ಶುಕ್ರವಾರ, ಡಿಸೆಂಬರ್ 6, 2019
20 °C
ವೈವಾಹಿಕ ಜಾಲತಾಣದಲ್ಲಿ ಪರಿಚಯ

₹ 45 ಲಕ್ಷ ಕಿತ್ತ ಲಂಡನ್ ವರ !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವೈವಾಹಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ಯುವಕನೊಬ್ಬ ಮದುವೆ ಆಗುವುದಾಗಿ ನಂಬಿಸಿ ಯುವತಿಯೊಬ್ಬರಿಂದ ₹ 45 ಲಕ್ಷ ಪಡೆದುಕೊಂಡು ವಂಚಿಸಿದ್ದು, ಈ ಸಂಬಂಧ ಜೀವನ್‌ಬಿಮಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಸ್ಥಳೀಯ ನಿವಾಸಿ ಆಗಿರುವ 29 ವರ್ಷದ ಯುವತಿ ನೀಡಿರುವ ದೂರು ಆಧರಿಸಿ ಆರೋಪಿ ಪ್ರಿಮೋರ್‌ಕುಮಾರ್ ಹಾಗೂ ಇತರರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ಆರೋಪಿಯು ಜಾಲತಾಣದಲ್ಲಿ ನಕಲಿ ಖಾತೆ ತೆರೆದು ವಂಚಿಸಿರುವ ಸಾಧ್ಯತೆ ಇದೆ’ ಎಂದು ಪೊಲೀಸರು ಹೇಳಿದರು.  

‘ಯುವತಿಯು ಶಾದಿ ಡಾಟ್ ಕಾಮ್‌ ಜಾಲತಾಣದಲ್ಲಿ ಖಾತೆ ತೆರೆದಿದ್ದರು. ಸೆಪ್ಟೆಂಬರ್‌ನಲ್ಲಿ ಯುವತಿಗೆ ಆರೋಪಿ ರಿಕ್ವೆಸ್ಟ್‌ ಕಳುಹಿಸಿದ್ದ. ಅದನ್ನು ಯುವತಿ ಸ್ವೀಕರಿಸಿದ್ದರು. ಬಳಿಕ ಇಬ್ಬರೂ ಮೊಬೈಲ್ ನಂಬರ್ ಬದಲಾಯಿಸಿಕೊಂಡು ಮಾತನಾಡಲಾರಂಭಿಸಿದ್ದರು. ಈ ಬಗ್ಗೆ ಯುವತಿ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

‘ಲಂಡನ್‌ನಲ್ಲಿ ನೆಲೆಸಿರುವುದಾಗಿ ಹೇಳಿದ್ದ ಆರೋಪಿ, ಕೆಲವೇ ತಿಂಗಳಿನಲ್ಲಿ ಮುಂಬೈಗೆ ಬರುವುದಾಗಿ ತಿಳಿಸಿದ್ದ. ಲಂಡನ್‌ನಿಂದ ಬೆಲೆ ಬಾಳುವ ಉಡುಗೊರೆಯನ್ನು ಕಳುಹಿಸುವುದಾಗಿಯೂ ಯುವತಿಗೆ ಹೇಳಿದ್ದ.’

‘ಕೆಲ ದಿನಗಳ ನಂತರ ಕಸ್ಟಮ್ಸ್ ಅಧಿಕಾರಿ ಸೋಗಿನಲ್ಲಿ ಯುವತಿಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬ, ‘ನಿಮ್ಮ ಸ್ನೇಹಿತ ಪ್ರಿಮೋರ್‌ ಕುಮಾರ್ ಉಡುಗೊರೆ ರೂಪದಲ್ಲಿ 12,000 ಡಾಲರ್ ನೋಟು (₹8.61 ಲಕ್ಷ) ಹಾಗೂ 1.50 ಲಕ್ಷ ಡಾಲರ್ (₹1.07 ಕೋಟಿ) ಚೆಕ್‌ ಕಳುಹಿಸಿದ್ದಾರೆ. ಅದನ್ನು ನಿಮ್ಮ ಮನೆ ವಿಳಾಸಕ್ಕೆ ಕಳುಹಿಸಬೇಕಾದರೆ ತೆರಿಗೆ ಕಟ್ಟಬೇಕೆಂದು ಹೇಳಿದ್ದ.’

‘ಉಡುಗೊರೆ ಬಗ್ಗೆ ಯುವತಿ ಆರೋಪಿ ಪ್ರಿಮೋರ್‌ ಕುಮಾರ್‌ನನ್ನು ವಿಚಾರಿಸಿದ್ದರು. ಅದನ್ನು ತಾನೇ ಕಳುಹಿಸಿರುವುದಾಗಿ ಹೇಳಿದ್ದ. ಅದನ್ನು ನಂಬಿದ್ದ ಯುವತಿ, ಕಸ್ಟಮ್ಸ್ ಅಧಿಕಾರಿಯೆಂದು ಹೇಳಿಕೊಂಡಿದ್ದ ವ್ಯಕ್ತಿ ಸೂಚಿಸಿದ ಬ್ಯಾಂಕ್‌ ಖಾತೆಗಳಿಗೆ ಹಂತ ಹಂತವಾಗಿ ₹ 45 ಲಕ್ಷ ಹಾಕಿದ್ದಳು. ಅದಾದ ನಂತರ ಯಾವುದೇ ಉಡುಗೊರೆ ಬಂದಿಲ್ಲ. ಆರೋಪಿಯನ್ನು ಕೇಳಿದರೂ ಸಮರ್ಪಕ ಉತ್ತರ ಸಿಗುತ್ತಿಲ್ಲ. ಅದರಿಂದ ನೊಂದು ಯುವತಿ ದೂರು ನೀಡಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು