ಸೋಮವಾರ, ಜನವರಿ 20, 2020
22 °C
ಭಾನುವಾರ ಗಿಜಿಗುಟ್ಟಿದ ಮಾರುಕಟ್ಟೆ

ಸಹಜ ಸ್ಥಿತಿಯತ್ತ ಮಂಗಳೂರು: ಇಂದಿನಿಂದ ಕರ್ಫ್ಯೂ ಸಂಪೂರ್ಣ ಹಿಂತೆಗೆತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಹಿಂಸಾಚಾರ ಮತ್ತು ಕರ್ಫ್ಯೂವಿನಿಂದಾಗಿ ಮೂರು ದಿನಗಳಿಂದ ಭೀತಿಯಲ್ಲಿ ಮುಳುಗಿದ್ದ ಮಂಗಳೂರು ನಗರ ಸಹಜ ಸ್ಥಿತಿಯತ್ತ ಮರಳಲಾರಂಭಿಸಿದೆ. ಭಾನುವಾರ ಹಗಲಿನ ವೇಳೆ ಪೂರ್ತಿಯಾಗಿ ಕರ್ಫ್ಯೂ ಸಡಿಲಿಸಿದ್ದು, ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಆದೇಶದಂತೆ ಭಾನುವಾರ ಬೆಳಿಗ್ಗೆ 6ರಿಂದ ಸಂಜೆ 5ಗಂಟೆಯವರೆಗೆ ಕರ್ಫ್ಯೂ ಸಡಿಲಿಸಲಾಗಿತ್ತು. ಬೆಳಿಗ್ಗೆಯೇ ಜನರು ಮಾರುಕಟ್ಟೆಗಳತ್ತ ಮುಖ ಮಾಡಿದ್ದರು. ಬಸ್‌, ಆಟೊ ಸೇರಿದಂತೆ ಎಲ್ಲ ಬಗೆಯ ವಾಹನಗಳ ಸಂಚಾರವೂ ಇತ್ತು. ಆದರೆ, ಸಾಮಾನ್ಯ ದಿನಗಳಿಗಿಂತ ತುಸು ಕಡಿಮೆ ವಾಹನಗಳು ಓಡಾಡುತ್ತಿದ್ದುದು ಕಂಡುಬಂತು.

ಬೆಳಿಗ್ಗೆ ಕೆಲ ಹೊತ್ತಿನವರೆಗೂ ನಗರ ಸಾರಿಗೆ ಬಸ್‌ಗಳ ಓಡಾಟ ಮಾತ್ರ ಇತ್ತು. 9 ಗಂಟೆಯ ಬಳಿಕ ಹೊರ ಜಿಲ್ಲೆಗಳು ಮತ್ತು ಕೇರಳದ ವಿವಿಧ ಸ್ಥಳಗಳಿಗೆ ಸಂಚರಿಸುವ ಬಸ್‌ಗಳೂ ರಸ್ತೆಗಿಳಿದವು. ಮೂರು ದಿನಗಳಿಂದ ಕಾದು ಕುಳಿತಿದ್ದ ಜನರು ಬೆಳಿಗ್ಗೆಯೇ ಬಸ್‌ ನಿಲ್ದಾಣಗಳತ್ತ ಓಡೋಡಿ ಬರುತ್ತಿದ್ದರು.

ಭಾನುವಾರವಾದ ಕಾರಣದಿಂದ ಪ್ರಮುಖ ವಾಣಿಜ್ಯ ಮಳಿಗೆಗಳು, ಕಚೇರಿಗಳು ಮುಚ್ಚಿದ್ದವು. ಅಂಗಡಿ, ಮಾರುಕಟ್ಟೆಗಳಲ್ಲಿ ಇಡೀ ದಿನ ಬಿರುಸಿನ ವಹಿವಾಟು ನಡೆಯಿತು. ಮೀನು, ಮಾಂಸದ ಮಾರುಕಟ್ಟೆಗಳಿಗೆ ಜನರು ಬೆಳಿಗ್ಗೆಯೇ ಮುತ್ತಿಗೆ ಹಾಕಿದ್ದರು. ಮದ್ಯದಂಗಡಿಗಳೂ ಸಂಜೆ 5ರವರೆಗೆ ವಹಿವಾಟು ನಡೆಸಿದ್ದು, ಜನರು ಮದ್ಯ ಖರೀದಿಗೆ ಮುಗಿಬಿದ್ದಿರುವುದು ಕಂಡುಬಂತು.

ಸಂಜೆ 5 ಗಂಟೆ ಆಗುತ್ತಿದ್ದಂತೆಯೇ ಪೊಲೀಸರು ಎಲ್ಲ ಅಂಗಡಿ, ಹೋಟೆಲ್‌ಗಳನ್ನು ಬಂದ್‌ ಮಾಡಿಸಿದರು. ಪಾದಚಾರಿಗಳೂ ರಸ್ತೆಗೆ ಇಳಿಯದಂತೆ ನಿಯಂತ್ರಿಸಿದರು. ಸೋಮವಾರ ಬೆಳಿಗ್ಗೆಯಿಂದ ಸಂಪೂರ್ಣವಾಗಿ ಕರ್ಫ್ಯೂ ಅಂತ್ಯಗೊಳ್ಳಲಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 144ರ ಅಡಿಯಲ್ಲಿ ನಿಷೇಧಾಜ್ಞೆ ಮುಂದುವರಿಯಲಿದೆ. ಸಭೆ, ಸಮಾರಂಭ ಮತ್ತು ಪ್ರತಿಭಟನೆಗಳಿಗೆ ನಿರ್ಬಂಧ ಜಾರಿಯಲ್ಲಿರಲಿದೆ.

ಸಿದ್ದರಾಮಯ್ಯ ಇಂದು ನಗರಕ್ಕೆ:

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೋಮವಾರ ಮಂಗಳೂರು ನಗರಕ್ಕೆ ಭೇಟಿ ನೀಡಲಿದ್ದು, ಗೋಲಿಬಾರ್‌ನಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಾಂತ್ವನ ಹೇಳಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಅವರು ನಗರಕ್ಕೆ ಬರಲಿದ್ದು, ಮೃತರ ಮನೆಗಳಿಗೆ ಭೇಟಿ ನೀಡುವರು. ನಂತರ ಆಸ್ಪತ್ರೆಗಳಿಗೂ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ವಿಚಾರಿಸುವರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು