ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ: ₹1,200 ಕೋಟಿ ಮೊತ್ತದ ವಂಚನೆ ಬೆಳಕಿಗೆ

ನಕಲಿ ಇನ್‌ವೈಸ್‌ ಸೃಷ್ಟಿಸಿದ ಮೂವರ ಬಂಧನ
Last Updated 14 ನವೆಂಬರ್ 2018, 20:16 IST
ಅಕ್ಷರ ಗಾತ್ರ

ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ನಕಲಿ ಸರಕುಪಟ್ಟಿ (ಇನ್‌ವಾಯ್ಸ್‌) ಸಲ್ಲಿಸಿ ಹುಟ್ಟುವಳಿ ತೆರಿಗೆ ಜಮೆಗೆ ಕೋರಿಕೆ ಸಲ್ಲಿಸಿದ್ದ ವಂಚಕರ ಸಂಚನ್ನು ನಗರದ ತೆರಿಗೆ ಅಧಿಕಾರಿಗಳು ಬಯಲಿಗೆ ಎಳೆದಿದ್ದಾರೆ.

₹1,200 ಕೋಟಿ ಮೊತ್ತದ ನಕಲಿ ಇನ್‌ವಾಯ್ಸ್‌ ಸೃಷ್ಟಿಸಿದ ಮೂವರು ವಂಚಕರಾದ ಸುಹೇಲ್‌, ಹಫೀಜುರ್‌ ಮತ್ತು ಬಾಷಾ ಅವರನ್ನು ಬಂಧಿಸಲಾಗಿದೆ.

ಈ ನಕಲಿ ಸರಕು ಬೆಲೆ ಪಟ್ಟಿ ಸಲ್ಲಿಕೆಯಿಂದ ₹200 ಕೋಟಿಗಳಷ್ಟು ತೆರಿಗೆ ತಪ್ಪಿಸಲಾಗಿತ್ತು. ಗುಪ್ತಚರ ಮಾಹಿತಿ ಆಧರಿಸಿ ಈ ತಿಂಗಳ 12ರಂದು 25 ಕಡೆಗಳಲ್ಲಿ ನಡೆಸಿದ ದಾಳಿ ಸಂದರ್ಭದಲ್ಲಿ ನಕಲಿ ಕಂಪನಿಗಳಿಗೆ ಸಂಬಂಧಿಸಿದ ದಾಖಲೆವಶಪಡಿಸಿಕೊಳ್ಳಲಾಗಿದೆ.

‘ಹುಟ್ಟುವಳಿ ತೆರಿಗೆ ಜಮೆ (ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌) ಪಡೆದುಕೊಳ್ಳುವ ಉದ್ದೇಶದಿಂದಲೇ ನಕಲಿ ಹೆಸರು ಮತ್ತು ವಿಳಾಸ ನೀಡಿ ಕಬ್ಬಿಣ ಮತ್ತು ಉಕ್ಕಿನ ಉತ್ಪನ್ನಗಳನ್ನು ತಯಾರಿಸುವ ಕಂಪನಿಗಳನ್ನು ಸೃಷ್ಟಿಸಿ ವಂಚನೆ ಎಸಗಲಾಗಿದೆ’ ಎಂದು ಸೆಂಟ್ರಲ್‌ ಟ್ಯಾಕ್ಸ್‌ ಕಮಿಷನರ್‌ ಜಿ.ನಾರಾಯಣಸ್ವಾಮಿ ಅವರು ಬುಧವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಇದೊಂದು ದೊಡ್ಡ ವಂಚನೆಯಾಗಿದ್ದು, ಈಗ ಬಯಲಿಗೆ ಬಂದಿರುವುದು ಹಿಮಗಡ್ಡೆಯ ತುದಿ ಮಾತ್ರ. ಈ ನಿಟ್ಟಿನಲ್ಲಿ ಸಮಗ್ರ ತನಿಖೆಗೆ ಆದೇಶಿಸಲಾಗಿದೆ. ಬಂಧಿತ ಬಾಷಾ ತನ್ನ ಸಂಬಂಧಿಕರ ಹೆಸರಿನಲ್ಲಿ 14 ಜಿಎಸ್‌ಟಿ ನೋಂದಣಿ ಮಾಡಿಸಿದ್ದಾನೆ. ಇನ್ನೊಬ್ಬ ವಂಚಕ ಸುಹೇಲ್‌ 6 ನೋಂದಣಿ ಮಾಡಿಸಿದ್ದಾನೆ. ಇವರಿಬ್ಬರೂ ಒಟ್ಟಾಗಿ 20 ನಕಲಿ ಕಂಪನಿಗಳನ್ನು ಸ್ಥಾಪಿಸಿದ್ದರು.

‘ಈ ವಂಚಕರು ನಕಲಿ ಕಂಪನಿ ಹೆಸರಿನಲ್ಲಿ ಜಿಎಸ್‌ಟಿ ಸರಕುಪಟ್ಟಿ ನೀಡುವುದು, ಯಾವುದೇ ಸರಕನ್ನು ಪೂರೈಸದೆ ನಕಲಿ ವಾಹನಗಳ ನೋಂದಣಿ ವಿವರ ಬಳಸಿ ಇ–ವೇ ಬಿಲ್‌ ಸೃಷ್ಟಿಸುವ ಕೃತ್ಯದಲ್ಲಿ ತೊಡಗಿದ್ದರು. ಮೂವರೂ ವಂಚಕರು ತಮ್ಮ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ. ಈ ವಂಚನೆ ಜಾಲದ ಪ್ರಮುಖರು ತಾವೇ ಎಂದೂ ಹೇಳಿಕೊಂಡಿದ್ದಾರೆ. ಈ ಸಂಬಂಧ ಮುಂಬರುವ ದಿನಗಳಲ್ಲಿ ಇನ್ನಷ್ಟು ಬಂಧನಗಳು ನಡೆಯಬಹುದು’ ಎಂದು ಹೇಳಿದ್ದಾರೆ.

ಬಂಧಿತ ಮೂವರನ್ನು ಕೋರಮಂಗಲದಲ್ಲಿರುವ ಆರ್ಥಿಕ ಅಪರಾಧಗಳಿಗೆ ಸಂಬಂಧಿಸಿದ ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರುಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT