ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ ಅಗಲ | ಅಂಚೆಯಣ್ಣ ಬಂದ ಔಷಧಿಯನ್ನು ತಂದ!

Last Updated 16 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ
ADVERTISEMENT
""

‘ಓಲೆಯ ಹಂಚಲು ಹೊರಡುವೆ ನಾನು, ಮನೆಯಲಿ ನೀವು, ಬಿಸಿಲಲಿ ನಾನು, ಕಾಗದ ಬಂತು ಕಾಗದವು...’

ಹಳೆಯ ತಲೆಮಾರಿನವರ ಈ ಅಚ್ಚುಮೆಚ್ಚಿನ ಅಂಚೆಯಣ್ಣನ ಹಾಡಿನಲ್ಲಿ ‘ಓಲೆ’ ಮತ್ತು ‘ಕಾಗದ’ ಪದಗಳನ್ನು ತೆಗೆದು ಈಗ ‘ಔಷಧಿ’ ಎಂದು ಹಾಕಿಕೊಂಡು ಹಾಡಬೇಕು. ಕೊರೊನಾ ವೈರಸ್‌ ಕಾರಣದಿಂದ ಲಾಕ್‌ಡೌನ್‌ ಆಗಿ ವಿಮಾನ, ರೈಲು, ಬಸ್‌ಗಳೆಲ್ಲ ಸಂಚಾರ ರದ್ದುಗೊಳಿಸಿರುವ ಈ ಸನ್ನಿವೇಶದಲ್ಲೂ ಭಾರತೀಯ ಅಂಚೆ ಇಲಾಖೆ ದೇಶದ ಮೂಲೆ–ಮೂಲೆಗೆ ಔಷಧಿಯನ್ನು ತಲುಪಿಸುವ ಅನುಪಮ ಸೇವೆಯನ್ನು ಮಾಡುತ್ತಿದೆ. ಜೀವ ಉಳಿಸುವ ಕೆಲಸವನ್ನೂ ಮಾಡುತ್ತಿದೆ. ಅದಕ್ಕಾಗಿ ಕೆಂಪುಬಣ್ಣದ ಅಂಚೆ ವ್ಯಾನ್‌ಗಳು ತೆರಪಿಲ್ಲದಂತೆ ಊರಿಂದೂರಿಗೆ ಎಡತಾಕುತ್ತಿವೆ.

ಮನೆ ಮನೆಗೆ ಪತ್ರಗಳನ್ನು ತಲುಪಿಸುವ ಅಂಚೆಯಣ್ಣನೇ ಔಷಧಿಗಳನ್ನೂ ಹೊತ್ತು ತರುತ್ತಿದ್ದಾನೆ. ಲಾಕ್‌ಡೌನ್‌ ಘೋಷಣೆಯಾದ ಬಳಿಕ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಸಂಪರ್ಕ ಕೊಂಡಿಯೇ ಕಳಚಿಹೋಗಿದೆ. ಹೀಗಾಗಿ ಗ್ರಾಮಾಂತರ ಭಾಗಗಳ ಜನರಿಗೆ ಅಗತ್ಯ ಔಷಧಿಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ಮಧುಮೇಹ, ಅಧಿಕ ರಕ್ತದೊತ್ತಡ ಮೊದಲಾದ ಕಾಯಿಲೆಗಳಿಗೆ ನಿಯಮಿತವಾಗಿ ಸೇವಿಸುವ ಮಾತ್ರೆಗಳೂ ದೊರೆಯುತ್ತಿಲ್ಲ. ಈ ಸಮಸ್ಯೆಯನ್ನು ಮನಗಂಡ ಅಂಚೆ ಇಲಾಖೆಯು ಸ್ಪೀಡ್‌ ಪೋಸ್ಟ್‌ ಮೂಲಕ ಔಷಧಿಗಳನ್ನು ವಿತರಿಸುವ ವ್ಯವಸ್ಥೆಯನ್ನು ಆರಂಭಿಸಿದೆ. ದೇಶದ ಯಾವುದೇ ಮೂಲೆಗಾದರೂ ಔಷಧಿಗಳನ್ನು ತಲುಪಿಸಲಾಗುತ್ತದೆ.

ರೋಗಿಗಳ ಕುಟುಂಬದ ಸದಸ್ಯರು ಅಥವಾ ಸಂಬಂಧಿಗಳು ನಗರ ಪ್ರದೇಶದಲ್ಲಿ ವಾಸವಿದ್ದಲ್ಲಿ ಅವರು ಔಷಧಿಗಳನ್ನು ಖರೀದಿಸಿ, ಅಂಚೆ ಕಚೇರಿಗೆ ತೆರಳಿ ಸ್ಪೀಡ್‌ ಪೋಸ್ಟ್‌ ಮಾಡಬಹುದಾಗಿದೆ. ಈ ವ್ಯವಸ್ಥೆಯಡಿ ಔಷಧಿ ಮಳಿಗೆಗಳು ಕೂಡ ರೋಗಿಗಳ ಬೇಡಿಕೆ ಪಟ್ಟಿಯನ್ನು ಸ್ವೀಕರಿಸಿ, ಔಷಧಿಗಳನ್ನು ಒದಗಿಸಲು ಆರಂಭಿಸಿವೆ. ರಜಾ ದಿನಗಳಲ್ಲೂ ಸ್ಪೀಡ್‌ ಪೋಸ್ಟ್‌ ಸೇವೆ ಇರಲಿದ್ದು, ಈ ಸೌಲಭ್ಯಕ್ಕೆ ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುತ್ತಿಲ್ಲ.

ಕಂಪನಿಗಳಿಂದಲೂ ಬುಕ್ಕಿಂಗ್:‌ ಅಂಚೆ ಇಲಾಖೆಯ ಈ ಸೇವೆಯಡಿ ವಿವಿಧ ಔಷಧಿ ಕಂಪನಿಗಳು ಕೂಡ ಔಷಧಿ ಮಳಿಗೆಗಳಿಗೆ ಅಗತ್ಯ ಔಷಧಿಗಳನ್ನು ಕಳುಹಿಸಲು ಆರಂಭಿಸಿವೆ. ಕಾರ್ಗೊ ವಿಮಾನಗಳು, ಲಾರಿಗಳ ಮೂಲಕ ಔಷಧಿಗಳನ್ನು ವಿವಿಧ ರಾಜ್ಯಗಳಿಗೆ ಸಾಗಿಸಲಾಗುತ್ತಿದೆ.

‘ಸ್ಪೀಡ್‌ ಪೋಸ್ಟ್ ಬುಕ್ಕಿಂಗ್ ಮಾಡುವಾಗ ಔಷಧಿ ಎಂದು ನಮೂದಿಸಬೇಕು. ಅಂಥದ್ದಕ್ಕೆ ವಿಶೇಷ ಆದ್ಯತೆ ನೀಡಿ, ಸಾರಿಗೆ ವ್ಯವಸ್ಥೆಯನ್ನು ಮಾಡಿ ನಿಗದಿತ ಸ್ಥಳಗಳಿಗೆ ತಲುಪಿಸುತ್ತೇವೆ. ಬುಕ್ಕಿಂಗ್ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಸೇವೆಗೆ ಸಾಮಾನ್ಯ ಶುಲ್ಕವನ್ನು ಪಾವತಿಸಿದರೆ ಮುಗಿಯಿತು’ ಎನ್ನುತ್ತಾರೆ ಬೆಂಗಳೂರು ಪ್ರಧಾನ ಅಂಚೆ ಕಚೇರಿಯ ಮುಖ್ಯ ಪೋಸ್ಟ್‌ ಮಾಸ್ಟರ್ ಜನರಲ್ ಕೆ. ರಾಧಾಕೃಷ್ಣ.

ಎಷ್ಟೊಂದು ದೊಡ್ಡಜಾಲ!

1.55 ಲಕ್ಷ

ಅಂಚೆ ಕಚೇರಿಗಳು ದೇಶದಲ್ಲಿವೆ

4.18 ಲಕ್ಷ

ಸಿಬ್ಬಂದಿಯನ್ನು ಅಂಚೆ ಇಲಾಖೆ ಹೊಂದಿದೆ

39 ಸಾವಿರ

ಪೋಸ್ಟ್‌ ಮೆನ್‌ಗಳು ನಗರ ಪ್ರದೇಶದಲ್ಲಿ ಅಂಚೆ ತಲುಪಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ

1.25 ಲಕ್ಷ

ಸಿಬ್ಬಂದಿ ಗ್ರಾಮಾಂತರ ಭಾಗದಲ್ಲಿ ಅಂಚೆ ಬಟವಾಡೆ ಸೇವೆಯಲ್ಲಿ ನಿರತರಾಗಿದ್ದಾರೆ

(ಆಧಾರ: ಅಂಚೆ ಇಲಾಖೆಯ ವಾರ್ಷಿಕ ವರದಿ)

ನಗರಗಳಿಗೆ ಒಂದು, ಗ್ರಾಮೀಣ ಭಾಗಕ್ಕೆ ಮೂರು ದಿನಗಳ ಒಳಗೆ ಬಟವಾಡೆ

ಜನರ ಜತೆಗೆ ಕಂಪನಿಗಳು ಕೂಡ ಬುಕ್ಕಿಂಗ್ ಮಾಡುತ್ತಿವೆ. ನಗರಗಳಲ್ಲಿ ಒಂದು ದಿನ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಮೂರು ದಿನಗಳ ಒಳಗಡೆ ಬಟವಾಡೆ ಮಾಡುತ್ತಿದ್ದೇವೆ ಎಂದು ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್‌ ಮಾಸ್ಟರ್ ಜನರಲ್ ಚಾರ್ಲ್ಸ್‌ ಲೋಬೊ ಹೇಳುತ್ತಾರೆ.

ಔಷಧಿ ಪಡೆಯುವುದು ಸುಲಭ

ಔಷಧಿಯ ಅಗತ್ಯ ಇರುವವರು ನಗರ ಪ್ರದೇಶದ ತಮ್ಮ ಪರಿಚಿತರಿಗೆ ಔಷಧಿಗಳ ಪಟ್ಟಿಯನ್ನು (ಮೊಬೈಲ್/ ದೂರವಾಣಿ‌ ಮೂಲಕ) ಕಳುಹಿಸಬೇಕು. ನಗರ ಪ್ರದೇಶದಲ್ಲಿ ಇರುವವರು ಔಷಧಿ ಮಳಿಗೆಗಳಿಂದ ಅಗತ್ಯ ಔಷಧಿಗಳನ್ನು ಖರೀದಿಸಿ, ಗ್ರಾಮದ ವಿಳಾಸಕ್ಕೆ ಹತ್ತಿರದ ಅಂಚೆ ಕಚೇರಿಯಿಂದ ಸ್ಪೀಡ್‌ ಪೋಸ್ಟ್ ಮಾಡಿದರೆ ಮುಗಿಯಿತು. ಆದ್ಯತೆ ಮೇರೆಗೆ ಆ ಔಷಧಿಗಳು ನಿಮ್ಮನ್ನು ತಲುಪಲಿವೆ. ಈ ರೀತಿ ಕಳುಹಿಸುವಾಗ ಲಕೋಟೆಯ ಮೇಲೆ ಕಡ್ಡಾಯವಾಗಿ ಔಷಧಿ ಎಂದು ನಮೂದಿಸಬೇಕು. ನಗರ ಪ್ರದೇಶದವರು ಕೂಡ ಈ ಸೇವೆಯನ್ನು ಪಡೆಯಬಹುದಾಗಿದೆ.

ವೇಗದ ಬಟವಾಡೆಗೆ ವಿಮಾನದ ನೆರವು

ಚೆನ್ನೈನಿಂದ ಪುಣೆಯ ಆಸ್ಪತ್ರೆಗೆ ಸ್ವಯಂಚಾಲಿತ ತಪಾಸಣಾ ಸಾಧನವೊಂದನ್ನು ತುರ್ತಾಗಿ ಸಾಗಿಸಬೇಕಿತ್ತು. ಲಾಕ್‌ಡೌನ್‌ ಕಾರಣದಿಂದ ಅದನ್ನು ಹೇಗೆ ಸಾಗಿಸಬೇಕೆನ್ನುವುದೇ ಆಸ್ಪತ್ರೆಯ ವ್ಯವಸ್ಥಾಪಕರಿಗೆ ತೋಚದಾಗಿತ್ತು. ಕೊನೆಗೆ ಅವರು ಮೊರೆಹೋಗಿದ್ದು ಅಂಚೆ ಇಲಾಖೆಯನ್ನು.

ಸ್ಪೀಡ್‌ ಪೋಸ್ಟ್‌ ಆರ್ಡರ್‌ ಪಡೆದ ತಕ್ಷಣ ಕಾರ್ಗೊ ವಿಮಾನದ ಮೂಲಕ ಆ ಸಾಧನವನ್ನು ಮುಂಬೈಗೆ ಕಳುಹಿಸಿದ ಇಲಾಖೆ, ಅಲ್ಲಿಂದ ತನ್ನ ವ್ಯಾನ್‌ನಲ್ಲಿ ಪುಣೆಯ ಆಸ್ಪತ್ರೆಗೆ ತಲುಪಿಸಿತು. ಆಸ್ಪತ್ರೆಗೆ ತೀರಾ ಅಗತ್ಯವಾಗಿದ್ದ ಸಾಧನ ಅಂಚೆ ಇಲಾಖೆಯಿಂದ ಹತ್ತು ಗಂಟೆಗಳಲ್ಲಿ ಗಮ್ಯಸ್ಥಾನವನ್ನು ತಲುಪಿತ್ತು. ಇಲಾಖೆಯಲ್ಲಿ ಈಗ ಇಂತಹ ಸಾಹಸದ ಕಥೆಗಳು ಮಡುವುಗಟ್ಟಿವೆ. ಹಣದ ವ್ಯವಹಾರಕ್ಕಿಂತ ಮಾನವೀಯತೆಯೇ ಅದಕ್ಕೀಗ ಮುಖ್ಯವಾಗಿದೆ.

ದೇಶದ ಮೂಲೆ–ಮೂಲೆಗೆ ಔಷಧಿಯನ್ನು ಪೂರೈಸಲು ಭಾರತೀಯ ಔಷಧಿ ತಯಾರಕರ ಸಂಘಟನೆಯು (ಐಡಿಎಂಎ) ಅಂಚೆ ಇಲಾಖೆಯ ಜತೆ ಒಪ್ಪಂದ ಮಾಡಿಕೊಂಡಿದೆ. ತಯಾರಿಕಾ ಘಟಕಗಳಿಂದ ವಿತರಣಾ ಘಟಕಗಳಿಗೆ ತಯಾರಕರು ಅಂಚೆಯ ಮೂಲಕವೇ ಔಷಧಿ ಹಾಗೂ ವೈದ್ಯಕೀಯ ಉಪಕರಣಗಳನ್ನು ಕಳುಹಿಸುತ್ತಿದ್ದಾರೆ.

ಅಂಚೆ ಸೇವೆ ಪಡೆಯುತ್ತಿರುವ ಸಾರ್ವಜನಿಕರು

ಸವಾಲಿನ ನಡುವೆ ಸೇವೆ

‘ಕೊರೊನಾ ಸೋಂಕಿನ ಭೀತಿಯ ನಡುವೆಯೂ ಜನರಿಗೆ ಸಮಸ್ಯೆಯಾಗದಂತೆ ಸೇವೆ ಸಲ್ಲಿಸಬೇಕಾದ ಸವಾಲು ನಮ್ಮ ಮುಂದಿದೆ.ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಔಷಧಿ ಸೇರಿದಂತೆ ವಿವಿಧ ವಸ್ತುಗಳಿಗೆ ಜನತೆ ಅಂಚೆ ಇಲಾಖೆಯನ್ನು ಅವಲಂಬಿಸಿದ್ದಾರೆ. ಬುಕ್‌ ಮಾಡಿದ ವಸ್ತುಗಳು ನಿಗದಿತ ಅವಧಿಯಲ್ಲಿ ವಿಳಾಸವನ್ನು ತಲುಪುವಂತೆ ನೋಡಿಕೊಳ್ಳುವುದು ನಮ್ಮ ಆದ್ಯತೆಯಾಗಿದೆ’ ಎನ್ನುತ್ತಾರೆ ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್‌ ಮಾಸ್ಟರ್ ಜನರಲ್ಚಾರ್ಲ್ಸ್‌ ಲೋಬೊ.

‘ವೆಂಟಿಲೇಟರ್ ಸೇರಿದಂತೆ ವೈದ್ಯಕೀಯ ಉಪಕರಣಗಳನ್ನೂ ಬುಕ್ಕಿಂಗ್ ಮಾಡಿಕೊಳ್ಳಲಾಗುತ್ತಿದೆ. ಪೋಸ್ಟ್‌ ಮ್ಯಾನ್‌ಗಳಿಗೆ ಮುಖಗವಸು, ಕೈಗವಸು ಹಾಗೂ ಸ್ಯಾನಿಟೈಸರ್ ನೀಡಲಾಗುತ್ತಿದ್ದು, ಅವರ ಸುರಕ್ಷತೆಗೂ ಆದ್ಯತೆ ನೀಡಲಾಗಿದೆ’ ಎಂದು ಅವರು ಹೇಳುತ್ತಾರೆ.

‘ಮನೆ–ಮನೆಗೆ ತೆರಳಿ ಅಂಚೆ ಬಟವಾಡೆ ಮಾಡುವುದೇ ನಮ್ಮ ಕರ್ತವ್ಯ. ಹಾಗಾಗಿ ಭಯದ ನಡುವೆಯೂ ಸೇವೆ ಸಲ್ಲಿಸುತ್ತಿದ್ದೇವೆ. ಇಲಾಖೆ ಕೂಡ ಅಗತ್ಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿದೆ’ ಎನ್ನುತ್ತಾರೆ ಪೋಸ್ಟ್‌ ಮ್ಯಾನ್‌ ಎ.ಎಸ್. ಚಂದ್ರಶೇಖರ್.

‘ಇಷ್ಟಪಟ್ಟು ಈ ಇಲಾಖೆಯ ಸೇವೆಗೆ ಸೇರಿದ್ದು, ನಮ್ಮನ್ನು ಜನತೆ ಗೌರವದಿಂದ ಕಾಣುತ್ತಾರೆ. ಮುಖಗವಸು, ಕೈಗವಸು ಧರಿಸಿ ಸೇವೆ ಸಲ್ಲಿಸುತ್ತಿದ್ದೇವೆ. ಸ್ಯಾನಿಟೈಸರ್ ಮೂಲಕ ಆಗಾಗ ಕೈಗಳನ್ನು ಸ್ವಚ್ಛ ಮಾಡಿಕೊಳ್ಳುತ್ತೇವೆ. ‌ನಾವು ಹೊರಗಡೆ ಸುತ್ತಾಡುತ್ತಿರುವ ಬಗ್ಗೆ ಸಹಜವಾಗಿಯೇ ಕುಟುಂಬದ ಸದಸ್ಯರಿಗೆ ಆತಂಕವಿದೆ’ ಎಂದು ವಿವರಿಸುತ್ತಾರೆ.

‘ಸದ್ಯದ ಪರಿಸ್ಥಿತಿಯಲ್ಲಿ ಯಾವ ಪ್ರದೇಶದಲ್ಲಿ ಸೋಂಕಿತ ವ್ಯಕ್ತಿಗಳು ಇದ್ದಾರೆ ಎನ್ನುವುದು ತಿಳಿಯದಂತಾಗಿದೆ. ಹಾಗಂತ ಮನೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಜೀವನ ನಡೆಸಲು ಕೆಲಸ ಮಾಡುವುದು ಅನಿವಾರ್ಯ’ ಎನ್ನುತ್ತಾರೆ ಮತ್ತೊಬ್ಬ ಪೋಸ್ಟ್‌ ಮ್ಯಾನ್‌ ಕೆ.ಎಂ. ರಾಮಮೂರ್ತಿ.

‘28 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇನೆ. ಇದೇ ಮೊದಲ ಬಾರಿ ಭಯದಲ್ಲಿ ಮನೆಯಿಂದ ಹೊರಗಡೆ ಕಾಲಿಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನರಿಗೆ ಪತ್ರಗಳು ಹಾಗೂ ಪಾರ್ಸಲ್‌ಗಳನ್ನು ನೀಡು ವಾಗ ಅಂತರ ಕಾಯ್ದುಕೊಳ್ಳುತ್ತಿದ್ದೇವೆ. ಎಟಿಎಂ ಕಾರ್ಡ್‌ಗಳು, ವಾಹನ ಚಾಲನಾ ಪರವಾನಗಿ, ಬ್ಯಾಂಕ್‌ಗಳ ಪತ್ರ , ಮನಿಯಾರ್ಡರ್, ಪಾರ್ಸಲ್‌ ಹಾಗೂ ಪತ್ರಗಳನ್ನು ಸಮಸ್ಯೆಯಾಗದಂತೆ ತಲುಪಿಸುತ್ತಿದ್ದೇವೆ. ಸದ್ಯ ರೋಸ್ಟರ್ ಪದ್ಧತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ’ ಎಂದು ಅವರು ಹೇಳುತ್ತಾರೆ.

ಪೋಸ್ಟ್‌ ಆನ್‌ ವ್ಹೀಲ್ಸ್‌

ದೇಶದ ಜನರಿಗೆ ಅಂಚೆ ಸೇವೆ ಪಡೆಯುವಲ್ಲಿ ಯಾವುದೇ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ಅಂಚೆ ಇಲಾಖೆಯು ‘ಪೋಸ್ಟ್‌ ಆನ್‌ ವ್ಹೀಲ್ಸ್‌’ ಸೇವೆಯನ್ನು ಆರಂಭಿಸಿದೆ. ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ, ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಇಲಾಖೆಯ ವ್ಯಾನ್‌ಗಳನ್ನೇ ಸಂಚಾರಿ ಅಂಚೆ ಕಚೇರಿಯಾಗಿ ಪರಿವರ್ತಿಸಲಾಗಿದ್ದು, ಬಡಾವಣೆಗಳಿಗೆ ತೆರಳಿ, ಪಾರ್ಸಲ್‌ ಹಾಗೂ ಮನಿ ಆರ್ಡರ್‌ಗಳನ್ನು ಪಡೆಯಲಾಗುತ್ತಿದೆ.

ಅಂಚೆ ಇಲಾಖೆಯ ಒಟ್ಟು ಬಲದ ಅರ್ಧದಷ್ಟು ಸಿಬ್ಬಂದಿ ಮಾತ್ರ ಈಗ ಕರ್ತವ್ಯದ ಮೇಲಿದ್ದಾರೆ. ಕಚೇರಿಗಳಲ್ಲಿ ಅಂತರ ಕಾಯ್ದುಕೊಳ್ಳಬೇಕಾದ ಕಾರಣ ಈ ವ್ಯವಸ್ಥೆ ಮಾಡಲಾಗಿದ್ದು, ಸರದಿ ಪ್ರಕಾರ ಸಿಬ್ಬಂದಿ ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಔಷಧಿ ಹಾಗೂ ವೈದ್ಯಕೀಯ ಸಲಕರಣೆಗಳಂತಹ ವಸ್ತುಗಳನ್ನು ದೇಶದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಸಾಗಿಸಲು ಭಾರತೀಯ ವಾಯುಸೇನೆ ಹಾಗೂ ಏರ್‌ ಇಂಡಿಯಾದ ಕಾರ್ಗೊ ಸೇವೆಯನ್ನು ಅಂಚೆ ಇಲಾಖೆ ಪಡೆಯುತ್ತಿದೆ.

ಬ್ರಿಟಿಷ್‌ ರಾಜ್‌ ವ್ಯವಸ್ಥೆಯಲ್ಲಿ ಸ್ಥಾಪನೆಯಾದ ಭಾರತೀಯ ಅಂಚೆಯು ಜಗತ್ತಿನಲ್ಲೇ ಅತ್ಯಂತ ದೊಡ್ಡದೆನಿಸಿದೆ. ಭಾರತದಲ್ಲಿ ಕೋರಿಯರ್‌ ಸೇವೆ ಪ್ರವರ್ಧಮಾನಕ್ಕೆ ಬಂದ ಬಳಿಕ ಅಂಚೆ ಇಲಾಖೆಯು ತನ್ನ ಹೊಳಪನ್ನು ಕಳೆದುಕೊಳ್ಳುತ್ತಾ ಸಾಗಿತ್ತು. ಕೋರಿಯರ್‌ ಸಂಸ್ಥೆಗಳು ರಾತ್ರಿ, ಬೆಳಗಾಗುವ ಹೊತ್ತಿಗೆ ಪಾರ್ಟಲ್‌ ಹಾಗೂ ಲಕೋಟೆಗಳನ್ನು ತಲುಪಿಸಿದರೆ, ಅಂಚೆ ಇಲಾಖೆಯು 3–4 ದಿನ ತೆಗೆದುಕೊಳ್ಳುತ್ತದೆ ಎಂಬ ಟೀಕೆಗಳು ವ್ಯಾಪಕವಾಗಿದ್ದವು. ಇಮೇಲ್‌ ಹಾಗೂ ವಾಟ್ಸ್‌ ಆ್ಯಪ್‌ಗಳು ಪತ್ರಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲು ಕಾರಣವಾಗಿದ್ದವು. ಆದರೆ, ಸಂಕಷ್ಟದ ಈ ಸನ್ನಿವೇಶದಲ್ಲಿ ಅಂಚೆ ಇಲಾಖೆಯು ಪುಟಿದೆದ್ದು ನಿಂತಿದ್ದು, ತನ್ನ ದೇಶದ ಜನರಿಗೆ ನೆರವಿನಹಸ್ತ ಚಾಚಿದೆ.

‘ಭಯವಿದೆ; ಆದರೆ, ಕೆಲಸ ನಿಲ್ಲಿಸಿಲ್ಲ’

‘ಮನೆ–ಮನೆಗೆ ತೆರಳಿ ಅಂಚೆ ಬಟವಾಡೆ ಮಾಡುವುದೇ ನಮ್ಮ ಕರ್ತವ್ಯ. ಹಾಗಾಗಿ ಭಯದ ನಡುವೆಯೂ ಸೇವೆ ಸಲ್ಲಿಸುತ್ತಿದ್ದೇವೆ. ಇಲಾಖೆ ಕೂಡ ಅಗತ್ಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿದೆ’ ಎನ್ನುತ್ತಾರೆ ಪೋಸ್ಟ್‌ ಮ್ಯಾನ್‌ ಎ.ಎಸ್. ಚಂದ್ರಶೇಖರ್.

‘ಇಷ್ಟಪಟ್ಟು ಈ ಇಲಾಖೆಯ ಸೇವೆಗೆ ಸೇರಿದ್ದು, ನಮ್ಮನ್ನು ಜನತೆ ಗೌರವದಿಂದ ಕಾಣುತ್ತಾರೆ. ಮುಖಗವಸು, ಕೈಗವಸು ಧರಿಸಿ ಸೇವೆ ಸಲ್ಲಿಸುತ್ತಿದ್ದೇವೆ. ಸ್ಯಾನಿಟೈಸರ್ ಮೂಲಕ ಆಗಾಗ ಕೈಗಳನ್ನು ಸ್ವಚ್ಛ ಮಾಡಿಕೊಳ್ಳುತ್ತೇವೆ. ‌ನಾವು ಹೊರಗಡೆ ಸುತ್ತಾಡುತ್ತಿರುವ ಬಗ್ಗೆ ಸಹಜವಾಗಿಯೇ ಕುಟುಂಬದ ಸದಸ್ಯರಿಗೆ ಆತಂಕವಿದೆ’ ಎಂದು ವಿವರಿಸುತ್ತಾರೆ.

‘ಸದ್ಯದ ಪರಿಸ್ಥಿತಿಯಲ್ಲಿ ಯಾವ ಪ್ರದೇಶದಲ್ಲಿ ಸೋಂಕಿತ ವ್ಯಕ್ತಿಗಳು ಇದ್ದಾರೆ ಎನ್ನುವುದು ತಿಳಿಯದಂತಾಗಿದೆ. ಹಾಗಂತ ಮನೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಜೀವನ ನಡೆಸಲು ಕೆಲಸ ಮಾಡುವುದು ಅನಿವಾರ್ಯ’ ಎನ್ನುತ್ತಾರೆ ಮತ್ತೊಬ್ಬ ಪೋಸ್ಟ್‌ ಮ್ಯಾನ್‌ ಕೆ.ಎಂ. ರಾಮಮೂರ್ತಿ.

‘28 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇನೆ. ಇದೇ ಮೊದಲ ಬಾರಿ ಭಯದಲ್ಲಿ ಮನೆಯಿಂದ ಹೊರಗಡೆ ಕಾಲಿಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನರಿಗೆ ಪತ್ರಗಳು ಹಾಗೂ ಪಾರ್ಸಲ್‌ಗಳನ್ನು ನೀಡುವಾಗ ಅಂತರ ಕಾಯ್ದುಕೊಳ್ಳುತ್ತಿದ್ದೇವೆ.ಎಟಿಎಂ ಕಾರ್ಡ್‌ಗಳು, ವಾಹನ ಚಾಲನಾ ಪರವಾನಗಿ, ಬ್ಯಾಂಕ್‌ಗಳ ಪತ್ರ , ಮನಿಯಾರ್ಡರ್, ಪಾರ್ಸಲ್‌ ಹಾಗೂ ಪತ್ರಗಳನ್ನು ಸಮಸ್ಯೆಯಾಗದಂತೆ ತಲುಪಿಸುತ್ತಿದ್ದೇವೆ. ಸದ್ಯ ರೋಸ್ಟರ್ ಪದ್ಧತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ’ ಎಂದು ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT