ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ತಾಯಂದಿರ ಮರಣ ಪ್ರಮಾಣ ಇಳಿಕೆ

ಕೇಂದ್ರ ತಾಯಿ ಮತ್ತು ಮಕ್ಕಳ ಆರೋಗ್ಯ ವಿಭಾಗದಿಂದ ವರದಿ ಬಿಡುಗಡೆ
Last Updated 15 ನವೆಂಬರ್ 2019, 23:45 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಆರೋಗ್ಯ ಇಲಾಖೆಯ ತಾಯಿ ಮತ್ತು ಮಕ್ಕಳ ವಿಭಾಗವು ಮಾದರಿ ನೋಂದಣಿ ವ್ಯವಸ್ಥೆಯ (ಎಸ್‌ಆರ್‌ಎಸ್‌) ವರದಿ ಬಿಡುಗಡೆ ಮಾಡಿದ್ದು, ರಾಜ್ಯದಲ್ಲಿ ತಾಯಂದಿರ ಮರಣ ಪ್ರಮಾಣದಲ್ಲಿ ಶೇ 10ರಷ್ಟು ಇಳಿಕೆಯಾಗಿದೆ.

ಹೆರಿಗೆ ವೇಳೆ ತಾಯಂದಿರ ಮರಣದ ಅನುಪಾತ ಕುರಿತಂತೆಪ್ರತಿ ಎರಡು ವರ್ಷಕ್ಕೊಮ್ಮೆಎಸ್‌ಆರ್‌ಎಸ್‌ ವರದಿ ಬಿಡುಗಡೆ ಮಾಡುತ್ತದೆ. ದೇಶದಲ್ಲಿಯೇ ಕರ್ನಾಟಕ ಗರ್ಭಿಣಿಯರ ಸಾವಿನ ಪ್ರಮಾಣವನ್ನು ಇಳಿಕೆ ಮಾಡುವ ರಾಜ್ಯಗಳ ಪಟ್ಟಿಯಲ್ಲಿ ಅಗ್ರ ಸ್ಥಾನ ಅಲಂಕರಿಸಿದೆ.2014-16ರ ವರದಿಯ ಪ್ರಕಾರ ರಾಜ್ಯದಲ್ಲಿ ಪ್ರತಿ ಒಂದು ಲಕ್ಷ ಹೆರಿಗೆಗೆ 108 ತಾಯಂದಿರು ಮೃತಪಡುತ್ತಿದ್ದರು. 2015-17ರಲ್ಲಿ 97ಕ್ಕೆ ಇಳಿದಿದೆ.

ಮಹಾರಾಷ್ಟ್ರ ಎರಡನೇ ಸ್ಥಾನದಲ್ಲಿದ್ದು, ಅಲ್ಲಿ ಹೆರಿಗೆ ಸಂದರ್ಭದಲ್ಲಿ ತಾಯಿಯ ಮರಣದ ಪ್ರಮಾಣ ಶೇ 9.8ರಷ್ಟು ಇಳಿಮುಖವಾಗಿದೆ. ಮೂರನೇ ಸ್ಥಾನದಲ್ಲಿ ಕೇರಳ (ಶೇ 8.7ರಷ್ಟು) ಇದೆ. ದೇಶದಲ್ಲಿ ಸರಾಸರಿ ಶೇ 6.2ರಷ್ಟಿದೆ.

ವರ್ಷಕ್ಕೆ ಒಂದು ಲಕ್ಷಕ್ಕಿಂತ ಹೆಚ್ಚು ಹೆರಿಗೆ ನಡೆಯುವ ರಾಜ್ಯಗಳನ್ನು ಮಾತ್ರ ಸಮೀಕ್ಷೆಗೆ ಪರಿಗಣಿಸಲಾಗುತ್ತದೆ. ಹೀಗಾಗಿ ದೇಶದ 20 ರಾಜ್ಯಗಳು ಸಮೀಕ್ಷೆಗೆ ಒಳಪಟ್ಟಿದ್ದವು.

‘ಕಳೆದೆರಡು ವರ್ಷಗಳಲ್ಲಿ ಗರ್ಭಿಣಿಯರ ಆರೈಕೆಗೆ ಸಂಬಂಧಿಸಿದಂತೆ ಸರ್ಕಾರ ಕೈಗೊಂಡಿರುವ ಕ್ರಮಗಳಿಂದಾಗಿ ಹೆರಿಗೆ ಸಂದರ್ಭದಲ್ಲಿ ತಾಯಂದಿರ ಮರಣದ ಪ್ರಮಾಣ ಇನ್ನಷ್ಟು ಇಳಿಯುವ ನಿರೀಕ್ಷೆಯಿದೆ. 2017–19ನೇ ಸಾಲಿನ ವರದಿಯಲ್ಲಿ ಇಳಿಕೆ ಪ್ರಮಾಣ ಶೇ 20ರಷ್ಟು ಇರಲಿದೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

15 ಲಕ್ಷ ತಾಯಿ ಕಾರ್ಡ್‌:ತಾಯಿ ಮತ್ತು ಮಗುವಿನ ಆರೈಕೆ ಸಂಬಂಧ ವಿತರಿಸುವ ತಾಯಿ ಕಾರ್ಡ್‌ಗಳ ಕೊರತೆ ನಿವಾರಿಸಲಾಗಿದೆ.ವಾರ್ಷಿಕ 15 ಲಕ್ಷ ತಾಯಿ ಕಾರ್ಡ್‌ಗಳನ್ನು ವಿತರಿಸಲಾಗುತ್ತಿದೆ. ಈ ಪೈಕಿ 15 ಲಕ್ಷ ತಾಯಿ ಕಾರ್ಡ್‌ಗಳನ್ನು ರಾಜ್ಯದವರಿಗೆ ಹಾಗೂ 3 ಲಕ್ಷ ಕಾರ್ಡ್‌ಗಳನ್ನು ಹೊರರಾಜ್ಯಗಳ ತಾಯಂದಿರಿಗೆ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ತಾಯಿ ಕಾರ್ಡ್ ಕೊರತೆ ಬಗೆಹರಿದಿರುವುದರಿಂದ ‘ಮುಖ್ಯಮಂತ್ರಿ ಮಾತೃಶ್ರೀ’ ಯೋಜನೆ ಮತ್ತು ಕೇಂದ್ರ ಸರ್ಕಾರದ ‘ಮಾತೃವಂದನಾ ಯೋಜನೆ’ಗೆ ತಾಯಿ ಕಾರ್ಡ್ ಕಡ್ಡಾಯಗೊಳಿಸಲಾಗಿದೆ. ಈ ಯೋಜನೆಗಳಡಿ ಕ್ರಮವಾಗಿ ₹ 12 ಸಾವಿರ ಮತ್ತು ₹ 5 ಸಾವಿರ ವಿತರಿಸಲಾಗುತ್ತದೆ ಎಂದು ಇಲಾಖೆ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT