ಶನಿವಾರ, ಆಗಸ್ಟ್ 17, 2019
24 °C

ಈ ಬಾರಿ ಮುಂಗಾರು ಮಳೆ ಕೊರತೆಯಾಗದು: ಸ್ಕೈಮೆಟ್‌

Published:
Updated:
Prajavani

ಬೆಂಗಳೂರು: ಈ ಬಾರಿಯ ಮುಂಗಾರು ಮಳೆ ವಾಡಿಕೆಯಷ್ಟು ಸುರಿಯಲಿದೆ ಎಂದು ಹವಾಮಾನ ಮುನ್ಸೂಚನೆಯ ‘ಸ್ಕೈಮೆಟ್‌’ ಸಂಸ್ಥೆಯು ಹೇಳಿದೆ. ಮುಂಗಾರು ಮಳೆ ಕೊರತೆ ಆಗದಿರುವ ಸಾಧ್ಯತೆ ಶೇ 50‌ಕ್ಕಿಂತ ಹೆಚ್ಚು ಎಂದು ಸ್ಕೈಮೆಟ್ ಅಂದಾಜಿಸಿದೆ.

ಹವಾಮಾನಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ದತ್ತಾಂಶ ಸಂಗ್ರಹ ಕೆಲಸ ಪ್ರಗತಿಯಲ್ಲಿದ್ದು, ಇಷ್ಟು ಮೊದಲೇ ಖಚಿತವಾದ ಅಂಕಿ–ಅಂಶಗಳನ್ನು ನೀಡಲಾಗದು ಎಂದು ಸಂಸ್ಥೆ ತಿಳಿಸಿದೆ.

ಪ್ರತಿ ವರ್ಷ ಮಾರ್ಚ್ 15 ಹಾಗೂ ಏಪ್ರಿಲ್ 15ರಂದು ಸಂಸ್ಥೆಯು ಮುಂಗಾರು ಮಾರುತಗಳ ಮುನ್ಸೂಚನೆಯನ್ನು ನೀಡುತ್ತದೆ. ಈ ಬಾರಿಯೂ ನಿಗದಿತ ದಿನದಂದೇ ಹವಾಮಾನ ಮಾಹಿತಿ ಹೊರಬೀಳಲಿದೆ. ಸ್ಕೈಮೆಟ್‌ ಸಂಸ್ಥೆಯು 2012ರಿಂದಲೂ ಹವಾಮಾನ ಮುನ್ಸೂಚನೆ ನೀಡುತ್ತಿದೆ.  

ಎಲ್‌ನಿನೊ ಕಡಿಮೆ: ಮುಂಗಾರು ಮಾರುತಗಳ ಮೇಲೆ ಪ್ರಭಾವ ಬೀರುವ ಎಲ್‌ನಿನೊ ವಿದ್ಯಮಾನ ಈ ಬಾರಿಯೂ ಸುದ್ದಿಯಲ್ಲಿದೆ. ಡಿಸೆಂಬರ್‌ ತಿಂಗಳಿನವರೆಗೂ ಎಲ್‌ನಿನೊ ಏರುಗತಿಯಲ್ಲಿತ್ತು. ಆದರೆ ಆ ಬಳಿಕ ಉಷ್ಣಾಂಶ ಸತತವಾಗಿ ಕುಸಿತ ಕಾಣುತ್ತಿದೆ. ಈ ಬಾರಿಯದ್ದು ಕಡಿಮೆ ಪ್ರಭಾವದ ಎಲ್‌ನಿನೊ ವರ್ಷವಾಗಲಿದೆ. ಈಗಿನ ವಿದ್ಯಮಾನವನ್ನು ಗಮನಿಸಿದರೆ, ಬರ ಆವರಿಸುವುದಿಲ್ಲ ಎಂದು ಖಚಿತವಾಗಿ ಹೇಳಬಹುದು. ಆದರೆ ಭಾರಿ ಮಳೆ ಸುರಿಯುತ್ತದೆ ಎಂದೂ ಅರ್ಥವಲ್ಲ ಎಂದು ಸಂಸ್ಥೆ ಅಭಿಪ್ರಾಯಪಟ್ಟಿದೆ.

***

ಮುಂಗಾರು ಆರಂಭದ ಹೊತ್ತಿಗೆ ಎಲ್‌ನಿನೊ ಶೇ 50ರಷ್ಟು ಕಡಿಮೆಯಾಗಲಿದೆ. ಆ ಬಳಿಕ ಕ್ರಮೇಣ ಇಳಿಕೆಯಾಗಲಿದೆ 
–ಜತಿನ್ ಸಿಂಗ್, ಸ್ಕೈಮೆಟ್ ಎಂ.ಡಿ 

Post Comments (+)