ಮಂಗಳವಾರ, ಅಕ್ಟೋಬರ್ 15, 2019
25 °C
ಸುಳ್ಯದಲ್ಲಿ ಅಪಘಾತ: ಕೊಡಗಿನ ಒಂದೇ ಕುಟುಂಬದ ನಾಲ್ವರ ಸಾವು

ಕುಟುಂಬದ ಆಧಾರ ಸ್ತಂಭವನ್ನೇ ಕಿತ್ತುಕೊಂಡ ವಿಧಿ

Published:
Updated:

ಮಡಿಕೇರಿ: ದಕ್ಷಿಣ ಕನ್ನಡ ಜಿಲ್ಲೆ, ಸುಳ್ಯದ ಮೂಲಕ ಹಾದು ಹೋಗಿರುವ ಮೈಸೂರು – ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ-275ರ ಜಾಲ್ಸೂರು ಗ್ರಾಮದ ಅಡ್ಕಾರು ಮಾವಿನಕಟ್ಟೆ ಬಳಿ ಮಂಗಳವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಕೊಡಗಿನ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟರೆ, ಅದೇ ಕುಟುಂಬದ ಮತ್ತೊಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ಎಲ್ಲರೂ ಮಡಿಕೇರಿ ತಾಲ್ಲೂಕಿನ ಕೊಟ್ಟಮುಡಿ ನಿವಾಸಿಗಳು. ವಿಧಿಯು, ಕುಟುಂಬದ ಆಧಾರ ಸ್ತಂಭಗಳನ್ನೇ ಕಿತ್ತುಕೊಂಡು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದೆ.

ಹಸನೈರ್‌ ಹಾಜಿ (80), ಅವರ ಹಿರಿಯ ಪುತ್ರ ಅಬ್ದುಲ್‌ ರೆಹಮಾನ್‌ (46), ದ್ವಿತೀಯ ಪುತ್ರ ಇಬ್ರಾಹಿಂ (44) ಹಾಗೂ ಮೂರನೇ ಪುತ್ರ ಹ್ಯಾರೀಸ್ (40) ಸ್ಥಳದಲ್ಲೇ ಮೃತ‌ಪಟ್ಟರೇ, ಕಾರಿನಲ್ಲಿದ್ದ ನಾಲ್ಕನೇ ಪುತ್ರ ಉಮ್ಮರ್‌ ಫಾರೂಕ್‌ ಸ್ಥಿತಿ ಸಹ ಗಂಭೀರವಾಗಿದೆ. 

ಆಸ್ಪತ್ರೆಯಿಂದ ಬರುವಾಗ ವಿಧಿಯಾಟ: ಕೊಟ್ಟಮುಡಿ ನಿವಾಸಿ ಹಸೈನಾರ್ ಹಾಜಿ ಮಂಗಳೂರು ಆಸ್ಪತ್ರೆಯಲ್ಲಿರುವ ತನ್ನ ಮಗಳು ಆಮಿನಾ ಅವರ ಪತಿ ಹನೀಫ್ ಅವರನ್ನು ನೋಡಲು ತನ್ನ ನಾಲ್ವರು ಪುತ್ರರೊಂದಿಗೆ ತೆರಳಿದ್ದರು.

ವಿದೇಶದಲ್ಲಿರುವ ಪುತ್ರ ಮಹಮ್ಮದ್‌ಗೆ ಸೇರಿದ ಕಾರಿನಲ್ಲಿ ಮಂಗಳವಾರ ಬೆಳಿಗ್ಗೆ 6ಕ್ಕೆ ಮನೆಯಿಂದ ಹೊರಟಿದ್ದರು. ಅಳಿಯನ ಯೋಗಕ್ಷೇಮ ವಿಚಾರಿಸಿ, ಮರಳುವಾಗ ಸುಳ್ಯದ ಬಳಿಯ ಅಡ್ಕಾರ್‌ನಲ್ಲಿ ಈ ಅಪಘಾತ ನಡೆದಿದೆ.

ಹಸೈನಾರ್‌ ಅವರ ಹಿರಿಯ ಪುತ್ರ ಅಬ್ದುಲ್ ರೆಹಮಾನ್‌ ಕಾರು ಚಲಾಯಿಸುತ್ತಿದ್ದರು. ವಿಧಿಯಾಟಕ್ಕೆ ಕುಟುಂಬಸ್ಥರು ಕಣ್ಣೀರಿನಲ್ಲಿ ಮುಳುಗಿದ್ದಾರೆ. ಆಕ್ರಂದನ ಮುಗಿಲುಮುಟ್ಟಿದೆ.

ಹಸೈನಾರ್ ಮತ್ತು ಅವರ ಕಿರಿಯ ಪುತ್ರ ಉಮ್ಮರ್ ಒಂದೇ ಮನೆಯಲ್ಲಿ ವಾಸವಾಗಿದ್ದರು. ಉಳಿದ ಮೂವರು ಪ್ರತ್ಯೇಕ ಮನೆಯಲ್ಲಿದ್ದರು. ಅಬ್ದುಲ್ ರೆಹಮಾನ್‌ಗೆ ಪತ್ನಿ–ಮೂವರು ಮಕ್ಕಳು, ಇಬ್ರಾಹಿಂಗೆ ಪತ್ನಿ– ಇಬ್ಬರು ಮಕ್ಕಳು ಹಾಗೂ ಹಾರೀಸ್‌ಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರು ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದರು.

Post Comments (+)