ಮ್ಯಾನ್‌ಹೋಲ್‌ಗೆ ಇಳಿದು ಶುಚಿಗೊಳಿಸಿದ ಪೌರಕಾರ್ಮಿಕ

7

ಮ್ಯಾನ್‌ಹೋಲ್‌ಗೆ ಇಳಿದು ಶುಚಿಗೊಳಿಸಿದ ಪೌರಕಾರ್ಮಿಕ

Published:
Updated:
Deccan Herald

ಚಿತ್ರದುರ್ಗ: ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಮುಂಭಾಗದ ಮ್ಯಾನ್‌ಹೋಲ್‌ಗೆ ಪೌರಕಾರ್ಮಿಕರೊಬ್ಬರು ಶನಿವಾರ ಇಳಿದು ಶುಚಿಗೊಳಿಸಿದರು.

ಕಟ್ಟಿಕೊಂಡಿದ್ದ ಮ್ಯಾನ್‌ಹೋಲ್‌ ಶುಚಿಗೊಳಿಸಲು ಇಬ್ಬರು ಪೌರಕಾರ್ಮಿಕರನ್ನು ನಗರಸಭೆ ಅಧಿಕಾರಿಗಳು ಕಳುಹಿಸಿದ್ದರು. ಒಬ್ಬರು ಅರೆಬೆತ್ತಲಾಗಿ ಮ್ಯಾನ್‌ಹೋಲ್‌ಗೆ ಇಳಿದರೆ, ಮತ್ತೊಬ್ಬರು ಮೇಲೆ ನಿಂತು ಸಹಾಯ ಮಾಡಿದರು. ಬರಿಗೈಯಲ್ಲಿ ಕಸ ತೆಗೆದು, ಹೊರಗೆ ಹಾಕಿದರು.

ಶುಚಿಗೊಳಿಸಲು ಪೌರಕಾರ್ಮಿಕರು ಕೈಗವಸು ಹಾಕಿರಲಿಲ್ಲ. ಇದಕ್ಕೆ ಅತ್ಯಾಧುನಿಕ ಯಂತ್ರಗಳು ಬಂದಿವೆಯಾದರೂ ಬಳಕೆಯಾಗದಿರುವ ಕುರಿತು ಅವರೇ ಅಸಮಾಧಾನ ಹೊರಹಾಕಿದರು.

ಎಚ್‌1–ಎನ್‌1 ಶಂಕೆ: ಎರಡು ಸಾವು

ಅರಕಲಗೂಡು: ತಾಲ್ಲೂಕಿನ ಕಣಿಯಾರು ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು ಎಚ್‌1–ಎನ್‌1 ಶಂಕೆ ವ್ಯಕ್ತವಾಗಿದೆ.

ಶಿವನಂಜೇಗೌಡ (56) ಮೃತರು. ಜ್ವರದಿಂದ ಬಳಲುತ್ತಿದ್ದು, ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶುಕ್ರವಾರ ಸಂಜೆ ಮೃತಪಟ್ಟಿದ್ದಾರೆ. ಎಚ್‌1ಎನ್1 ಸೋಂಕು ತಗುಲಿ ಮೃತಪಟ್ಟಿರುವ ಶಂಕೆ ವ್ಯಕ್ತವಾದ ಕಾರಣ ಆರೋಗ್ಯ ಇಲಾಖೆ ಸಿಬ್ಬಂದಿ, ಅಧಿಕಾರಿಗಳು ಶನಿವಾರ ಮನೆ–ಮನೆ ಭೇಟಿ ನೀಡಿ ತಪಾಸಣೆ ನಡೆಸಿದರು.

ಪ್ರಯೋಗಾಲಯದ ವರದಿ ಬಂದಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ತಪಾಸಣೆ ನಡೆಸಲಾಗುತ್ತಿದೆ. ತಾಲ್ಲೂಕಿನ ನಿಲುವಾಗಿಲು ಗ್ರಾಮದಲ್ಲಿ ಮಹಿಳೆಯೊಬ್ಬರಿಗೆ ಸೋಂಕು ಕಾಣಿಸಿಕೊಂಡಿದ್ದು, ಇದೀಗ ಗುಣಮುಖರಾಗಿದ್ದಾರೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸ್ವಾಮಿಗೌಡ ತಿಳಿಸಿದ್ದಾರೆ.

ಬಾಣಂತಿ ಸಾವು: ಬೆಳಗಾವಿ: ಜಿಲ್ಲೆಯ ನಿಪ್ಪಾಣಿ ತಾಲ್ಲೂಕಿನ ಅಕ್ಕೋಳ ಗ್ರಾಮದ ಬಾಣಂತಿಯೊಬ್ಬರು ಎಚ್‌1ಎನ್‌1 ಜ್ವರದಿಂದ  ಸಾವಿಗೀಡಾಗಿದ್ದಾರೆ.

ಮಗುವಿಗೆ ಜನ್ಮ ನೀಡಿದ ಒಂದೆರಡು ದಿನಗಳ ನಂತರ ತೀವ್ರ ಕೆಮ್ಮು, ನೆಗಡಿಗೆ ಒಳಗಾದರು. ಜ್ವರ ಕೂಡ ಬಾಧಿಸತೊಡಗಿತು. ಹೆಚ್ಚಿನ ಚಿಕಿತ್ಸೆಗಾಗಿ ಕೊಲ್ಹಾಪುರಕ್ಕೆ ಹೋಗಿದ್ದರು.  ‘ಮೃತ ಮಹಿಳೆಗೆ ಎಚ್‌1ಎನ್‌1 ಸೋಂಕು ತಗುಲಿತ್ತು ಎಂದು ಅವರಿಗೆ ಚಿಕಿತ್ಸೆ ನೀಡಿದ್ದ ಕೊಲ್ಹಾಪುರದ ಖಾಸಗಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಆದರೆ, ಅವರು ವಿಶ್ವ ಆರೋಗ್ಯ ಸಂಸ್ಥೆ ಮಾನದಂಡ ಪ್ರಕಾರ ಪರೀಕ್ಷೆ ಮಾಡಿಲ್ಲ. ಹೀಗಾಗಿ ಅಧಿಕೃತವಾಗಿ ಹೇಳಲು ಸಾಧ್ಯವಿಲ್ಲ’ ಎಂದು ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಪ್ಪಾಸಾಹೇಬ ನರಟ್ಟಿ ತಿಳಿಸಿದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !