ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮತ್ತೆ ಕಲ್ಯಾಣ’ ಆಂದೋಲನ: ಕಾಯಕ, ದಾಸೋಹ ಸೂತ್ರ ಪಾಲಿಸಿ

ಉದ್ಘಾಟನಾ ಸಮಾರಂಭದಲ್ಲಿ ಗೊರುಚ
Last Updated 1 ಆಗಸ್ಟ್ 2019, 19:10 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಪೂರ್ವಗ್ರಹಗಳನ್ನು ಬರಿದು ಮಾಡಿ ಮುಕ್ತ ಮನಸ್ಸಿನಿಂದ ಹೊಸ ಚಿಂತನೆ ನಡೆಸಬೇಕಾದ, ಸೌಹಾರ್ದ– ಸಾಮರಸ್ಯದಿಂದ ಬದುಕಬೇಕಾದ ಅಗತ್ಯ ಇದೆ. ಇದಕ್ಕೆ ಅಂತರಂಗ ಬಹಿರಂಗ ಶುದ್ಧಿ ಇದ್ದರೆ ಸಾಕು’ ಎಂದು ಹಿರಿಯ ಸಾಹಿತಿ ಗೊ.ರು. ಚನ್ನಬಸಪ್ಪ ಹೇಳಿದರು.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿಯ ತರಳಬಾಳು ಶಾಖಾಮಠ ಮತ್ತು ಸಹಮತ ವೇದಿಕೆ ವತಿಯಿಂದ ತರೀಕೆರೆಯಲ್ಲಿನ ಅಕ್ಕನಾಗಲಾಂಬಿಕೆ ಐಕ್ಯ ಮಂಟಪದಲ್ಲಿ ಗುರುವಾರ ಆರಂಭವಾದ ‘ಮತ್ತೆ ಕಲ್ಯಾಣ’ ಆಂದೋಲನದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

‘ಭಿನ್ನಾಭಿಪ್ರಾಯಗಳ ಅಗ್ನಿ ಪರ್ವತವಾಗಿದ್ದೇವೆ. ಅಗ್ನಿ ಪರ್ವತ ಸ್ಫೋಟಗೊಂಡು ಅಗಾಧ ಅನಾಹುತ ಮಾಡುವುದೆಂಬುದು ತಿಳಿದಿದ್ದರೂ ಎಚ್ಚರ ವಹಿಸದಿದ್ದರೆ ಹೇಗೆ? ಶರಣರು ನುಡಿದು, ನಡೆದು ತೋರಿದ ಕಾಯಕ, ದಾಸೋಹ, ಅನುಭಾವ ಸೂತ್ರಗಳನ್ನು ಅನುಸರಿಸುವ ಅಗತ್ಯ ಇದೆ’ ಎಂದರು.

ಪ್ರಾಚೀನ, ಸನಾತನ ಎನ್ನುವ ಧರ್ಮಶಾಸ್ತ್ರಗಳ ಗುಟ್ಟನ್ನು ಮತ್ತೆ ಬಯಲಿಗೆಳೆಯಬೇಕಿದೆ. ಅರ್ಥಹೀನ ಪದ್ಧತಿ, ಪರಂಪರೆಗಳನ್ನು ದಿಟ್ಟತನದಿಂದ ಪ್ರಶ್ನಿಸಬೇಕಾಗಿದೆ. ತಲೆತಲಾಂತರಗಳಿಂದ ಬೇರೂರಿರುವ ಮೂಢನಂಬಿಕೆಗಳನ್ನು ತೊಲಗಿಸಬೇಕಿದೆ. ದಟ್ಟ ದಾರಿದ್ರ್ಯ ಹೋಗಲಾಡಿಸುವ ಪ್ರಯತ್ನ ಈ ‘ಮತ್ತೆ ಕಲ್ಯಾಣ’ ಆಂದೋಲನ ಎಂದು ಹೇಳಿದರು.

‘ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯವರು ಆಧುನಿಕ ಅನುಭವ ಮಂಟಪ ನಿರ್ಮಾಣಕ್ಕೆ ನಿರ್ಧಾರ ಕೈಗೊಂಡಿದ್ದರು. ಸರ್ಕಾರ ನನ್ನ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿತ್ತು. ಮೂರು ತಿಂಗಳಲ್ಲಿ ವರದಿ ಸಲ್ಲಿಸಿದ್ದೆವು. ಅಂತರರಾಷ್ಟ್ರೀಯ ಧಾರ್ಮಿಕ–ವೈಚಾರಿಕ ಮಾಡಬೇಕು ಎಂದು ಆ ಸಲದ ಬಜೆಟ್‌ನಲ್ಲಿ ₹ 604 ಕೋಟಿ ಮೊತ್ತದ ಯೋಜನೆಯನ್ನು ಆಗಿನ ಮುಖ್ಯಮಂತ್ರಿ ಘೋಷಿಸಿದ್ದರು. ಮೊದಲ ಹಂತದಲ್ಲಿ ₹ 100 ಕೋಟಿ ಒದಗಿಸುವುದಾಗಿ ಪ್ರಕಟಿಸಿದ್ದರು. ಆದರೆ, ಇದುವರೆಗೂ ಏನೂ ಆಗಿಲ್ಲ. ಈ ಯೋಜನೆ ಕಾರ್ಯಗತಕ್ಕೆ ಸರ್ಕಾರ ಗಮನಹರಿಸಬೇಕು’ ಎಂದು ಒತ್ತಾಯಿಸಿದರು.

ಸಿ.ಟಿ. ರವಿ ಮಾತಿಗೆ ಬ್ರೇಕ್‌
ಸಭಿಕರ ಸಾಲಿನಲ್ಲಿದ್ದ ಶಾಸಕ ಸಿ.ಟಿ. ರವಿ ಅವರಿಗೆ ಕಾರ್ಯಕ್ರಮದ ಬಗ್ಗೆ ಎರಡು ನಿಮಿಷ ಮಾತನಾಡಲು ಅವಕಾಶ ನೀಡಿದಾಗ ಅವರು ಮಾತಿನ ನಡುವೆ ಹಿಂದುತ್ವ ಪ್ರಸ್ತಾಪಿಸಿದರು. ರವಿ ಅವರು ತಕ್ಷಣ ಮಾತು ನಿಲ್ಲಿಸಬೇಕು ಎಂದು ಸ್ವಾಮೀಜಿ ಸೂಚಿಸಿರುವುದಾಗಿ ನಿರೂಪಕರು ತಿಳಿಸಿ ಮಾತಿಗೆ ‘ಬ್ರೇಕ್‌’ ಹಾಕಿಸಿದ ಪ್ರಸಂಗ ನಡೆಯಿತು.

‘ಬಸವ ಜಯಂತಿಯನ್ನೂ ರದ್ದು ಮಾಡಿ’
‘ರಾಜ್ಯ ಸರ್ಕಾರ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯೊಂದನ್ನೇ ರದ್ದು ಮಾಡಿರುವುದು ತಪ್ಪು. ಬಸವ ಜಯಂತಿಯನ್ನೂ ರದ್ದು ಮಾಡಿ ಎಂದು ನಾವು ಒತ್ತಾಯಿಸುತ್ತೇವೆ' ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ‘ಸರ್ಕಾರದ ಕೆಲಸ ಜಯಂತಿಗಳ ಆಚರಣೆಯಲ್ಲ. ಜನತೆ ಬೇಕಿದ್ದರೆ ಅವರಿಗೆ ಇಷ್ಟವಾದ ಜಯಂತಿಯನ್ನು ಆಚರಣೆ ಮಾಡುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT