ಮಂಗಳೂರು: ಫೇಸ್‌ಬುಕ್‌ನಲ್ಲಿ ಮೂಢನಂಬಿಕೆ ಪ್ರಶ್ನಿಸಿದ ಯುವಕನ ಬಂಧನ!

7
ಚರ್ಚೆಗೆ ಗ್ರಾಸವಾದ ಮಂಗಳೂರು ಉತ್ತರ ಠಾಣೆ ಪೊಲೀಸರ ನಡೆ

ಮಂಗಳೂರು: ಫೇಸ್‌ಬುಕ್‌ನಲ್ಲಿ ಮೂಢನಂಬಿಕೆ ಪ್ರಶ್ನಿಸಿದ ಯುವಕನ ಬಂಧನ!

Published:
Updated:

ಮಂಗಳೂರು: ಕೇರಳದಲ್ಲಿನ ಪ್ರವಾಹ ಸ್ಥಿತಿ ಕುರಿತು ಮೂಢನಂಬಿಕೆಯಿಂದ ಕೂಡಿದ ಹೇಳಿಕೆಯನ್ನು ಫೇಸ್‌ ಬುಕ್‌ನಲ್ಲಿ ಪ್ರಶ್ನಿಸಿದ್ದಕ್ಕೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಮುಸ್ಲಿಂ ಯುವಕನೊಬ್ಬನನ್ನು ಬಂಧಿಸಿ, ಅನಧಿಕೃತವಾಗಿ ಲಾಕಪ್‌ನಲ್ಲಿ ಇರಿಸಿದ್ದಲ್ಲದೇ ಐದು ದಿನಗಳ ಕಾಲ ಜೈಲಿಗೆ ಕಳುಹಿಸಿದ ಮಂಗಳೂರು ಉತ್ತರ (ಬಂದರು) ಠಾಣೆ ಪೊಲೀಸರ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಬಂಟ್ವಾಳ ತಾಲ್ಲೂಕಿನ ಸಾಲೆತ್ತೂರು ನಿವಾಸಿಯಾಗಿರುವ ಅಶ್ರಫ್‌ ಎಂ.ಸಾಲೆತ್ತೂರು (35) ಬಂಧನಕ್ಕೆ ಒಳಗಾದವರು. ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದ ಇವರು ಮತ್ತೆ ಫೇಸ್‌ ಬುಕ್‌ನಲ್ಲಿ ಅಭಿಪ್ರಾಯ ಪ್ರಕಟಿಸುತ್ತಿರುವುದಕ್ಕೆ ನೋಟಿಸ್‌ ಜಾರಿ ಮಾಡಿರುವ ಪೊಲೀಸರು, ಜಾಮೀನು ರದ್ಧುಗೊಳಿಸುವಂತೆ ನ್ಯಾಯಾಲಯಕ್ಕೆ ವರದಿ ಸಲ್ಲಿಸುವುದಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ. ಈ ಕ್ರಮದ ವಿರುದ್ಧ ಹಲವರು ಫೇಸ್‌ ಬುಕ್‌, ವಾಟ್ಸ್ ಆ್ಯಪ್‌ ಮತ್ತಿತರ ಸಾಮಾಜಿಕ ಮಾಧ್ಯಮಗಳಲ್ಲಿ ‘ಜಸ್ಟೀಸ್‌ ಫಾರ್‌ ಅಶ್ರಫ್’ ಎಂಬ ಅಭಿಯಾನ ಆರಂಭಿಸಿದ್ದಾರೆ.

‘ಭಕ್ತರೊಬ್ಬರು ಹೇಳಿದ್ದು:– ಋತುಮತಿಯಾದ ಮಹಿಳೆಯರನ್ನು ಶಬರಿಮಲೆ ಪ್ರವೇಶಿಸಲು ಕೋರ್ಟು ಅವಕಾಶ ನೀಡಿದ್ದೇ ಕೇರಳದಲ್ಲಿ ನೆರೆ ಬರಲು ಕಾರಣ. Ashraf M Salethur ಕೇಳಿದ್ದು:– ಹಾಗಾದರೆ ಪರಶುರಾಮನ ಸೃಷ್ಟಿ ತುಳು ನಾಡಿನಲ್ಲಿ ನೆರೆ ಬರಲು ಕಾರಣವೇನು’ ಎಂದು ಪ್ರಶ್ನಿಸಿ ಅಶ್ರಫ್‌ ಆಗಸ್ಟ್‌ 19ರ ಸಂಜೆ ತನ್ನ ಫೇಸ್‌ ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದರು.

ಈ ಕುರಿತು ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಆ. 21ರಂದು ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ದಾಖಲು ಮಾಡಲಾಗಿತ್ತು. ಈ ಪ್ರಕರಣದಲ್ಲಿ ಠಾಣೆಯ ಅಪರಾಧ ವಿಭಾಗದ ಸಬ್‌ ಇನ್‌ಸ್ಪೆಕ್ಟರ್ ಎಂ.ಸುಂದರ ಅವರೇ ದೂರುದಾರರು. ಬರಹದ ಮೂಲಕ ಶಾಂತಿ ಕದಡಲು ಮತ್ತು ಗಲಭೆ ಸೃಷ್ಟಿಸಲು ಯತ್ನ, ಕೋಮು ಗಲಭೆ ಸೃಷ್ಟಿಸಲು ಯತ್ನ ಮತ್ತು ಕ್ರಿಮಿನಲ್‌ ಮಧ್ಯಪ್ರವೇಶ ಮಾಡಿದ ಆರೋಪದಡಿ ಅಶ್ರಫ್‌ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

ಅಕ್ರಮ ಬಂಧನ:

‘ಮಂಗಳೂರು ಸಿಸಿಬಿ ಕಾನ್‌ಸ್ಟೆಬಲ್‌ ಜಬ್ಬಾರ್‌ ಎಂಬುವವರು ಆ.21ರ ಸಂಜೆ ಮೊಬೈಲ್‌ಗೆ ಕರೆಮಾಡಿ ಮಾತನಾಡಲು ಬರುವಂತೆ ತಿಳಿಸಿದರು. ನಾನು ಹೋದಾಗ ಪೊಲೀಸರು ಮೊಬೈಲ್‌ ಕಿತ್ತುಕೊಂಡರು. ಯಾವ ಪುಸ್ತ ಓದಿದ್ದೀಯಾ? ಯಾವ ಸಂಘಟನೆಯಲ್ಲಿರುವೆ ಎಂದು ಪ್ರಶ್ನಿಸಿದರು. ರಾತ್ರಿ 8 ಗಂಟೆಯವರೆಗೂ ಅಲ್ಲಿಯೇ ಇರಿಸಿಕೊಂಡರು. ಬಳಿಕ ಬಂದರು ಠಾಣೆ ಇನ್‌ಸ್ಪೆಕ್ಟರ್ ಎದುರು ಹಾಜರುಪಡಿಸಿದರು. ಸಂವಿಧಾನ ಮತ್ತು ಕಾನೂನುಗಳಿಗೆ ವಿರುದ್ಧವಾಗಿ ನಾನು ಏನನ್ನೂ ಬರೆದಿಲ್ಲ ಎಂದು ಸಮಜಾಯಿಷಿ ನೀಡಿದೆ’ ಎಂದು ಅಶ್ರಫ್‌ ನಡೆದಿರುವ ಘಟನೆಯನ್ನು ‘ಪ್ರಜಾವಾಣಿ’ಗೆ ವಿವರಿಸಿದರು.

‘ಆ 21ರ ರಾತ್ರಿ ಬಂದರು ಠಾಣೆಯ ಲಾಕಪ್‌ನಲ್ಲಿ ಬಟ್ಟೆ ಬಿಚ್ಚಿ ನನ್ನನ್ನು ಇರಿಸಿದರು. ಲಾಕಪ್‌ನಲ್ಲಿ ಇಲಿ, ಹೆಗ್ಗಣ ಓಡಾಡುತ್ತಿದ್ದವು. ಸಹಿಸಲು ಅಸಾಧ್ಯವಾದ ವಾಸನೆ ಇತ್ತು. ಇಡೀ ರಾತ್ರಿ ನಿದ್ದೆ ಬರಲಿಲ್ಲ. ನಿಂತುಕೊಂಡೇ ಕಾಲ ಕಳೆದೆ. ಆ.22ರಂದು ಬಕ್ರೀದ್‌ ಇತ್ತು. ಆ ದಿನ ಸಂಜೆ ನನ್ನನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಿದರು. ಹಿಂದಿನ ದಿನವೇ ಬಂಧಿಸಿದ್ದನ್ನು ಹೇಳದಂತೆ ತಾಕೀತು ಮಾಡಿದ್ದರು. ಆ ದಿನವೇ ಗೋಳಿಕಟ್ಟೆ ಬಜಾರ್‌ ಬಳಿ ಬಂಧಿಸಿದ್ದರು ಎಂಬ ಸುಳ್ಳು ವರದಿಯನ್ನು ನ್ಯಾಯಾಧೀಶರ ಎದುರು ನಾನೂ ಒಪ್ಪಿಕೊಂಡೆ’ ಎಂದರು.

‘ನಂತರ ಜೈಲಿಗೆ ಕಳಿಸಿದರು. ವಾಪಸು ಬರುವಾಗ ನನ್ನ ನಗದು ಇದ್ದ ಪರ್ಸ್, ಉಂಗುರ, ಮೆಮೊರಿ ಕಾರ್ಡ್, ಇಯರ್‌ ಫೋನ್‌ ಸೇರಿದಂತೆ ₹ 3,000 ಮೌಲ್ಯದ ವಸ್ತುಗಳನ್ನು ಕೊಡಲಿಲ್ಲ. ಈ ಬಗ್ಗೆ ಫೇಸ್‌ ಬುಕ್‌ನಲ್ಲಿ ಬರೆದೆ. ಅದನ್ನೇ ಮುಂದಿಟ್ಟುಕೊಂಡು ಜಾಮೀನು ರದ್ದು ಮಾಡಲು ವರದಿ ಸಲ್ಲಿಸುವುದಾಗಿ ನೋಟಿಸ್‌ ನೀಡಿದ್ದಾರೆ’ ಎಂದು ನೋಟಿಸ್‌ನ ಪ್ರತಿಯನ್ನು ಪ್ರದರ್ಶಿಸಿದರು.

ಕಾನೂನು ಉಲ್ಲಂಘಿಸಿಲ್ಲ:

ಅಶ್ರಫ್‌ ವಿರುದ್ಧ ಪೊಲೀಸರ ವಿರುದ್ಧ ದುರುದ್ದೇಶದಿಂದ ಕ್ರಮ ಜರುಗಿಸಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಬಂದರು ಠಾಣೆ ಇನ್‌ಸ್ಪೆಕ್ಟರ್ ಸುರೇಶ್‌ಕುಮಾರ್, ‘ಈ ಪ್ರಕರಣದಲ್ಲಿ ಕಾನೂನಿನ ಪ್ರಕಾರ ತನಿಖೆ ನಡೆಸಿ ಕ್ರಮ ಜರುಗಿಸಲಾಗಿದೆ. ತನಿಖೆ ಇನ್ನೂ ಪ್ರಗತಿಯಲ್ಲಿದೆ. ಲಭ್ಯ ಸಾಕ್ಷ್ಯಗಳನ್ನು ಆಧರಿಸಿ ಬಂಧಿಸಲಾಗಿತ್ತು. ಯಾವುದೇ ರೀತಿಯಲ್ಲೂ ಕಾನೂನು ಉಲ್ಲಂಘಿಸಿಲ್ಲ’ ಎಂದರು.1

ನ್ಯಾಯಾಲಯವು ವಿಧಿಸಿರುವ ಷರತ್ತುಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಪುನಃ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಲಾಗಿತ್ತು. ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಿರುವುದು ಇದು ಮೊದಲೇನೂ ಅಲ್ಲ. ಬಂದರು ಠಾಣೆಯಲ್ಲೇ ಹಿಂದೆ ಮೂರು ಪ್ರಕರಣ ದಾಖಲಿಸಲಾಗಿತ್ತು. ಆರೋಪಿಸುವಂತೆ ಏನೂ ನಡೆದಿಲ್ಲ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 18

  Happy
 • 0

  Amused
 • 2

  Sad
 • 1

  Frustrated
 • 21

  Angry

Comments:

0 comments

Write the first review for this !