ಸೋಮವಾರ, ಜುಲೈ 4, 2022
21 °C

86ರ ಪ್ರಾಯದಲ್ಲೂ ದಣಿಯದ ‘ಮಾಣಿಕ್ಯ’

ಸಂತೋಷ ಈ. ಚಿನಗುಡಿ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಮೈತುಂಬ ದುಡಿ, ಹೊಟ್ಟಿತುಂಬ ಹೊಡಿ’ ಅಂತ್‌ ಹೇಳ್ಯಾರ್ರಿ ಹಿರ್‍ಯಾರು. ಇಲ್ಲಿಗೆ ಬರಬ್ಬರಿ 70 ವರ್ಸ್‌ ಆತ್ರಿ. ನನ್ನ ಪಾಡಿಗೆ ನಾ ದುಡುಕೋತ ಹೊಂಟೇನಿ. ಮಕ್ಕಳು ಬಿಡಸಾಕ್‌ ನೋಡತಾರ. ಖಾಲಿ ಕುಂತ್ರ ಸತ್‌ ಕುಂತಂಗ್‌ ಅಕ್ಕದರಿ. ನಾ ದುಡಿಕಿ ಬಿಡೋ ಮಗಾ ಅಲ್ಲ...’

ಕಮಲಾಪುರ ತಾಲ್ಲೂಕಿನ ಆಲಗೂಡ ಗ್ರಾಮದ ಹಳ್ಳಿಕಟ್ಟೆ ಮುಂದೆ ಕುಳಿತ ಅಜ್ಜ; ಮಾಣಿಕಪ‍್ಪ‍ ಗುಂಡಪ್ಪ ಸುತಾರ ಅವರು ಒಂದೇ ಮಾತಿನಲ್ಲಿ ಖಡಕ್‌ ಉತ್ತರ ಕೊಟ್ಟರು. ಅವರಿಗೆ ಈಗ 86 ವರ್ಷ ವಯಸ್ಸು! ಆರಡಿ ದೇಹ ಸುಕ್ಕುಗಟ್ಟಿ ಒಣಕಲು ಕಡ್ಡಿಯಂತಾಗಿದೆ. ಆದರೆ, ಅವರೊಳಗಿನ ಚೈತನ್ಯ, ಸ್ವಾಭಿಮಾನ ಮಾತ್ರ ಮಾಸಿಲ್ಲ.

ರೆಂಟೆ, ಕುಂಟೆ, ನೇಗಿಲ, ಚಕ್ಕಡಿ ಮುಂತಾದ ಕೃಷಿ ಸಲಕರಣೆಗಳನ್ನು ಮಾಡುವುದು ಅವರ ಕಾಯಕ‌. 16ನೇ ವಯಸ್ಸಿನಿಂದಲೇ ಮರ ಕೆತ್ತಲು ಆರಂಭಿಸಿದ ಈ ಅಜ್ಜ; ಆಲಗೂಡ ಹಾಗೂ ತೊಂಡಕಲ್ಲ ಗ್ರಾಮದ ಎಲ್ಲ ರೈತರಿಗೂ ಆಧಾರ. ಅವರ ಮೇಲಿನ ಅಭಿಮಾನದಿಂದಾಗಿ ಈವರೆಗೆ ಈ ಎರಡೂ ಹಳ್ಳಿಗಳಲ್ಲಿ ಇನ್ನೊಬ್ಬರು ಮರ ಕೆತ್ತುವ ಕೆಲಸ ಮಾಡಲು ಮುಂದಾಗಿಲ್ಲ. ಬೆಳಿಗ್ಗೆ 7ಕ್ಕೆ ಕೆಲಸ ಆರಂಭವಾದರೆ ಸಂಜೆ 7ರವರೆಗೆ ಬಿಡುವಿಲ್ಲದ ದುಡಿಮೆ. ಈ ಊರಿಗೆ ಯಾರೇ ಕಾಲಿಟ್ಟರೂ ಮರದಡಿ ಕುಳಿತ ಈ ಹಿರಿಯ ಜೀವವೇ ಮೊದಲು ದರ್ಶನ ನೀಡುವುದು.

ವಿಶೇಷವೆಂದರೆ, ಮಾಣಿಕಪ್ಪ ಕೆಲಸಕ್ಕೆ ಪ್ರತಿಯಾಗಿ ಹಣ ಪಡೆಯುವುದಿಲ್ಲ. ಒಂದು ವರ್ಷಕ್ಕೆ ಒಂದು ಚೀಲ ಜೋಳ ಪಡೆಯುತ್ತಾರೆ. ಒಮ್ಮೆ ಜೋಳ ಕೊಟ್ಟರೆ ಮುಗಿಯಿತು; ವರ್ಷಪೂರ್ತಿ ಇವರಿಂದ ಕೃಷಿ ಉಪಕರಣಗಳ ಕೆಲಸ ಮಾಡಿಸಬಹುದು. ಎರಡೂ ಹಳ್ಳಿಗಳು ಸೇರಿ 200 ರೈತರಿಂದ 200 ಚೀಲ ಜೋಳ ಪ್ರತಿ ವರ್ಷ ಬರುತ್ತದೆ ಅವರಿಗೆ.

ಮೂವರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳಿರುವ ಅವಿಭಕ್ತ ಕುಟುಂಬ. ಹಿರಿಯ ನಾಗರಿಕರ ಕಾರ್ಡ್‌, ವೃದ್ಧಾಪ್ಯ ವೇತನ ಯಾವುದೂ ಸಿಕ್ಕಿಲ್ಲ.

ಲಾಕ್‌ಡೌನ್‌ ಆದ ಮೊದಲ ದಿನವೇ ಮಾಸ್ಕ್‌ ಹಾಕಿಕೊಂಡು, ‘ಸುರಕ್ಷಿತ’ ಅಂತರ ಕಾಯ್ದುಕೊಳ್ಳುವ ಮೂಲಕ ಹಳ್ಳಿಗೆ ಮಾದರಿಯಾದವರು ಅವರು.

ನಿರಂತರ ಮರ ಕೆತ್ತನೆ ಕೆಲಸದಿಂದ 60 ಡಿಗ್ರಿ ಕೋನಾಕೃತಿಯಲ್ಲಿ ಮಡಚಿದ ಅವರ ಬಲಗೈ ಮತ್ತೆ ಸೀದಾ ಆಗಿಲ್ಲ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು