ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವು, ಹಸಿಮೆಣಸಿಗೆ ಸಿಗದ ವಿಮೆ

ನಿರೀಕ್ಷೆಯಲ್ಲಿ ಧಾರವಾಡ ಜಿಲ್ಲೆಯ ಬೆಳೆಗಾರರು
Last Updated 31 ಅಕ್ಟೋಬರ್ 2019, 2:44 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಆಲ್ಫೋನ್ಸಾ, ಮಲ್ಲಿಕಾ, ನೀಲಂ ತಳಿಯ ಮಾವಿಗೆ ಪ್ರಸಿದ್ಧವಾದ ಧಾರವಾಡ ಜಿಲ್ಲೆಯಲ್ಲಿ 2018–19ನೇ ಸಾಲಿನಲ್ಲಿ ತಲೆದೋರಿದ್ದ ಅನಾವೃಷ್ಟಿಯಿಂದ ಫಸಲು ಕಳೆದುಕೊಂಡ ಮಾವು ಬೆಳೆಗಾರರಿಗೆ ಇದುವರೆಗೂ ವಿಮೆ ಹಣ ದೊರಕಿಲ್ಲ.

ಧಾರವಾಡ, ಕಲಘಟಗಿ, ಅಳ್ನಾವರ ಮತ್ತು ಭಾಗಶಃ ಹುಬ್ಬಳ್ಳಿ ತಾಲ್ಲೂಕು ಸೇರಿದಂತೆ ಜಿಲ್ಲೆಯ 1,624 ಹೆಕ್ಟೇರ್‌ನಲ್ಲಿ ಬೆಳೆದ ಮಾವಿಗೆ 2,058 ರೈತರು ಹವಾಮಾನ ಆಧಾರಿತ ವಿಮೆ ಮಾಡಿಸಿದ್ದರು. ₹97.76 ಲಕ್ಷ ಪ್ರೀಮಿಯಂ ಪಾವತಿಸಿದ್ದರು. ₹20 ಕೋಟಿ ಬೆಳೆ ವಿಮೆ ಬಾಕಿ ಬರಬೇಕಿದೆ.

ಅದೇ ರೀತಿ, 2018ರ ಮುಂಗಾರಿನಲ್ಲಿ ಜಿಲ್ಲೆಯ 3,496 ಹೆಕ್ಟೇರ್‌ನಲ್ಲಿ 1,388 ರೈತರು ಬೆಳೆದ ಹಸಿಮೆಣಸಿಗೆ ₹50 ಲಕ್ಷ ಪ್ರೀಮಿಯಂ ಪಾವತಿಸಿದ್ದರು. ಈ ರೈತರಿಗೆ ಅಂದಾಜು ₹10 ಕೋಟಿ ಬೆಳೆ ವಿಮೆ ಬರುವುದು ಬಾಕಿ ಇದೆ.

ಜೂನ್‌ನಲ್ಲೇ ಬರಬೇಕಿತ್ತು: ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅಳ್ನಾವರ ತಾಲ್ಲೂಕಿನ ಕೋಗಿಲಗೇರಿಯ ಮಾವು ಬೆಳೆಗಾರ ಭರತೇಶ ಪಾಟೀಲ, ‘ಮಾವು ಕಾಯಾಗುವ ಸಂದರ್ಭದಲ್ಲಿ ವಿಪರೀತ ಚಳಿ, ಆಲಿಕಲ್ಲು ಮಳೆಯಾಗಿ ಭಾರೀ ಪ್ರಮಾಣದಲ್ಲಿ ಮಾವಿನ ಕಾಯಿಗಳು ಉದುರಿ ಹಾಳಾಯಿತು. ತೋಟಗಾರಿಕಾ ಇಲಾಖೆ ಹಾಗೂ ವಿಮಾ ಏಜೆನ್ಸಿ ಪ್ರತಿನಿಧಿಗಳು ಹೊಲಕ್ಕೆ ಭೇಟಿ ನೀಡಿ ನಷ್ಟದ ಸಮೀಕ್ಷೆ ಮಾಡಿಕೊಂಡು ಹೋಗಿದ್ದರು. ಜೂನ್‌ನಲ್ಲೇ ವಿಮೆ ಹಣ ಲಭಿಸಬೇಕಾಗಿತ್ತು. ಆದರೆ, ಇದುವರೆಗೂ ರೈತರಿಗೆ ಪಾವತಿಯಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಇದೀಗ ಪ್ರಸಕ್ತ ಹಂಗಾಮಿನ (2019–20) ಮಾವಿಗೆ ವಿಮೆ ಮಾಡಿಸುವ ಅವಧಿ ಆರಂಭವಾಗಿದೆ. ನವೆಂಬರ್‌ 15 ಕೊನೆಯ ದಿನವಾಗಿದೆ. ಆದರೆ, ಭಾರೀ ಮಳೆ, ಪ್ರವಾಹಕ್ಕೆ ಸಿಲುಕಿ ಸಂಕಷ್ಟದಲ್ಲಿರುವ ರೈತರ ಬಳಿ ಇದೀಗ ನಯಾ ಪೈಸೆ ಇಲ್ಲ. ಈ ಸಂದರ್ಭದಲ್ಲಾದರೂ ಕಳೆದ ವರ್ಷದ ಹಣ ಬಂದಿದ್ದರೇ ಪ್ರೀಮಿಯಂ ತುಂಬಲು ಅನುಕೂಲವಾಗುತ್ತಿತ್ತು. ತಕ್ಷಣ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.

ಶೀಘ್ರ ಪಾವತಿ: ‘ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಯ ಮಾವು ಬೆಳೆಗಾರರಿಗೆ ಈಗಾಗಲೇ ಪಾವತಿಯಾಗಿದೆ. ನಮ್ಮ ಜಿಲ್ಲೆಯದೊಂದೇ ಬಾಕಿ ಉಳಿದುಕೊಂಡಿದೆ. ಹಣ ಪಾವತಿಸುವಂತೆ ಎಸ್‌ಬಿಐ ಜನರಲ್‌ ಇನ್‌ಶ್ಯೂರೆನ್ಸ್‌ ಏಜೆನ್ಸಿಗೆ ಸೂಚಿಸಲಾಗಿದೆ. ಆದಷ್ಟು ಬೇಗ ರೈತರಿಗೆ ಬೆಳೆ ವಿಮೆ ಮೊತ್ತ ಲಭಿಸುವ ನಿರೀಕ್ಷೆ ಇದೆ’ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರಾಮಚಂದ್ರ ಮಡಿವಾಳ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT