ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಲ್ಯಾಣ ಕರ್ನಾಟಕದ ಹಿರಿಮೆ ಸಾರಲಿದೆ ಸಮ್ಮೇಳನ’

Last Updated 11 ನವೆಂಬರ್ 2019, 15:06 IST
ಅಕ್ಷರ ಗಾತ್ರ

ಕಲಬುರ್ಗಿ: ‘ಸೂಫಿ ಸಂತರ ಕರ್ಮಭೂಮಿಯಲ್ಲಿ ನಡೆಯಲಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಉಳಿದೆಲ್ಲ ಸಮ್ಮೇಳನಗಳಿಗೂ ಮಾದರಿಯಾಗಲಿದೆ. ಆತಿಥ್ಯಕ್ಕೆ ಹೆಸರುವಾಸಿಯಾದ ಈ ಭಾಗದ ಹಿರಿಮೆಯನ್ನು ಈ ಸಮ್ಮೇಳನ ಜಗತ್ತಿಗೆ ತೋರಿಸಲಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ ತಿಳಿಸಿದರು.

ನಗರದಲ್ಲಿ ಸೋಮವಾರ ಸಾಹಿತಿಗಳು ಹಾಗೂ ಕಲಾವಿದರ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು, ‘ಕಲ್ಯಾಣ ಕರ್ನಾಟಕ ಎಂದು ನಾಮಕರಣವಾದ ಮೇಲೆ ನಡೆಯುತ್ತಿರುವ ಮೊದಲ ಸಮ್ಮೇಳನ ಇದಾಗಿದೆ. ಹಿಂದುಳಿದ ಪ್ರದೇಶ, ಒಣಭೂಮಿ ಎಂಬ ಭ್ರಮೆಯಲ್ಲೇ ಈ ಭಾಗವನ್ನು ಇನ್ನೂ ನೋಡಲಾಗುತ್ತಿದೆ. ನೈಜತೆ ಹೊರಚೆಲ್ಲುವ ಅಭಿವೃದ್ಧಿ, ಸಂಸ್ಕೃತಿ, ಸವಾಲುಗಳಿಗೆ ಸಂಬಂಧಿಸಿದ ವಿಷಯಗಳಿಗೆ ಆದ್ಯತೆ ನೀಡಲಾಗುವುದು’ ಎಂದರು.

‘ಸಮ್ಮೇಳನದ ಯಶಸ್ವಿಗೆ ಹಗಲಿರುಳೂ ದುಡಿಯುವಂಥ 200 ಕಾರ್ಯಕರ್ತರ ಒಂದು ತಂಡ ರಚಿಸಲಾಗುವುದು. ಜನಪ್ರತಿನಿಧಿಗಳು, ಸಾಹಿತಿಗಳು, ಕಲಾವಿದರು ಹಾಗೂ ಹೋರಾಟಗಾರರ ಬಲವನ್ನೂ ಸಮ್ಮೇಳನಕ್ಕೆ ಬಳಸಿಕೊಳ್ಳಲಾಗುವುದು. ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದ್ದೇವೆ, ನಿರ್ಲಕ್ಷ್ಯಕ್ಕೆ ಒಳಪಟ್ಟಿದ್ದೇವೆ ಎಂಬ ಭಾವನೆ ಬಹಳ ವರ್ಷಗಳಿಂದ ಜನಮಾನಸದಲ್ಲಿದೆ. ಹಾಗಾಗಿ, ಸಮ್ಮೇಳನದ ಮೂಲಕವೇ ಜನರ ಭಾವನೆಗೆ ಸ್ಪಂದಿಸುವ ಕೆಲಸ ಮಾಡುತ್ತೇವೆ. ಅದನ್ನು ಪುಸ್ತಕ ರೂಪದಲ್ಲೂ ಹೊರತರುತ್ತೇವೆ’ ಎಂದು ಹೇಳಿದರು.

‘ಸಮ್ಮೇಳನಾಧ್ಯಕ್ಷರು ಹಾಗೂ ಗೋಷ್ಠಿಗಳಿಗೆ ಆಯ್ಕೆ ಮಾಡುವಲ್ಲಿ ಕೂಡ ಹೆಚ್ಚಿನ ಮುತುವರ್ಜಿ ವಹಿಸಿದ್ದೇವೆ. ಪ್ರತಿಭಾ ನ್ಯಾಯ, ಪ್ರಾದೇಶಿಕ ನ್ಯಾಯ ಹಾಗೂ ಸಾಮಾಜಿಕ ನ್ಯಾಯ ಎಂಬ ಮೂರು ಸೂತ್ರಗಳನ್ನು ಆಧರಿಸಿಯೇ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು. ಈ ಬಗ್ಗೆ ಮಂಗಳವಾರ (ನ. 12) ಸಭೆ ಕರೆಯಲಾಗಿದ್ದು, ಸಮ್ಮೇಳನದ ಸ್ಪಷ್ಟ ಚಿತ್ರಣ ಹೊರಬೀಳಲಿದೆ’ ಎಂದೂ ಅವರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT