಾರೆ. ಇನ್ನೂ ಕೆಲವರು ಪಿಎಚ್‌.ಡಿ ಪದವಿ ಪಡೆದಿದ್ದಾರೆ. ಇವರ ಜತೆಗೆ ಗೌರವ ಡಾಕ್ಟರೇಟ್‌ ಪಡೆದಿರುವವರೂ ಸೇರಿಕೊಂಡಿದ್ದು, ಯಾರ ಹೆಸರಿಗೆ ಡಾಕ್ಟರೇಟ್‌ ಬರೆಯುವುದು ಎನ್ನುವ ಗೊಂದಲ ಜನರನ್ನು ಕಾಡುವಂತಾಗಿದೆ. ಡೀಮ್ಡ್‌ ವಿಶ್ವವಿದ್ಯಾಲಯಗಳೂ ಇದೀಗ ಜಿಲ್ಲೆಯಲ್ಲಿ ಗೌರವ ಡಾಕ್ಟರೇಟ್‌ ಪದವಿ ನೀಡಲು ಆರಂಭಿಸಿವೆ.

ಉಡುಪಿಯಲ್ಲೂ ಇದೆ ಜಾಲ: ಪ್ರಸಿದ್ಧ ಉದ್ಯಮಿಗಳು, ಗಣ್ಯರು, ಸಾರ್ವಜನಿಕ ಕ್ಷೇತ್ರದಲ್ಲಿ ಹೆಸರು ಮಾಡಿದವರ ಮಾಹಿತಿಯನ್ನು ಸಂಗ್ರಹಿಸುವ ಜಾಲ ಉಡುಪಿಯಲ್ಲೂ ವ್ಯವಸ್ಥಿತವಾಗಿದೆ.

ಪ್ರಚಾರ ಬಯಸುವ, ಸಮಾಜದ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳಲು ಹಾತೊರೆಯುವ ವ್ಯಕ್ತಿಗಳನ್ನು ಈ ಜಾಲ ಸಂಪರ್ಕಿಸಿ ಗೌರವ ಡಾಕ್ಟರೇಟ್‌ ಕೊಡಿಸುವ ಆಮಿಷವೊಡ್ಡುತ್ತದೆ ಎನ್ನುತ್ತಾರೆ ಎಂಜಿಎಂ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಕೊಕ್ಕರ್ಣೆ ಸುರೇಂದ್ರನಾಥ್‌ ಶೆಟ್ಟಿ.

Post Comments (+)