ಮಾವಿಗೆ ಮಾರುಕಟ್ಟೆ ರೂಪಿಸಿದ ಸ್ತ್ರೀ ಶಕ್ತಿ

7
ಮಹಿಳಾ ದಸರಾದಲ್ಲೊಂದು ಅಪರೂಪದ ಮಳಿಗೆ

ಮಾವಿಗೆ ಮಾರುಕಟ್ಟೆ ರೂಪಿಸಿದ ಸ್ತ್ರೀ ಶಕ್ತಿ

Published:
Updated:
Deccan Herald

ಮೈಸೂರು: ಕಳೆದ ಕೆಲ ತಿಂಗಳ ಹಿಂದೆ ಮಾವಿನ ಬೆಲೆ ಕುಸಿದು ರೈತರು ಅಪಾರ ನಷ್ಟ ಅನುಭವಿಸಿದರು. ಮಣ್ಣು ಸೇರಬೇಕಿದ್ದ ಮಾವು ಸಂಗ್ರಹಿಸಿ, ಸಂಸ್ಕರಿಸಿ ಮಾರಾಟಮಾಡಿ ಲಾಭ ಗಳಿಸುವ ಮೂಲಕ ರೈತ ಮಹಿಳೆಯರು ಮತ್ತೊಂದು ಸಾಧನೆಗೆ ಮುನ್ನುಡಿ ಬರೆದಿದ್ದಾರೆ.

ಈ ಯಶೋಗಾಥೆಯತ್ತ ಸಾಗಿದವರು ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನ ಗುಂಡಮನತ್ತ ಗ್ರಾಮದ ಮಹಿಳೆಯರು.

20 ಮಂದಿ ಮಹಿಳೆಯರು ಸೇರಿಕೊಂಡು ‘ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿ’ ಕಟ್ಟಿಕೊಂಡು ಬೆಲೆ ಇಲ್ಲದೆ ತಿಪ್ಪೆಗೆ ಸುರಿಯಬೇಕಿದ್ದ ಮಾವು ಸಂಗ್ರಹಿಸಿ, ಸಂಸ್ಕರಿಸಿ ಮಾರಾಟಕ್ಕೆ ಅಣಿಗೊಳಿಸಿದ್ದಾರೆ. ಈ ಸೊಸೈಟಿ ಮಳಿಗೆಯು ಗುರುವಾರ ನಗರದ ಜೆ.ಕೆ.ಮೈದಾನದಲ್ಲಿ ಆರಂಭವಾದ ಮಹಿಳಾ ದಸರೆಯಲ್ಲಿ ಗಮನ ಸೆಳೆಯುತ್ತಿದೆ.

ಮಾವಿಗೆ ಬೆಲೆ ಕುಸಿದಾಗ ಮಾರಾಟ ಮಾಡಲು ರೈತರು ಹಿಂದೇಟು ಹಾಕಿದರು. ಸಾಗಾಣಿಕೆ ವೆಚ್ಚ, ಕೂಲಿ ಸೇರಿದಂತೆ ಇತರ ವೆಚ್ಚ ಕಳೆದರೆ ನಷ್ಟವೇ ಅಧಿಕವಾಗಿತ್ತು. ಹಾಗಾಗಿ, ರೈತರು ಮಾವನ್ನು ಮರದಿಂದ ಕೀಳದೆ ಬಿಟ್ಟಿದ್ದರು. ಮಾಗಿದ ಮಾವು ಒಂದೊಂದಾಗಿ ತೊಟ್ಟು ಕಳಚಿ ಬೀಳಲಾರಂಭಿಸಿತು. ಇವುಗಳನ್ನು ಸಂಗ್ರಹಿಸಿದ ರತ್ನಮ್ಮಾ ಹಾಗೂ ಲಕ್ಷ್ಮಿದೇವಿ ಅವರು ತಿಪ್ಪೆಗೆ ಸುರಿಯಬೇಕಲ್ಲ ಎಂದು ಮರುಗಿದರು. ಅದೇ ಸಮಯಕ್ಕೆ ಶ್ರೀನಿವಾಸಪುರದಲ್ಲಿ ಆರಂಭವಾದ ಮಾವು ಅಭಿವೃದ್ಧಿ ಮಂಡಳಿ ಹಾಗೂ ಕೋಲಾರ ಕೃಷಿ ವಿಜ್ಞಾನ ಕೇಂದ್ರವನ್ನು ಸಂಪರ್ಕಿಸಿದರು. ಮಾವು ಸಂಗ್ರಹಿಸಿಟ್ಟುಕೊಂಡು ಬೆಲೆ ಬಂದಾಗ ಮಾರಾಟ ಮಾಡಬಹುದೇ ಎಂದು ವಿಚಾರಿಸಿದರು. ಅಲ್ಲಿನ
ತಜ್ಞರು ಮಾವು ಸಂಸ್ಕರಣೆ ಮಾಹಿತಿ ನೀಡಿದರು. ಜತೆಗೆ ತಾಂತ್ರಿಕ ನೆರವನ್ನೂ ನೀಡಲು ಮುಂದೆ ಬಂದರು.

ಗ್ರಾಮದಲ್ಲಿದ್ದ ಇತರೆ 20 ಮಹಿಳೆಯರನ್ನು ಸಂಘಟಿಸಿ ತಾಂತ್ರಿಕ ನೆರವು ಪಡೆದುಕೊಂಡರು. ತಾವೇ ಒಂದಿಷ್ಟು ಹಣ ಹಾಕಿ ಸ್ವಂತ ಉದ್ದಿಮೆ ಆರಂಭಿಸಿದರು. ಸುಮಾರು 10 ಟನ್ ಮಾವು ಸಂಗ್ರಹಿಸಿ ತಂಪು ಪಾನೀಯ, ಕ್ಯಾಂಡಿಗಳು, ಚಾಕೊಲೇಟ್‌ ತಯಾರಿಸಿದರು. ಗಾಂಧಿ ಜಯಂತಿ, ಸ್ವಾತಂತ್ರ್ಯೋತ್ಸವ ಸೇರಿದಂತೆ ವಿಶೇಷ ಕಾರ್ಯಕ್ರಮಗಳ ಸಂದರ್ಭಗಳಲ್ಲಿ ಶಾಲೆಗಳ ಮಕ್ಕಳಿಗೆ ವಿತರಿಸಲು ಈ ಸೊಸೈಟಿ ತಯಾರಿಸಿದ ಚಾಕೊಲೇಟ್‌ಗಳನ್ನೇ ಖರೀದಿಸುವ ಮೂಲಕ ಮಾರುಕಟ್ಟೆ ಒದಗಿಸುವ ಕಾರ್ಯ ಆರಂಭವಾಯಿತು.

ಸಾವಯವ ಪದಾರ್ಥಗಳ ಮಾರುವ ಸ್ವಸಹಾಯ ಸಂಘ ‘ವೇದಿಕ್ ಫುಡ್ ಉತ್ಪನ್ನಗಳು ಹಾಗೂ ವೈಭವ ಸಿರಿಧಾನ್ಯಗಳ ಸಂಘ’ದ ಜತೆ
ಗೂಡಿದರು. ಇವರು ತಾವು ತಯಾರಿಸಿದ ಉತ್ಪನ್ನಗಳ ಜತೆಗೆ ಸಿರಿಧಾನ್ಯಗಳ ಮಾರಾಟದ ಮೂಲಕ ಮಾರುಕಟ್ಟೆ ವಿಸ್ತರಣೆಗಾಗಿ ನಿರಂತರ ಪ್ರಯತ್ನಿಸುತ್ತಲೇ ಇದ್ದಾರೆ. ಮಾಹಿತಿಗೆ ಮೊ: 9740431540 ಸಂಪರ್ಕಿಸಬಹುದು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !