ಶನಿವಾರ, ಜನವರಿ 25, 2020
22 °C
ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ

ಅಗತ್ಯ ಮೂಲಸೌಕರ್ಯ ನಿರ್ವಹಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಜಿಲ್ಲೆಯ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀ ಗವಿಸಿದ್ಧೇಶ್ವರ ಮಠದ ಜಾತ್ರಾ ಮಹೋತ್ಸವವು ಜ 8ರಿಂದ ಆರಂಭವಾಗಲಿದ್ದು, ಜಾತ್ರೆಗೆ ಬರುವ ಭಕ್ತರಿಗೆ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲಸೌಕರ್ಯ ಒದಗಿಸಲು ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ಸಹಕಾರ ಒದಗಿಸುವ ಕುರಿತು ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಾತ್ರಾ ಮಹೋತ್ಸವದಲ್ಲಿ ಸ್ವಚ್ಛತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ನಗರಸಭೆ ವತಿಯಿಂದ ಎಲ್ಲ ರಸ್ತೆಗಳಲ್ಲಿ ಸ್ವಚ್ಛತೆ, ಧೂಳು ನಿಯಂತ್ರಣಕ್ಕೆ ಪರ್ಯಾಯ ವ್ಯವಸ್ಥೆ. ತಾತ್ಕಾಲಿಕವಾಗಿ ಪ್ರತ್ಯೇಕ ಶೌಚಾಲಯ ಕುಡಿಯುವ ನೀರು ಪೂರೈಸಬೇಕು. ಭದ್ರತೆಯ ಹಿತದೃಷ್ಠಿಯಿಂದ ಪೊಲೀಸ್ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಬೇಕು. ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು. ಅಗ್ನಿ ಶಾಮಕ ದಳದವರು ಅಗ್ನಿ ಶಾಮಕ ವಾಹನವನ್ನು ಸ್ಥಳದಲ್ಲಿಯೇ ಕಾಯ್ದಿರಿಸಬೇಕು. ಜೆಸ್ಕಾಂ ತುರ್ತು ಸೇವೆಗೆ ಸದಾ ಸಿದ್ಧರಿರಬೇಕು ಎಂದು ಸೂಚನೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ ಮಾತನಾಡಿ, ಪ್ರಸಾದ ವಿತರಣೆ ಪೂರ್ವದಲ್ಲಿ ಆಹಾರವನ್ನು ಪರಿಶೀಲಿಸುವುದು ಅತ್ಯವಶ್ಯ. ಜಿಲ್ಲಾ ಆರೋಗ್ಯ ಅಧಿಕಾರಿ, ಆಹಾರ ಸುರಕ್ಷಾಧಿಕಾರಿ, ಗವಿಮಠದ ಅಡುಗೆ ಸಿಬ್ಬಂದಿಯೊಂದಿಗೆ ವಿಶೇಷ ಸಭೆ ನಡೆಸಿ, ಆಹಾರ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕು. ಪ್ರಸಾದ ವಿತರಣೆ ಪೂರ್ವದಲ್ಲಿ ಆಹಾರ ಸುರಕ್ಷಾ ಅಧಿಕಾರಿಯಿಂದ ಪರಿಶೀಲನೆ ನಡೆದ ನಂತರವೇ ಪ್ರಸಾದ ವಿತರಿಸಬೇಕು ಎಂದು ಸಲಹೆ ನೀಡಿದರು.

ಆಟೋಪಕರಣಗಳ ಪರವಾನಿಗೆ ಪಡೆಯುವ ಮೊದಲು ಸಂಬಂಧಪಟ್ಟ ಇಲಾಖೆಯಿಂದ ಸಲ್ಲಿಸಲಾಗುವ ನಿರಾಕ್ಷೇಪಣಾ ಪತ್ರವನ್ನು ಯಾವುದೇ ವಿಳಂಬಕ್ಕೆ ಆಸ್ಪದ ನೀಡದೇ ಸೂಕ್ತ ಸಮಯದಲ್ಲಿ ಸಲ್ಲಿಸಬೇಕು. ಆಟೋಪಕರಣದಲ್ಲಿ ದುರ್ಘಟನೆ ಸಂಭವಿಸಿದಂತೆ ಎಚ್ಚರ ವಹಿಸಿ. ಪರವಾನಿಗೆ ಪಡೆಯದೇ ಪ್ರಾರಂಭಿಸಿದ ಅಂಗಡಿಗಳ ವಿರುದ್ಧ ಕ್ರಮ ಜರುಗಿಸಬೇಕು. ಜಾತ್ರೆಯಲ್ಲಿ ಹಾಕಲಾಗುವ ಎಲ್ಲ ಅಂಗಡಿಗಳಿಗೆ ನಂಬರಿಂಗ್ ಮಾಡಬೇಕು. ಇದರಿಂದ ಯಾವುದೇ ಅವಘಡ ಸಂಭವಿಸಿದಲ್ಲಿ ತುರ್ತು ಸೇವೆಗಾಗಿ ಅನುಕೂಲವಾಗುವುದು ಎಂದರು.

ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಿದ್ಧರಾಮೇಶ್ವರ, ನಿರ್ಮಿತಿ ಕೇಂದ್ರದ ಶಶಿಧರ ಪಾಟೀಲ, ಡಿಎಚ್‌ಒ ಡಾ. ಲಿಂಗರಾಜು, ತಹಶೀಲ್ದಾರ್ ಜೆ.ಬಿ. ಮಜ್ಗಿ, ನಗರಸಭೆ ಪ್ರಭಾರ ಪೌರಾಯುಕ್ತ ಮಂಜುನಾಥ, ಗವಿಮಠ ಸಂಸ್ಥಾನದಿಂದ ಬಸವರಾಜ ಬಳ್ಳೊಳ್ಳಿ, ಶರಣಬಸಪ್ಪ ಇದ್ದರು.

ಪ್ರತಿಕ್ರಿಯಿಸಿ (+)