ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೇಶದ ಹಿತಕ್ಕಾಗಿ ಸ್ವಲ್ಪ ಚಿವುಟಿಸಿಕೊಳ್ಳಿ’

Last Updated 30 ನವೆಂಬರ್ 2019, 15:15 IST
ಅಕ್ಷರ ಗಾತ್ರ

ಮಂಗಳೂರು: ‘ದೇಶದ ಹಿತಕ್ಕಾಗಿ ಸ್ವಲ್ಪ ಚಿವುಟಿಸಿಕೊಳ್ಳಿ’ ಎಂದು ಕೇಂದ್ರ ವಿತ್ತ ಖಾತೆಯ ರಾಜ್ಯ ಸಚಿವ ಅನುರಾಗ್ ಠಾಕೂರ್ ಹೇಳಿದರು.

ನಗರದಲ್ಲಿ ನಡೆದ ಮಂಗಳೂರು ಲಿಟ್ ಫೆಸ್ಟ್‌ನ ವಿಚಾರಗೋಷ್ಠಿಯಲ್ಲಿ ಶನಿವಾರ ‘ನೋಟು ರದ್ಧತಿ ಮತ್ತು ಜಿಎಸ್‌ಟಿ’ ಕುರಿತ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯಿಸಿದರು.

‘ಪ್ರಧಾನಿ ಮೋದಿ ತೆಗೆದುಕೊಂಡ ಈ ಎರಡು ‘ದೊಡ್ಡ ಮತ್ತು ದಿಟ್ಟ’ ನಿರ್ಧಾರದಿಂದ ದೇಶದ ತೆರಿಗೆ ಸಂಗ್ರಹ ಹೆಚ್ಚಳವಾಗಿದೆ. ಸ್ಟಾರ್ಟ್‌ ಅಪ್‌ಗಳು ಹೆಚ್ಚಿವೆ. ಎಂಎಸ್‌ಎಂಇಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಭಾರತದ ಮೇಲೆ ಜಗತ್ತಿಗೆ ವಿಶ್ವಾಸ ಹೆಚ್ಚಿದ್ದು, ವಿದೇಶಿ ಹೂಡಿಕೆ ಏರಿಕೆಯಾಗಿದೆ. ಜನರಿಗೆ ಸ್ವಲ್ಪ ಸಮಸ್ಯೆಯಾಗಿರಬಹುದು. ಆದರೆ, ಭವಿಷ್ಯದ ಬಲಿಷ್ಠ ಭಾರತಕ್ಕಾಗಿ ಅವರು ಬೆಂಬಲಿಸಿದ್ದಾರೆ’ ಎಂದರು.

ಬಿಪಿಸಿಎಲ್ ಮತ್ತಿತರ ಲಾಭದಾಯಕ ಕಂಪೆನಿಗಳನ್ನು ಕೇಂದ್ರ ಮಾರಾಟ ಮಾಡಲು ಹೊರಟಿರುವುದು ಏಕೆ? ಎಂಬ ಪ್ರಶ್ನೆಯೊಂದಕ್ಕೆ, ‘ನಷ್ಟದ ಕಂಪೆನಿಯನ್ನು ಯಾರು ಕೊಳ್ಳುತ್ತಾರೆ?’ ಎಂದರು. ‘ಕಂಪೆನಿ ವ್ಯವಹಾರ ನಡೆಸುವುದು ಸರ್ಕಾರದ ಕೆಲಸವಲ್ಲ. ಅಭಿವೃದ್ಧಿಗಾಗಿ ಮೂಲಸೌಕರ್ಯ ಕಲ್ಪಿಸುವುದು ಹಾಗೂ ನಿರ್ವಹಿಸುವುದು ನಮ್ಮ ಆದ್ಯತೆ. ಅದಕ್ಕಾಗಿ ಈ ಹೆಜ್ಜೆಗಳು’ ಎಂದು ಸಮರ್ಥಿಸಿಕೊಂಡರು.

‘ಭಾರತದ ಆರ್ಥಿಕ ಬುನಾದಿ ಭದ್ರವಾಗಿದೆ. ಈಗ ಸಣ್ಣ ಗಾಳಿಗೆ ಸ್ವಲ್ಪ ವ್ಯತ್ಯಯವಾಗಿದೆ’ ಎಂದು ಆರ್ಥಿಕ ಕುಸಿತ ಪ್ರಶ್ನೆಯೊಂದಕ್ಕೆ ಮಾರ್ಮಿಕವಾಗಿ ಪ್ರತಿಕ್ರಿಯಿಸಿದರು.

ಕಂಪನಿ ಸಾಮಾಜಿಕ ಜವಾಬ್ದಾರಿ(ಸಿಎಸ್ಆರ್) ಅಡಿಯಲ್ಲಿ ಸಂಶೋಧನೆಗಳಿಗೆ ಹಣ ನೀಡಲು ಅವಕಾಶ ಕಲ್ಪಿಸಲಾಗುವುದು. ಮರು ಬಳಕೆಯ ಇಂಧನ ವಲಯದ ಹೆಚ್ಚಳ ನಮ್ಮ ಆದ್ಯತಾ ವಲಯವಾಗಿದೆ. ಬ್ಯಾಂಕ್‌ಗಳ ಗ್ರಾಹಕ ಮೇಳಗಳ ಮೂಲಕ ಸುಮಾರು 2.5 ಲಕ್ಷ ಕೋಟಿಗೂ ಹೆಚ್ಚು ಹಣ ಜನರ ಮಧ್ಯೆ ಹರಿದು ಬಂದಿದೆ. ಬ್ಯಾಂಕ್‌ ವಿಲೀನದಿಂದಾಗಿ ಪಾರದರ್ಶಕತೆ ಹಾಗೂ ಉತ್ತರದಾಯಿತ್ವ ಹೆಚ್ಚಿದೆ. ಗ್ರಾಮೀಣ ಭಾಗದಲ್ಲಿ ಸಹಕಾರಿ ಕ್ಷೇತ್ರ ಅದ್ಭುತ ಕಾರ್ಯ ಮಾಡುತ್ತಿದೆ ಎಂದರು.

‘ದೇಶದ ಹಿತಾಸಕ್ತಿಗೆ ಧಕ್ಕೆಯಾಗುವ ಯಾವುದೇ ಒಪ್ಪಂದ ಹಾಗೂ ನಿರ್ಣಯವನ್ನು ಪ್ರಧಾನಿ ಕೈಗೊಳ್ಳುವುದಿಲ್ಲ’ ಎಂದ ಅವರು, ಆರ್‌ಸಿಇಪಿ ಒಪ್ಪಂದದ ಕುರಿತು ಉಲ್ಲೇಖಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT