ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ತಾಯಿಗೆ ನಿತ್ಯೋತ್ಸವ ಬಯಸಿದ ಮೊದಲ ಕವಿ ನಿಸಾರ್‌ ಅಹಮದ್

Last Updated 3 ಮೇ 2020, 13:12 IST
ಅಕ್ಷರ ಗಾತ್ರ

‘ಕನ್ನಡ ಕವಿಗಳಲ್ಲಿ ಕುವೆಂಪು, ಬೇಂದ್ರೆ, ಹುಯಿಲಗೊಳರಂತೆ ಕನ್ನಡವನ್ನು ಉಸಿರಾಡುವ, ಕನ್ನಡಕ್ಕಾಗಿ ಹಂಬಲಿಸುವ. ಕನ್ನಡ ನೆಲವನ್ನು ಆರಾಧಿಸುವ ಗುಣವನ್ನು ನಿಸಾರ್ ಹೊಂದಿದ್ದರು’ ಎನ್ನುವುದು ನಿಸಾರ್‌ ಅಹಮದ್‌ರ ಬಹುಕಾಲದ ಒಡನಾಡಿ ಮತ್ತು ಅವರ ಕೆಲ ಕೃತಿಗಳನ್ನು ತೆಲುಗಿಗೂ ಭಾಷಾಂತರಿಸಿರುವ ಕವಿ ಸ.ರಘುನಾಥ ಅವರ ಅಭಿಪ್ರಾಯ.

–––

ಕೆ.ಎಸ್.ನಿಸಾರ್‌ ಅಹ್ಮದ್‌ ಕನ್ನಡ ನಾಡಿನ ನವ್ಯ ಮತ್ತು ನಂತರದ ಕವಿಗಳಲ್ಲಿ ಒಂದು ದೊಡ್ಡ ಕಾವ್ಯ ಚೇತನ. ಅಷ್ಟೇ ಅಲ್ಲದೆ, ಅವರು ಎಲ್ಲ ಗುಮಾನಿಗಳ ನಡುವೆ ಏಕತೆಯನ್ನು ಬಯಸುತ್ತಿದ್ದವರು. ಅವರಲ್ಲಿ ಅದುಒಂದು ಕೊರಗಾಗಿತ್ತು. ಅದಕ್ಕೆ ಉದಾಹರಣೆಯಾಗಿ ‘ನಿಮ್ಮೊಡನಿದ್ದು ನಿಮ್ಮಂತಾಗದೆ’ ಮತ್ತು ‘ಸವತಿ ಮಕ್ಕಳಾಗಿ ಕಾಡಬೇಡಮ್ಮ’ ಕವಿತೆಗಳನ್ನು ಉದಾಹರಿಸಬಹುದು.

ಒಂದು ರೀತಿಯ ಶಿಶುನಾಳ ಷರೀಫರ ತುಡಿತಗಳನ್ನುಅವರಲ್ಲಿ ಮತ್ತು ಅವರ ಕಾವ್ಯದಲ್ಲಿ ನಾನು ಕಂಡಿದ್ದೇನೆ. ಸುಮಾರು 30 ವರ್ಷಗಳ ನಮ್ಮಿಬ್ಬರ ನಡುವಿನ ಸ್ನೇಹದಲ್ಲಿ ನನಗೆ ನಿಸಾರರಲ್ಲಿ ಒಬ್ಬ ಅಚ್ಚ ಕನ್ನಡಿಗ ಮುಸ್ಲೀಮ ಕಂಡಿದ್ದಾನೆ. ಜನರ ನೋವಿಗೆ ಅವರು ಕಾವ್ಯಾತ್ಮಕವಾಗಿಯೂ ಮಿಡಿಯುತ್ತಿದ್ದರು. ಅದಕ್ಕೆ ‘ನಾಡ ದೇವಿಯೇ ಕಂಡೆ ನಿನ್ನ ಮಡಲಿಲ್ಲ ಎಂಥ ದೃಶ್ಯ’ ಕವಿತೆ ಒಂದು ಸ್ಪಷ್ಟ ನಿದರ್ಶನ.

ಕನ್ನಡ ಕವಿಗಳಲ್ಲಿ ಕುವೆಂಪು, ಬೇಂದ್ರೆ, ಹುಯಿಲಗೊಳರಂತೆ ಕನ್ನಡವನ್ನು ಉಸಿರಾಡುವ, ಕನ್ನಡಕ್ಕಾಗಿ ಹಂಬಲಿಸುವ. ಕನ್ನಡ ನೆಲವನ್ನು ಆರಾಧಿಸುವ ಗುಣವನ್ನು ನಿಸಾರ್ ಹೊಂದಿದ್ದರು. ‘ನಿತ್ಯೋತ್ಸವ ತಾಯೇನಿತ್ಯೋತ್ಸವ’ ಕೃತಿಯನ್ನು ಈಗ ನೆನಪಿಸಿಕೊಂಡಾಗ, ‘ಕನ್ನಡ ತಾಯಿಗೆ ನಿತ್ಯೋತ್ಸವವನ್ನು ಬಯಸಿದ ಮೊದಲ ಕವಿ ನಿಸಾರ್’ ಎನ್ನಿಸುತ್ತದೆ. ಹೀಗೆ ಪ್ರೀತಿ ವಾತ್ಸಲ್ಯದ ಜೊತೆಗೆ ನಾಡಿನ ಕವಿ ಮಾರ್ಗವನ್ನು ತಮ್ಮ ನಿಡಿದಾದ ಸಾಹಿತ್ಯ ಜೀವನದಲ್ಲಿ ಕಾಣುತ್ತಾ ಬಳಸುತ್ತಾ, ಉಳಿಸಿಕೊಂಡ ವಿರಳರಲ್ಲಿ ನಿಸಾರ್‌ ಪ್ರಮುಖರು.

ಭಾವಗೀತೆ ಕನ್ನಡದಿಂದಲೇ ದೂರವಾಗಿಬಿಟ್ಟಿದೆ ಎನ್ನುವಂತಾಗಿದ್ದ ನವ್ಯ ಯುಗದಲ್ಲಿ ಯಾವುದೇ ಟೀಕೆಗಳಿಗೆ ಕಿವಿಗೊಡದೆ, ಹಿಂಜರಿಯದೇ ಭಾವಗೀತೆಗಳಿಗೆ ಮರುಹುಟ್ಟು ನೀಡಿದವರು ನಿಸಾರ್. ಭಾವ ಕವಿತೆಗಳ ಹೊಸ ಯುಗಕ್ಕೆ ನಾಂದಿ ಹಾಡಿ ಹಿಂದಿನ ಪರಂಪರೆಗೆ ಮರು ಆಹ್ವಾನ ನೀಡಿದರು. ಇದರ ಪರಿಣಾಮವಾಗಿ ಮೈಸೂರು ಅನಂತಸ್ವಾಮಿ ಅವರ ನಂತರದ ಗಾಯಕರಿಗೆ ಇವರೂ ಮತ್ತು ಇವರಿಂದ ಪ್ರೇರಿತರಾದ ಕನ್ನಡ ಕವಿಗಳು ಸಾಹಿತ್ಯದ ಧ್ವನಿಯನ್ನು ಸಂಗೀತದ ನಾದಕ್ಕೆ ಕೊಟ್ಟರು. ಉತ್ತಮ ಭಾವ ಕವಿತೆಗಳ ಯುಗದ ಉತ್ತರಾರ್ಧವು ಈಗಲೂ ಮುಂದುವರಿಯುತ್ತಿರುವುದರ ಹಿಂದೆನಿಸಾರರಪ್ರೇರಣೆಯನ್ನು ಗುರುತಿಸಬಹುದು.

ನಿಸಾರ್‌ ಅಹಮದ್‌ ಅವರ ಕಾವ್ಯ ಭಾರತದ ಉದ್ದಗಲದ ಗುಣಗಳನ್ನು ಮತ್ತು ಮಣ್ಣಿನ ವಾಸನೆಯನ್ನು ಹೊಂದಿದೆ. ಸರಿಯಲ್ಲದ್ದು ಸ್ವಧರ್ಮವಾಗಲಿ, ಪರಧರ್ಮವಾಗಲಿ ಅವರ ಕಾವ್ಯದಲ್ಲಿ ಟೀಕೆಗೆ ವಿಡಂಬನೆಗೆ ಮತ್ತು ಸತ್ಯಕ್ಕೆ ತೆರೆದಿಡುತ್ತದೆ. ಒಂದು ರೀತಿಯ ನಿರ್ಭಿಡೆ ನಿಸಾರರ ಕಾವ್ಯದ ಒಳಶಕ್ತಿ. ರಾಜಕೀಯದ ವಿಡಂಬನೆಯು ಅವರ ಕವಿತೆಯ ಇನ್ನೊಂದು ಧ್ವನಿ. ಅದಕ್ಕೆ ‘ಕುರಿಗಳು ಸಾರ್‌ ಕುರಿಗಳು ಕವಿತೆ’ ಸಾಕ್ಷಿ. ಜೊತೆಗೆ ಪ್ರಕೃತಿಯಲ್ಲಿ ಶ್ರದ್ಧೆ ಜೀವನ, ಹಸನಿಕೆಯಲ್ಲಿ ಕೃಷಿಕತೆ ಅವರ ಒಡಲಿನ ಬೇಸಾಯಕ್ರಮ. ಎಲ್ಲಕ್ಕೂ ಮೀರಿದ್ದು ಮನುಷ್ಯನಲ್ಲಿಯ ನಂಬಿಕೆ ಮತ್ತು ಪ್ರೀತಿ. ಇದು ಅವರಲ್ಲಿನ ಮೂಲ ದ್ರವ್ಯವೂ ಆಗಿದೆ. ಏಕೆಂದರೆ, ನಿಸಾರ್‌ ಅವರು ತಾಯಿಯ ಪ್ರಭಾವಕ್ಕೆ ಒಳಗಾಗಿದ್ದುದರಿಂದ ಅವರ ಗಂಡು ಮನಸ್ಸಿನ ಒಳಗೆ ತಾಯಿ ಗುಣ ಅರಳಿಕೊಂಡಿತ್ತು. ಮನುಷ್ಯನ ಬಗ್ಗೆ ಅವರಲ್ಲಿದ್ದ ಮಿಡಿತವೂ ಅದಕ್ಕೆ ಸಾಕ್ಷಿಯಾಗುತ್ತದೆ.

ನಿಸಾರರ ಕಾವ್ಯ ಕನ್ನಡಕ್ಕಷ್ಟೇ ಹೆಮ್ಮೆಯಲ್ಲ. ಅದು ಯಾವ ಭಾಷೆಗೆ ಹೋದರೂ ಆ ಭಾಷೆಗೆ ಒಂದು ಸಂಭ್ರಮ ತರುವಂಥದ್ದು. ಹಾಗಾಗಿಯೇ ಅವರ ಕವಿತೆಗಳು ಬಿಡಿ ಬಿಡಿಯಾಗಿ ಮಾತ್ರವಲ್ಲ, ಇಡಿ ಇಡಿಯಾಗಿ ಅನೇಕ ಭಾಷೆಗಳಿಗೆ ತರ್ಜುಮೆಗೊಂಡಿವೆ. ಇತ್ತೀಚೆಗೆ ಅವರ ಕಣ್ಣು ಮತ್ತು ಮನದ ಮುಂದೆಯೇ ತೆಲುಗು, ಮಲೆಯಾಳಂ, ತುಳು, ಇಂಗ್ಲಿಷ್‌ ಮತ್ತು ಉರ್ದು ಭಾಷೆಗಳಿಗೆ ಅನುವಾದಗೊಂಡ ಕವಿತೆಗಳು ಸಂಕಲನವಾಗಿ ಪ್ರಕಟಗೊಂಡವು. ಈ ಅನುವಾದ ಕಾವ್ಯ ಕೃತಿ ಎಲ್ಲ ಭಾಷೆಗಳಲ್ಲೂ ಓದುಗ, ವಿಮರ್ಶಕರ ಗಮನ ಸೆಳೆದು ಕನ್ನಡ ಕಾವ್ಯದ ಲವಲವಿಕೆಯೊಂದು ಆ ಭಾಷೆಗಳ ಧ್ವನಿಯ ಮೂಲಕ ಹರಿಯತೊಡಗಿದ್ದು ನಿಸಾರರಿಗೆ ಹೆಮ್ಮೆ ತಂದಿತ್ತು.

ಪ್ರಶಸ್ತಿಗಳಿಗೆ ಗೌರವ ಸನ್ಮಾನಗಳಿಗೆ ಹಿಗ್ಗಿ ನೆಲವನ್ನು ಬಿಡದೆ, ಅವುಗಳನ್ನು ಸಂತೋಷ ಸಂಭ್ರಮಗಳಿಂದ ಅನುಭವಿಸಿದ ಕವಿ ನಿಸಾರ್‌ ಅವರು. ಅವತಾರಪುರುಷರೆಂದೇ ಹೆಸರಾದ ರಾಮ, ಕೃಷ್ಣರೇ ಕಾಲದ ನಿಯಮದಂತೆ ಮರಣವನ್ನು ತಂದುಕೊಂಡವರು. ಅಂತೆಯೇ ಚಿರಂಜೀವಿ ಎನಿಸಿಕೊಂಡ ಹನುಮಂತನಿಗೂ ಅಂತ್ಯವಿತ್ತು. ಹಾಗೆಯೇ ಎಷ್ಟೇ ಕೀರ್ತಿವಂತರಾಗಲಿ, ನಾವು ಆರಾಧಿಸುವವರೇ ಆಗಲಿ ಜವರಾಯ ಕರೆದಾಗ ಬರಲೊಲ್ಲೆ ಎನ್ನಲು ಸಾಧ್ಯವಿಲ್ಲ. ನಿಸಾರ್‌ ಅವರೂ ಸಹ ಜವರಾಯನ ಕರೆಯನ್ನು ಮನ್ನಿಸಿಬಿಟ್ಟರು.

ನಮ್ಮ ಜಾನಪದರು ಹೇಳುವಂತೆ ‘ಜವರಾಯ ಬರುವಾಗ ಬರಿಕೈಲಿ ಬರಲಿಲ್ಲ, ಒಳ್ಳೊಳ್ಳೆ ಮರವೇ ಕಡಿ ಎಂದ’ ಎಂಬಂತೆ ಈ ಬಾರಿ ಜವರಾಯ ನಿಸಾರ್‌ ಎಂಬ ಕಾವ್ಯ ಮರವನ್ನು ಕಡಿದುಬಿಟ್ಟಿದ್ದಾನೆ. ಹೃದಯ ದ್ರವಿಸುತ್ತಿದೆ. ಕನ್ನಡ ಕಾವ್ಯ ಕನ್ನಿಕೆ ಸ್ವರ್ಗದ ಬಾಗಿಲು ತೆರೆದುಬಿಟ್ಟಿದ್ದಾಳೆ. ಅಲ್ಲಿಗೆ ಬೀಳ್ಕೊಡುವುದಷ್ಟೇ ನಮ್ಮ ಪಾಲಿಗೆ ಉಳಿದಿರುವುದು.

(ನಿರೂಪಣೆ: ಹರಿಶಂಕರ್ ಆರ್.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT