ಆರೋಗ್ಯ ವಿ.ವಿ: ಅರ್ಧ ತಾಸಿನಲ್ಲಿ ಎಂಬಿಬಿಎಸ್‌ ಫಲಿತಾಂಶ

5

ಆರೋಗ್ಯ ವಿ.ವಿ: ಅರ್ಧ ತಾಸಿನಲ್ಲಿ ಎಂಬಿಬಿಎಸ್‌ ಫಲಿತಾಂಶ

Published:
Updated:

ಬೆಂಗಳೂರು: ಪರೀಕ್ಷೆ ಮುಗಿದ ಕೆಲವೇ ತಾಸಿನಲ್ಲಿ ಫಲಿತಾಂಶ ನೀಡುವುದು ವಿಶ್ವವಿದ್ಯಾಲಯಗಳಲ್ಲಿ ಟ್ರೆಂಡ್‌ ಆಗುತ್ತಿದೆ. ಬೆಂಗಳೂರು ವಿಶ್ವವಿದ್ಯಾಲಯದ ನಂತರ ಈಗ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯವೂ (ಆರ್‌ಜಿಯುಎಚ್ಎಸ್) ಪರೀಕ್ಷೆ ಮುಗಿದ ಅರ್ಧ ತಾಸಿನಲ್ಲಿಯೇ ಫಲಿತಾಂಶ ನೀಡಿದೆ.

ಇನ್ನುಮುಂದೆ ಫಲಿತಾಂಶಕ್ಕಾಗಿ ತಿಂಗಳುಗಳ ಕಾಲ ಕಾಯಬೇಕಿಲ್ಲ. ಈ ಹಿಂದೆಯೂ ಕೆಲವು ಕೋರ್ಸ್‌ನ ಪರೀಕ್ಷೆ ಮುಗಿದ 15 ನಿಮಿಷದಲ್ಲಿಯೇ ಫಲಿತಾಂಶ ನೀಡಿ, ವಿಶ್ವವಿದ್ಯಾಲಯ ದಾಖಲೆ ಮಾಡಿತ್ತು. ಆದರೆ, ಅದು ಒಂದು ಕೋರ್ಸ್‌ನ ಮೌಲ್ಯಮಾಪನವಷ್ಟೇ ಆಗಿದ್ದು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿತ್ತು.

ಈ ಬಾರಿ, ರಾಜ್ಯದೆಲ್ಲಡೆಯ ಎಂಬಿಬಿಎಸ್‌ ವಿಷಯದ ಮೊದಲ ಹಂತದಲ್ಲಿ ಪರೀಕ್ಷೆ ಬರೆದ 8,174 ವಿದ್ಯಾರ್ಥಿಗಳು ಫಲಿತಾಂಶವನ್ನು ಅರ್ಧ ತಾಸಿನಲ್ಲಿಯೇ ನೀಡಿದ್ದು, ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಒಬ್ಬ ವಿದ್ಯಾರ್ಥಿಯ ಸರಾಸರಿ 6 ಉತ್ತರ ಪತ್ರಿಕೆಯಂತೆ ಸುಮಾರು 61 ಸಾವಿರ ಉತ್ತರ ಪ್ರತಿಗಳ ಮೌಲ್ಯಮಾಪನ ಮಾಡಲಾಗಿದೆ. ಸುಮಾರು 1,000 ಮಂದಿ ಮೌಲ್ಯಮಾಪನದಲ್ಲಿ ಪಾಲ್ಗೊಂಡಿದ್ದರು.

‘ಜುಲೈ 3ರಂದು ವಿಷಯ ಪರೀಕ್ಷೆ ಪ್ರಾರಂಭವಾಗಿದೆ. ಜುಲೈ 25 ರಿಂದ ಆಗಸ್ಟ್‌ 5ರವರೆಗೆ ಮೌಖಿಕ ಪರೀಕ್ಷೆ ಮತ್ತು ಪ್ರಾಯೋಗಿಕ ಪರೀಕ್ಷೆ ನಡೆದಿದೆ. ಭಾನುವಾರ ಎಲ್ಲಾ ಪರೀಕ್ಷೆ ಮುಗಿಯುತ್ತಿದ್ದಂತೆ ವಿಶ್ವವಿದ್ಯಾಲಯದ ಕೇಂದ್ರ ಕಚೇರಿಯಲ್ಲಿ ವಿಷಯ ಪರೀಕ್ಷೆಯ ಅಂಕಗಳ ಜತೆಗೆ ಪ್ರಾಯೋಗಿಕ ಅಂಕಗಳನ್ನು ಸೇರಿಸಿ ಅಂತಿಮ ಫಲಿತಾಂಶ ಪ್ರಕಟಿಸಲಾಗಿದೆ’ ಎಂದು ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಡಾ.ಎಂ.ಕೆ.ರಮೇಶ್‌ ತಿಳಿಸಿದರು.

‘ಸೆಪ್ಟೆಂಬರ್‌ 11ಕ್ಕೆ ಪೂರಕ ಪರೀಕ್ಷೆ ನಡೆಯಲಿದೆ. ಶೀಘ್ರ ಫಲಿತಾಂಶ ನೀಡಿರುವುದು ಆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ವಿದ್ಯಾರ್ಥಿಗಳು ಪ್ರತಿ ವಿಷಯದಲ್ಲೂ ಪಡೆದ ಅಂಕ, ಉತ್ತೀರ್ಣವಾದ ಶ್ರೇಣಿ, ಒಟ್ಟು ಫಲಿತಾಂಶ, ಕಾಲೇಜಿನ ವಿವರಗಳು‌ ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲಿ ಲಭ್ಯವಿದೆ’ ಎಂದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !