ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರಿಗೆ 3 ವರ್ಷ ಗ್ರಾಮೀಣ ಸೇವೆ ಕಡ್ಡಾಯಗೊಳಿಸಿ: ಉಪರಾಷ್ಟ್ರಪತಿ ಸಲಹೆ

Last Updated 25 ಏಪ್ರಿಲ್ 2019, 19:45 IST
ಅಕ್ಷರ ಗಾತ್ರ

ಬೆಳಗಾವಿ: ‘ವೈದ್ಯರು ಕನಿಷ್ಠ ಮೂರು ವರ್ಷ ಗ್ರಾಮೀಣ ಭಾಗದಲ್ಲಿ ಕಡ್ಡಾಯವಾಗಿ ಸೇವೆ ಸಲ್ಲಿಸಬೇಕು ಎನ್ನುವ ನಿಯಮವನ್ನು ವೈದ್ಯಕೀಯ ಮಂಡಳಿ ರೂಪಿಸಬೇಕು’ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಸಲಹೆ ನೀಡಿದರು.

ನಗರದಲ್ಲಿ ಗುರುವಾರ ನಡೆದ ಕೆ.ಎಲ್‌.ಇ ಸಂಸ್ಥೆಯ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿಯ 9ನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

‘ದೇಶದ ಶೇ 60ಕ್ಕೂ ಹೆಚ್ಚು ಜನರು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಆದರೆ, ಅವರಿಗೆ ಉತ್ತಮ ವೈದ್ಯಕೀಯ ಸೇವೆ ಲಭ್ಯವಾಗುತ್ತಿಲ್ಲ. ಹಳ್ಳಿಗಳಿಗೆ ಹೋಗಲು ಯಾವ ವೈದ್ಯರೂ ತಾವಾಗಿಯೇ ಮುಂದೆ ಬರುವುದಿಲ್ಲ. ಕಡ್ಡಾಯಗೊಳಿಸಿದರೆ ಮಾತ್ರ ಅಲ್ಲಿಗೆ ಹೋಗಿ ಸೇವೆ ಸಲ್ಲಿಸುತ್ತಾರೆ’ ಎಂದರು.

ವೈದ್ಯಕೀಯ ವಿದ್ಯಾರ್ಥಿಗಳು ಗಂಭೀರವಾಗಿ ಕುಳಿತಿದ್ದನ್ನು ಗಮನಿಸಿದ ಅವರು, ‘ನನಗೆ ಗೊತ್ತು, ನನ್ನ ಈ ಮಾತಿಗೆ ಚಪ್ಪಾಳೆ ಬೀಳುವುದಿಲ್ಲ. ನಿಮ್ಮಲ್ಲಿ ಬಹಳಷ್ಟು ಜನರಿಗೆ ಹಳ್ಳಿಗಳಿಗೆ ಹೋಗಲು ಇಷ್ಟವಿಲ್ಲ’ ಎಂದು ಕಿಚಾಯಿಸಿದರು.

ಶಿಕ್ಷಣವೆಂದರೆ ಉದ್ಯೋಗವಲ್ಲ:

‘ಜನರನ್ನು ಸಶಕ್ತರನ್ನಾಗಿಸುವುದು ಶಿಕ್ಷಣದ ಮೂಲ ಉದ್ದೇಶವಾಗಿದೆ. ಆದರೆ, ಬಹಳಷ್ಟು ಜನರು ಶಿಕ್ಷಣವೆಂದರೆ ಉದ್ಯೋಗವೆಂದು ತಿಳಿದುಕೊಂಡಿದ್ದಾರೆ. ದೇಶದ ಪ್ರತಿಯೊಬ್ಬರಿಗೆ ಸರ್ಕಾರ ಶಿಕ್ಷಣ ನೀಡಬಹುದು. ಹೊರತು, ಉದ್ಯೋಗ ನೀಡಲು ಸಾಧ್ಯವಿಲ್ಲ’ ಎಂದು ಹೇಳಿದರು.

ಸಹಭಾಗಿತ್ವ: ‘ಅಸಮಾನತೆ ನಿರ್ಮೂಲನೆ, ಹೆಣ್ಣು ಭ್ರೂಣ ಹತ್ಯೆ ತಡೆ, ನಿರುದ್ಯೋಗ ಸಮಸ್ಯೆ, ಜಾತಿ ನಿಂದನೆ ತಡೆ ಸೇರಿದಂತೆ ಹಲವು ಸಾಮಾಜಿಕ ಸವಾಲುಗಳಿವೆ. ಜನರ ಸಹಭಾಗಿತ್ವ ಇಲ್ಲದೇ ಇವುಗಳನ್ನು ನಿವಾರಿಸಲು ಸಾಧ್ಯವಿಲ್ಲ. ಆದರೆ, ಕೆಲವು ರಾಜಕಾರಣಿಗಳು ಇದನ್ನೆಲ್ಲ ಬಗೆಹರಿಸುತ್ತೇವೆ ಎಂದು ಹೇಳುತ್ತಾರೆ. "ಸಬ್‌ ಕಾಮ್‌ ಸರ್ಕಾರ ಕರೇಗಾ, ಹಮ್‌ ಬೇಕಾರ ರಹೆಂಗೆ" ಎನ್ನುವ ತತ್ವವನ್ನು ಜನರ ಮನಸ್ಸಿನಲ್ಲಿ ತುಂಬಿದರು. ಈ ರೀತಿ ನಡೆಯಲ್ಲ’ ಎಂದು ಹೇಳಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಆರಂಭಿಸಿರುವ ಹಲವು ಕಾರ್ಯಕ್ರಮಗಳಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸ್ವಚ್ಛ ಭಾರತ ಮಿಷನ್‌, ಬೇಟಿ ಬಚಾವೋ– ಬೇಟಿ ಪಡಾವೋ ಕಾರ್ಯಕ್ರಮಗಳು ಆಂದೋಲನ ರೂಪ ಪಡೆದಿವೆ’ ಎಂದರು.

ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ಅಕಾಡೆಮಿಯ ಕುಲಪತಿ ವಿವೇಕ ಸಾವೋಜಿ ಉಪಸ್ಥಿತರಿದ್ದರು. ವಿವಿಧ ವಿಭಾಗಗಳಲ್ಲಿ ಉನ್ನತ ರ‍್ಯಾಂಕ್‌ ಪಡೆದ 23 ವಿದ್ಯಾರ್ಥಿಗಳಿಗೆ ಬಂಗಾರದ ಪದಕ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT