ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಕಾರ ಸಂಘಗಳಿಗೆ ಕಾಯಕಲ್ಪ: ಕಾಯ್ದೆ ತಿದ್ದುಪಡಿ

ಸಾಲ ವಸೂಲಾತಿಗೆ ಕಠಿಣ ನಿಯಮ: ಸಿಬ್ಬಂದಿ ನೇಮಕಾತಿಗೆ ಪ್ರತ್ಯೇಕ ಪ್ರಾಧಿಕಾರ ರಚನೆ
Last Updated 20 ಮಾರ್ಚ್ 2020, 23:14 IST
ಅಕ್ಷರ ಗಾತ್ರ

ಬೆಂಗಳೂರು: ಸಹಕಾರಿ ಕ್ಷೇತ್ರದಲ್ಲಿನ ಸಂಘಸಂಸ್ಥೆಗಳಲ್ಲಿ ಪಾರದರ್ಶಕತೆ, ಚುನಾವಣೆಯಲ್ಲಿ ಸುಧಾರಣೆ, ಸಾಲ ವಸೂಲಾತಿ ಹಾಗೂ ಲೆಕ್ಕ ಪರಿಶೋಧನೆ ವಿಷಯದಲ್ಲಿ ಮಹತ್ವದ ಬದಲಾವಣೆಗಾಗಿ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ಚಿಂತನೆ ನಡೆಸಿದೆ.

ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅಧ್ಯಕ್ಷತೆಯಲ್ಲಿ ಸಚಿವರು, ಜನಪ್ರತಿನಿಧಿಗಳು ಹಾಗೂ ಸಹಕಾರಿ ಕ್ಷೇತ್ರದ ಪ್ರಮುಖರ ಜತೆ ಮೊದಲ ಸುತ್ತಿನ ಸಭೆ ಶುಕ್ರವಾರ ಇಲ್ಲಿ ನಡೆಯಿತು. ಮುಖ್ಯಮಂತ್ರಿ ಹಾಗೂ ಕಾನೂನು ಸಚಿವರ ಜತೆ ಸಮಾಲೋಚನೆ ನಡೆಸಿದ ತರುವಾಯ ಎರಡು ಕಾಯ್ದೆಗಳಿಗೆ ತಿದ್ದುಪಡಿ ತರುವ ಬಗ್ಗೆ ಸಭೆ ತೀರ್ಮಾನ ಕೈಗೊಂಡಿತು.

ಸಭೆಯಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್‌, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ, ಅಪೆಕ್ಸ್‌ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ,ರಾಜ್ಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಕೆ. ಷಡಕ್ಷರಿ,ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಉಪಾಧ್ಯಕ್ಷ ರಾಜೀವ್ ಹಾಗೂ ಸಹಕಾರಿ ಮಾರಾಟ ಮಂಡಳದ ಅಧ್ಯಕ್ಷ ಎಂ.ಎನ್ ರಾಜೇಂದ್ರ ಕುಮಾರ್ ಪಾಲ್ಗೊಂಡಿದ್ದರು.

ಚರ್ಚೆಯ ಪ್ರಮುಖ ಅಂಶಗಳು

* ಸಾಲ ವಸೂಲಾತಿ ಬಗ್ಗೆ ಕೆಲವು ಕಠಿಣ ನಿಯಮಗಳನ್ನು ಜಾರಿಗೆ ತರುವ ಬಗ್ಗೆ.

* ಸಹಕಾರಿ ಕ್ಷೇತ್ರದಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾಯಿತ ನಿರ್ದೇಶಕರನ್ನು ಆಯ್ಕೆ ಮಾಡಬೇಕು. ನಾಮನಿರ್ದೇಶನ ಸದಸ್ಯರಿಗೆ ಈ ಅವಕಾಶ ಬೇಡ.

* ಪಾರದರ್ಶಕತೆ ತರಲು ವರ್ಷಕ್ಕೆ ಎರಡು ಬಾರಿ ಸಹಕಾರಿ ಸಂಘ-ಸಂಸ್ಥೆಗಳ ಲೆಕ್ಕಪರಿಶೋಧನೆ.

* ಸಹಕಾರಿ ಕ್ಷೇತ್ರದಲ್ಲಿನ ಚುನಾವಣಾ ಪದ್ದತಿಗಳಲ್ಲಿ ಕೆಲವು ಮಾರ್ಪಾಟು.

*ಪ್ರಾಥಮಿಕ ಸಹಕಾರಿ ಸಂಘಗಳ ಸದಸ್ಯತ್ವ ಮತ್ತು ಸಹ ಸದಸ್ಯತ್ವ ಪಡೆಯುವ ನಿಯಮ ಬದಲಾವಣೆ.

* ಸೌಹಾರ್ದ ಸಹಕಾರ ಸಂಘಗಳಿಗೆ ವಿಧಿಸಿರುವ ಆದಾಯ ತೆರಿಗೆ ವಿನಾಯ್ತಿಗೆ ಸಂಬಂಧಪಟ್ಟ ತಿದ್ದುಪಡಿ ತರಲು ಪ್ರಸ್ತಾಪ.

* ಗೃಹ ನಿರ್ಮಾಣ ಸಹಕಾರ ಸಂಘಗಳ ಕೆಲವು ನಿಯಮಾವಳಿಗಳಿಗೆ ತಿದ್ದುಪಡಿ.

* ಸಹಕಾರಿ ಬ್ಯಾಂಕ್‌, ಸಂಘಗಳಲ್ಲಿ ಸಾಲ ಬಾಕಿ ಇದ್ದರೆ ಪಂಚಾಯಿತಿಯಿಂದ ಎಲ್ಲ ಹಂತಗಳ ಚುನಾವಣೆಗೆ ಸ್ಪರ್ಧಿಸಲು ಇರುವ ನಿರ್ಬಂಧ ತೆರೆವಿಗೆ ಕಾಯ್ದೆ ತಿದ್ದುಪಡಿ ತರುವ ಬಗ್ಗೆ ಮುಖ್ಯಮಂತ್ರಿ ಮುಂದೆ ಪ್ರಸ್ತಾವ ಮಂಡನೆ.

* ಅವಧಿ ಮುಗಿದ ಯಾವುದೇ ಸಹಕಾರಿ ಸಂಘಗಳಿಗೆ ಕನಿಷ್ಠ 6 ತಿಂಗಳೊಳಗೆ ಕಡ್ಡಾಯವಾಗಿ ಚುನಾವಣೆ ನಡೆಸುವುದು.

* ಸಹಕಾರಿ ಕ್ಷೇತ್ರದಲ್ಲಿ ಪರಿಣಿತ ಸಿಬ್ಬಂದಿ ನೇಮಕ ಮಾಡಿಕೊಂಡರೆ ಕ್ಷೇತ್ರ ಉಳಿಯಲು ಸಾಧ್ಯ. ಈ ನಿಟ್ಟಿನಲ್ಲಿ ಸಹಕಾರಿ ನೇಮಕಾತಿಗಾಗಿ ಒಂದು ಪ್ರಾಧಿಕಾರ ರಚನೆ.

ಸಹಕಾರ ಸಂಘಗಳ ಚುನಾವಣೆ ಮುಂದೂಡಿಕೆ

ಇದೇ ತಿಂಗಳ 31ರೊಳಗೆ ನಡೆಯಬೇಕಿದ್ದ ಹಾಗೂ ನಿಗದಿಯಾಗಿದ್ದ ವಿವಿಧ ಸಹಕಾರ ಸಂಘಗಳ ಚುನಾವಣೆಗಳನ್ನು ಮುಂದೂಡಲಾಗಿದೆ.ಕೊರೊನಾ ಸೋಂಕು ಹರಡುವಿಕೆ ತಡೆಗೆ ಸರ್ಕಾರ ಕೆಲ ನಿರ್ಬಂಧಗಳನ್ನು ಹೇರಿರುವ ಕಾರಣ ಈ ಹಂತದಲ್ಲಿ ಚುನಾವಣೆ ನಡೆಸುವುದು ಕಷ್ಟ. ಹೀಗಾಗಿ, ಸಹಕಾರಿ ಕ್ಷೇತ್ರದ ಎಲ್ಲ ಸಂಸ್ಥೆಗಳ ಚುನಾವಣೆ ಮುಂದೂಡಲಾಗಿದೆ ಎಂದು ಸಹಕಾರಿ ಚುನಾವಣಾ ಆಯೋಗದ ಸುತ್ತೋಲೆ ತಿಳಿಸಿದೆ.

ಸಹಕಾರಿಗಳ ಜತೆ ಸಚಿವ ಎಸ್.ಟಿ.ಸೋಮಶೇಖರ್ ಜತೆ ಶುಕ್ರವಾರ ನಡೆಸಿದ ಸಭೆಯಲ್ಲಿ ಮೇ ತಿಂಗಳವರೆಗೂ ಚುನಾವಣೆ ಮುಂದೂಡಿ ಎಂಬ ಆಗ್ರಹ ವ್ಯಕ್ತವಾಗಿತ್ತು. ಮೊದಲ ಹಂತದಲ್ಲಿ ಈ ತಿಂಗಳು ನಡೆಯಬೇಕಿದ್ದ ಚುನಾವಣೆ ಮುಂದೂಡಲಾಯಿತು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT