ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಂಎ ವಂಚನೆ ಪ್ರಕರಣ: ಶರಣಾಗಲು ಸಿದ್ಧ,–ಮನ್ಸೂರ್‌

ಕೋಟ್ಯಂತರ ರೂಪಾಯಿ ವಂಚಕನಿಂದ ವಿಡಿಯೊ ಬಿಡುಗಡೆ l ಜೀವಕ್ಕಿದೆ ಆತಂಕ
Last Updated 23 ಜೂನ್ 2019, 19:03 IST
ಅಕ್ಷರ ಗಾತ್ರ

ಬೆಂಗಳೂರು: ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ವಂಚಿಸಿ ತಲೆಮರೆಸಿಕೊಂಡಿರುವ ಐಎಂಎ ಸಮೂಹ ಕಂಪನಿ
ಗಳ ಮಾಲೀಕ ಮೊಹಮ್ಮದ್ ಮನ್ಸೂರ್ ಖಾನ್‌ನದ್ದು ಎನ್ನಲಾದ ವಿಡಿಯೊ ಭಾನುವಾರ ಬಿಡುಗಡೆಯಾಗಿದೆ. ಅದರಲ್ಲಿ ‘ನಾನು ಶರಣಾಗಲು ಸಿದ್ಧನಿದ್ದೇನೆ. ತನಿಖೆಗೂ ಸಹಕರಿಸುತ್ತೇನೆ. ಪ್ರಕರಣವನ್ನು ಸಿಬಿಐಗೆ ವಹಿಸಬೇಕು’ ಎಂದು ಕೇಳಿಕೊಂಡಿದ್ದಾನೆ.

‘ಐಎಂಎ’ ಗ್ರೂಪ್‌ನ ಯೂ ಟ್ಯೂಬ್‌ ಚಾನಲ್‌ಗೆ ಅಪ್‌ಲೋಡ್‌ ಮಾಡಿರುವ 18 ನಿಮಿಷಗಳ ಈ ವಿಡಿಯೊದಲ್ಲಿ, ‘ಐಎಂಎ ಅವನತಿ ಹಾದಿ ಹಿಡಿಯಲು ಪ್ರಭಾವಿ ವ್ಯಕ್ತಿಗಳು ಕಾರಣರಾಗಿದ್ದಾರೆ. ಅವರ ಹೆಸರನ್ನು ಬಹಿರಂಗಪಡಿಸಿದರೆ, ನನ್ನನ್ನು ಮತ್ತು ಕುಟುಂಬವನ್ನು ಜೀವಂತವಾಗಿರಲು ಬಿಡುವುದಿಲ್ಲ’ ಎಂದು ಮನ್ಸೂರ್‌ ಹೇಳಿದ್ದಾನೆ. ಅಷ್ಟೇ ಅಲ್ಲ, ಕೆಲವರು 12 ವರ್ಷಗಳಿಂದ ಐಎಂಎ ಸಂಸ್ಥೆಯನ್ನು ನಷ್ಟಕ್ಕೆ ದೂಡಲು ಷಡ್ಯಂತ್ರ ನಡೆಸಿದ್ದರು ಎಂದು ಆರೋಪಿಸಿದ್ದಾನೆ. ಈ ವಿಡಿಯೊವನ್ನು ಎಲ್ಲಿಂದ ಅಪ್‌ಲೋಡ್‌ ಮಾಡಲಾಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲ.

ದೇಶ ಬಿಟ್ಟು ಹೋಗಲು ಕಾರಣವಾದ ಅಂಶಗಳನ್ನು ವಿವರವಾಗಿ ಬಿಚ್ಚಿಟ್ಟಿದ್ದು, ‘ರಾಜ್ಯಸಭೆ ಮಾಜಿ ಸದಸ್ಯ ಕೆ.ರೆಹಮಾನ್‌ ಖಾನ್‌, ವಿಧಾನ ಪರಿಷತ್‌ ಜೆಡಿಎಸ್‌ ಸದಸ್ಯ ಶರವಣ ಹಾಗೂ ಕೆಲವು ರಿಯಲ್‌ ಎಸ್ಟೇಟ್‌ ಡೆವಲಪರ್ಸ್‌ಗಳು, ಚಿಟ್‌ ಫಂಡ್‌ಗಳ ಮಾಲೀಕರು, ಮೌಲ್ವಿಗಳು ಸಂಚು ರೂಪಿಸಿ ಐಎಂಎ ಕಂಪನಿ ಮುಚ್ಚಲು ಕಾರಣರಾಗಿದ್ದಾರೆ‌. ಎಲ್ಲರ ಹೆಸರನ್ನು ಪೊಲೀಸರು ಮತ್ತು ನ್ಯಾಯಾಲಯದ ಎದುರು ಬಹಿರಂಗಪಡಿಸಲು ಸಿದ್ಧನಿದ್ದೇನೆ’ ಎಂದಿದ್ದಾನೆ.

40 ಸಾವಿರಕ್ಕೂ ಹೆಚ್ಚು ಹೂಡಿಕೆದಾರರಿಗೆ ₹ 1,500 ಕೋಟಿಗೂ ಹೆಚ್ಚು ಹಣ ವಂಚಿಸಿದ ಆರೋಪಿ ಮನ್ಸೂರ್‌ ವಿರುದ್ಧ ಕಮರ್ಷಿಯಲ್ ಸ್ಟ್ರೀಟ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣವನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಕೈಗೆತ್ತಿಕೊಂಡಿದ್ದು, ಈಗಾಗಲೇ ಐಎಂಎ ಜ್ಯುವೆಲ್ಸ್ ಸೇರಿದಂತೆ ವಿವಿಧ ಕಡೆ ದಾಳಿ ನಡೆಸಿ ಕೋಟ್ಯಂತರ ಮೊತ್ತದ ಚಿನ್ನಾಭರಣ ಜಪ್ತಿ ಮಾಡಿದೆ. ಆಸ್ತಿ ದಾಖಲೆಗಳನ್ನೂ ವಶಪಡಿಸಿಕೊಂಡಿದೆ. ಮನ್ಸೂರ್‌ ಪತ್ತೆಗೆ ಬ್ಲೂ ಕಾರ್ನರ್‌ ನೋಟಿಸ್‌ ಕೂಡಾ ಹೊರಡಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿರುವಾಗಲೇ ಈ ವಿಡಿಯೊ ಹೊರಬಂದಿದೆ.

‘ಈ ಹಿಂದೆ ಒಂದು ಆಡಿಯೊ ಬಿಡುಗಡೆ ಮಾಡಿದ್ದೆ. ಅದರಲ್ಲೂ ಕೆಲವು ವಿಷಯಗಳನ್ನು ಬಹಿರಂಗಪಡಿಸಿದ್ದೆ. ನನ್ನ ಕುಟುಂಬದ ಬಗ್ಗೆ ಅದರಲ್ಲಿ ಹೇಳಿಕೊಂಡಿದ್ದೆ. ಇಂದು, ಈ ವಿಡಿಯೊ ಬಿಡುಗಡೆ ಮಾಡುತ್ತಿರುವ ಉದ್ದೇಶವಿಷ್ಟೆ: ಜೂನ್‌ 14ರಂದು ನಾನು ಭಾರತಕ್ಕೆ ಮರಳಲು ವಿಮಾನ ನಿಲ್ದಾಣಕ್ಕೆ ಹೋಗಿದ್ದೆ. ಆದರೆ, ನಾನು ಎಲ್ಲಿದ್ದೆನೊ, ಅಲ್ಲಿಂದ ಮುಂದಕ್ಕೆ ಹೋಗಲು ಅವಕಾಶ ಸಿಗಲಿಲ್ಲ. ಟಿಕೆಟ್‌ ರದ್ದು ಮಾಡಲಾಗಿತ್ತು. ನಾನು ದೇಶ ಬಿಟ್ಟಿದ್ದು ಮೊದಲ ತಪ್ಪು. ಆದರೆ, ಆಡಳಿತ ಮಂಡಳಿ ಮತ್ತು ನನ್ನ ಸುತ್ತಮುತ್ತ ಇದ್ದವರೇ ನನಗೆ ಕಿರುಕುಳ
ನೀಡಿದ್ದಾರೆ. ಹೀಗಾಗಿ ನನ್ನ ಕುಟುಂಬವನ್ನೂ ರಹಸ್ಯವಾಗಿಡಬೇಕಾಯಿತು’ ಎಂದು ಮನ್ಸೂರ್‌ ಹೇಳಿಕೊಂಡಿದ್ದಾನೆ.

ತನ್ನ ಮೊಬೈಲ್‌ ಸಂಖ್ಯೆಯನ್ನೂ ಆಡಿಯೊದಲ್ಲಿ ಹಂಚಿಕೊಂಡಿರುವ ಮನ್ಸೂರ್, ‘ದೇಶಕ್ಕೆ ವಾಪಸ್‌ ಆಗುವುದಕ್ಕೂ ಮುನ್ನ ಯಾರನ್ನು ಭೇಟಿ ಮಾಡಿ ಶರಣಾಗಬೇಕು ಎಂಬ ವಿವರಗಳನ್ನು ನನ್ನ ಮೊಬೈಲ್‌ ಸಂಖ್ಯೆಗೆ ಮೆಸೇಜ್‌ ಮಾಡಿ’ ಎಂದು ನಗರ ಪೊಲೀಸ್‌ ಕಮಿಷನರ್‌ ಅಲೋಕ್‌ ಕುಮಾರ್‌ ಬಳಿ ಮನವಿ ಮಾಡಿದ್ದಾನೆ.

ಖಾನ್‌ ಜತೆ ಏನು ಸಂಬಂಧ?’

‘ಐಎಂಎ ಕಚೇರಿ ಮುಚ್ಚಿಸಲು ನಾವು ಹೇಗೆ ಕಾರಣರಾಗುತ್ತೇವೆ. ಮನ್ಸೂರ್‌ಗೂ ನನಗೂ ಏನು ಸಂಬಂಧ. ನಾನು ಅವರನ್ನು ನೋಡಿಯೇ ಇಲ್ಲ’ ಎಂದು ವಿಧಾನ ಪರಿಷತ್‌ ಜೆಡಿಎಸ್‌ ಸದಸ್ಯ ಟಿ.ಎ.ಶರವಣ ಹೇಳಿದರು.

‘ಹಲವು ಜ್ಯುವೆಲ್ಲರಿ ಮಾಲೀಕರು ನನ್ನ ಬಳಿಗೆ ಬಂದು, ಐಎಂಎ ಜ್ಯುವೆಲ್ಸ್‌ನಲ್ಲಿ ಕಡಿಮೆ ಹಣಕ್ಕೆ ಚಿನ್ನ ಮಾರಾಟ ಮಾಡುತ್ತಿರುವ ಬಗ್ಗೆ ದೂರಿದ್ದರು. ಅದಕ್ಕೆ ನಾನು, ಗುಣಮಟ್ಟದಲ್ಲಿ ಮೋಸ ಮಾಡಿದರೆ ನಾವು ಕೇಳಬಹುದು. ಕಡಿಮೆ ಹಣಕ್ಕೆ ಮಾರಿದರೆ ಕೇಳಲು ಆಗುವುದಿಲ್ಲ ಎಂದಿದ್ದೆ. ಜ್ಯವೆಲ್ಲರ್ಸ್‌ ಅಸೋಸಿಯೇಷನ್‌ ಅಧ್ಯಕ್ಷನಾಗಿ ನನ್ನ ಕೆಲಸ ಮಾಡಿದ್ದೇನೆ. ಅದು ಬಿಟ್ಟರೆ, ಐಎಂಎ ಬಗ್ಗೆ ನಗೇನೂ ಗೊತ್ತಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.

ಮೊದಲಿನಿಂದಲೂ ಐಎಂಎ ಚಟುವಟಿಕೆಗಳನ್ನು ವಿರೋಧಿಸಿಕೊಂಡು ಬಂದಿದ್ದೇನೆ. ಮನ್ಸೂರ್ ಖಾನ್‌ಗೂ ನನಗೂ ಯಾವುದೇ ಸಂಬಂಧ ಇಲ್ಲ. ಸ್ನೇಹವೂ ಇಲ್ಲ ಎಂದು ರಾಜ್ಯಸಭೆ ಮಾಜಿ ಸದಸ್ಯಕೆ.ರೆಹಮಾನ್‌ ಖಾನ್‌ ಹೇಳಿದ್ದಾರೆ.

‘ರಕ್ಷಣೆ ಕೊಡಲು ಸಿದ್ಧ’

‘ಮನ್ಸೂರ್‌ ವಾಪಸು ಬರುವುದಾದರೆ ಬರಲಿ. ರಕ್ಷಣೆ ಕೊಡಲು ನಾವು ಸಿದ್ಧರಿದ್ದೇವೆ. ಕಮಿಷನರ್‌ಗೆ ಅವನು ಮನವಿ ಮಾಡಿದ್ದಾನೆ. ಹೀಗಾಗಿ ಅವರೇ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ’ ಎಂದು ಐಎಂಎ ವಂಚನೆ ಪ್ರಕರಣ ತನಿಖೆ ನಡೆಸುತ್ತಿರುವ ಎಸ್‌ಐಟಿ ತನಿಖಾಧಿಕಾರಿ ಗಿರೀಶ್ ಹೇಳಿದರು.

‘ಮನ್ಸೂರ್‌ ಖಾನ್ ಆರೋಪಿ. ಯಾರ ಮೇಲೆ ಬೇಕಾದರೂ ಆರೋಪ ಮಾಡಬಹುದು. ಆತ ಕೆಲವು ರಾಜಕಾರಣಿಗಳ ಹೆಸರು ಪ್ರಸ್ತಾಪಿಸಿರುವ ಮಾಹಿತಿ ಇದೆ. ಅಗತ್ಯ ಬಿದ್ದರೆ ಅವರನ್ನೂ ವಿಚಾರಣೆಗೆ ಒಳಪಡಿಸುತ್ತೇವೆ’ ಎಂದರು.

₹ 10 ಕೋಟಿ ಕೇಳಿದ್ದ ಅಧಿಕಾರಿ

‘ಐಎಂಎಗೆ ಹಣ ನೀಡಲು ಎನ್‌ಬಿಎಫ್‌ಸಿ (ಬ್ಯಾಂಕೇತರ ಹಣಕಾಸು ಸಂಸ್ಥೆ) ಸಿದ್ಧವಿತ್ತು. ಆದರೆ, ಅಗತ್ಯವಾದ ಪತ್ರ ನೀಡಲು ಒಬ್ಬ ಐಎಎಸ್‌ ಅಧಿಕಾರಿ ₹ 10 ಕೋಟಿ ಕೇಳಿದರು. ಅಷ್ಟು ಹಣ ಕೊಡಲು ವಿಳಂಬವಾಯಿತು. ಈ ವಿಷಯವನ್ನು ನ್ಯಾಯಾಲಯದ ಮುಂದಿಡಲು ಸಿದ್ಧನಿದ್ದೇನೆ’ ಎಂದೂ ಮನ್ಸೂರ್‌ ವಿವರಿಸಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT