ಸುದ್ದಿ ಮಾಧ್ಯಮಗಳಿಂದಲೂ ಕಾಂಗ್ರೆಸ್‌ಗೆ ಅನ್ಯಾಯ

ಬುಧವಾರ, ಏಪ್ರಿಲ್ 24, 2019
29 °C
ಕಾಂಗ್ರೆಸ್‌ ಹಿರಿಯ ನಾಯಕಿ ಮಾರ್ಗರೇಟ್‌ ಆಳ್ವ ಬೇಸರ

ಸುದ್ದಿ ಮಾಧ್ಯಮಗಳಿಂದಲೂ ಕಾಂಗ್ರೆಸ್‌ಗೆ ಅನ್ಯಾಯ

Published:
Updated:
Prajavani

ಹುಬ್ಬಳ್ಳಿ: ಸುದ್ದಿ ಮಾಧ್ಯಮಗಳಿಂದ ಅದರಲ್ಲೂ ವಿಶೇಷವಾಗಿ ಟಿವಿ ಚಾನಲ್‌ಗಳಿಂದ ಕಾಂಗ್ರೆಸ್‌ಗೆ ತೀವ್ರ ಅನ್ಯಾಯವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡುತ್ತಿರುವಷ್ಟು ಆದ್ಯತೆ ಮತ್ತು ಪ್ರಚಾರವನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ನೀಡುತ್ತಿಲ್ಲ ಎಂದು ಕಾಂಗ್ರೆಸ್‌ ಹಿರಿಯ ನಾಯಕಿ ಮಾರ್ಗರೇಟ್‌ ಆಳ್ವ ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಮುಕ್ತ, ನ್ಯಾಯಸಮ್ಮತ ಚುನಾವಣೆ ನಡೆಯುತ್ತಿಲ್ಲ. ಭಯ, ಬೆದರಿಕೆ, ಆತಂಕದ ವಾತಾವರಣದಲ್ಲಿ ಚುನಾವಣೆ ನಡೆಯುತ್ತಿದೆ ಎಂದು ಆರೋಪಿಸಿದರು.

ಚುನಾವಣಾ ಆಯೋಗ ಪಾರದರ್ಶಕವಾಗಿ ನಡೆದುಕೊಳ್ಳದೇ ತಾರತಮ್ಯ ಮಾಡುತ್ತಿದೆ. ಪ್ರಧಾನಿ ಮೋದಿ ಅವರು ನೀತಿ ಸಂಹಿತೆ ಉಲ್ಲಂಘಿಸುತ್ತಿದ್ದರೂ ಅತ್ತ ಗಮನ ಹರಿಸುತ್ತಿಲ್ಲ ಎಂದು ಅವರು ದೂರಿದರು.

ಐಟಿ ದಾಳಿ ಮೂಲಕ ವಿರೋಧ ಪಕ್ಷಗಳನ್ನು ಹಣಿಯುವ, ಬೆದರಿಸುವ ಕೆಲಸವನ್ನು ಮೋದಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ವಿರೋಧ ಪಕ್ಷಗಳು ಮಾತ್ರ ಹಣವನ್ನು ಖರ್ಚು ಮಾಡಿ ಚುನಾವಣೆ ಎದುರಿಸುತ್ತಿವೆ. ಬಿಜೆಪಿ ಹಣವನ್ನೇ ಖರ್ಚು ಮಾಡುತ್ತಿಲ್ಲ ಎಂಬಂತೆ ಬಿಂಬಿಸಲಾಗುತ್ತಿದೆ. ಹಾಗಾದರೆ, ಬಿಜೆಪಿ ಆಯೋಜಿಸುತ್ತಿರುವ ಸಮಾವೇಶಕ್ಕೆ ಆಗುತ್ತಿರುವ ಕೋಟ್ಯಂತರ ರೂಪಾಯಿ ಸ್ವರ್ಗದಿಂದ ಏನಾದರೂ ಉದುರುತ್ತಿದೆಯಾ ಎಂದು ಪ್ರಶ್ನಿಸಿದರು. 

ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮೋದಿ ಅವರು ನೀಡಿದ್ದ ಯಾವೊಂದು ಭರವಸೆಯನ್ನು ಈಡೇರಿಸಿಲ್ಲ. ನಿರೀಕ್ಷಿತ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗಲಿಲ್ಲ, ಕಪ್ಪು ಹಣ ನಿರ್ಮೂಲನೆಯಾಗಿಲ್ಲ, ಎಲ್ಲರ ಬ್ಯಾಂಕ್‌ ಖಾತೆಗೆ ₹ 15 ಲಕ್ಷ ಸಂದಾಯವಾಗಿಲ್ಲ ಎಂದು ಆರೋಪಿಸಿದರು.

ಬಿ.ಎಸ್‌.ಯಡಿಯೂರಪ್ಪ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ. ಲೋಕಸಭಾ ಚುನಾವಣೆ ಫಲಿತಾಂಶ ಬಂದ ಮರುದಿನವೇ ರಾಜ್ಯ ಸಮ್ಮಿಶ್ರ ಸರ್ಕಾರ ಬಿದ್ದುಹೋಗುತ್ತದೆ ಎಂದು ಕಾತರದಿಂದ ಕಾಯುತ್ತಿದ್ದಾರೆ. ಆದರೆ, ಅವರ ಕನಸು ನನಸಾಗದು ಎಂದು ಹೇಳಿದರು.

ಈ ಬಾರಿ ರಾಜ್ಯದ 18ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.

ಶಾಸಕ ಪ್ರಸಾದ ಅಬ್ಬಯ್ಯ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ, ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಆಲ್ತಾಫ್‌ ಹಳ್ಳೂರ, ದೇವಕಿ ಯೋಗಾನಂದ, ದೀಪಾ ಗೌರಿ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !