ಭಾನುವಾರ, ಆಗಸ್ಟ್ 25, 2019
27 °C

ಬಿಸಿಲೂರಲ್ಲಿ ಹಸಿರು ಮ್ಯಾರಥಾನ್

Published:
Updated:

ವಿಜಯಪುರ: ಚುಮು ಚುಮು ಚಳಿ..ಪಿಸುಮಾತಿನ ಮೊಗಸಾಲೆಯ ಆವರಣದಲ್ಲಿ ಹಸಿರು ಹೊದಿಕೆ ಹೊದ್ದಂತೆ ಕಂಡ ಹಸಿರು ವರ್ಣದ ಟೀಶರ್ಟ್ ಧರಿಸಿದ ಸಾಲು.. ಎತ್ತ ನೋಡಿದರತ್ತ ಸಾಲು ಸಾಲು ಸ್ಪರ್ಧಾಳುಗಳು..ಭೂರಮೆಗೆ ಹಸಿರು ಹೊದಿಸಿದ ಹಾದಿಗಳು..
-ಇವು ನಗರದ ಐತಿಹಾಸಿಕ ಗೋಳಗುಮ್ಮಟ ಮುಂಭಾಗ ಭಾನುವಾರ ಬೆಳಗಿನ ಜಾವ ಕಂಡು ಬಂದ ದೃಶ್ಯಗಳು..

ಹಸಿರು ವಿಜಯಪುರ ಅಂಗವಾಗಿ ವೃಕ್ಷ ಪ್ರತಿಷ್ಠಾನ ಅಭಿಯಾನ ವತಿಯಿಂದ ಹಮ್ಮಿಕೊಂಡಿದ್ದ ಮ್ಯಾರಥಾನ್ ನಲ್ಲಿ ಎಲ್ಲಿ ನೋಡಿದರಲ್ಲಿ ಹಸಿರು ಬಣ್ಣದ ಉಡುಗೆ ತೊಟ್ಟ ಸಾಲುಗಳು..ಅರೆರೆ ಏನಿದು, ಬಿಸಿಲು ನಾಡಲ್ಲಿ ಕಂಗೊಳಿಸುತ್ತಿರುವ ಹಸಿರು ಹಾದಿ ಎಂಬ ಭಾವ. ರಸ್ತೆಯ ಇಕ್ಕೆಲಗಳಲ್ಲೂ ನಾಮುಂದು ತಾಮುಂದು ಎಂಬ ಕನಸಿನ ರೆಕ್ಕೆಹೊತ್ತ ಸ್ಪರ್ಧಾಳುಗಳ ಸಾಲು..


ಶೇ 0.17ರಷ್ಟು ಸರಾಸರಿ ಅರಣ್ಯ ಭೂಮಿ ಹೊಂದಿರುವ ವಿಜಯಪುರವನ್ನು ಕಡೇ ಪಕ್ಷ ಶೇ 5ರಷ್ಟು ಅರಣ್ಯ ಪ್ರದೇಶವನ್ನು ಹೊಂದಿದ ಜಿಲ್ಲೆಯನ್ನಾಗಿ ಪರಿವರ್ತಿಸುವ ಉದ್ದೇಶದಿಂದ ವೃಕ್ಷ ಪ್ರತಿಷ್ಠಾನ ಅಭಿಯಾನವು ಭಾನುವಾರ ಹಮ್ಮಿಕೊಂಡಿದ್ದ ಮ್ಯಾರಥಾನ್ ನೋಡುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. 

ಯಶ್ ಅಭಿಮಾನಿಗಳಿಗೆ ನಿರಾಸೆ: ಚಲನಚಿತ್ರ ರಂಗದಲ್ಲಿ ತನ್ನದೇಯಾದ ಹೆಸರು ಮಾಡಿರುವ ಯಶ್ ಇದರ ರಾಯಭಾರಿ. ಮ್ಯಾರಥಾನ್ ನಲ್ಲಿ ಅವರು ಪಾಲ್ಗೊಳ್ಳುವ ಸುದ್ದಿ ತಿಳಿದು ಬಂದಿದ್ದ ಯುವಕರಿಗೆ ಯಶ್ ಬಾರದ್ದರಿಂದ ನಿರಾಸೆಯಾಯಿತು.

ಗೋಳಗುಮ್ಮಟದಿಂದ ಹೊರಟ ಮ್ಯಾರಥಾನ್, ಗಾಂಧಿ ಚೌಕ್ ಮಾರ್ಗವಾಗಿ ಬಿ.ಎಲ್.ಡಿ.ಇ ಸಂಸ್ಥೆಯನ್ನು ತಲುಪಿತು. ಸಸಿಗಳನ್ನು ನೆಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಸ್ವಯಂ ಸೇವಕರು ಘೋಷಣೆ ಕೂಗಿದರು. ವಿವಿಧ ವಿಭಾಗಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. 

ವೃಕ್ಷ ಪ್ರತಿಷ್ಠಾನ ಅಭಿಯಾನದ ರೂವಾರಿ, ಶಾಸಕ ಎಂ.ಬಿ.ಪಾಟೀಲ ನೇತೃತ್ವ ವಹಿಸಿದ್ದರು. ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಉದ್ಯಮಿ ಎಸ್.ಎಚ್.ಗುಡ್ಡೋಡಗಿ, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಪ್ರಸನ್ನ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕ್ಕಂ, ಪಾಲಿಕೆ ಆಯುಕ್ತ ಡಾ.ಔದ್ರಾಮ, ಅರಣ್ಯ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

Post Comments (+)