ಮಂಗಳವಾರ, ಮೇ 18, 2021
23 °C

101 ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಎಂಇಎಸ್‌ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದಿಂದ 101 ಮಂದಿಯನ್ನು ಪಕ್ಷೇತರ ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸಲು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮುಖಂಡರು ಬುಧವಾರ ನಡೆದ ಸಭೆಯಲ್ಲಿ ನಿರ್ಧರಿಸಿದ್ದಾರೆ.

‘ಕರ್ನಾಟಕ–ಮಹಾರಾಷ್ಟ್ರ ನಡುವಿನ ಗಡಿ ವಿವಾದದ ಬಗ್ಗೆ ದೇಶದ ಗಮನಸೆಳೆಯುವುದು ಹಾಗೂ ವಿವಾದವನ್ನು ತ್ವರಿತವಾಗಿ ಬಗೆಹರಿಸಬೇಕು ಎಂದು ಆಗ್ರಹಿಸುವುದು’ ಅವರ ಉದ್ದೇಶವಾಗಿದೆ. ಸಮಿತಿಯು ಸಕ್ರಿಯವಾಗಿದೆ ಎಂದು ತೋರಿಸುವುದಕ್ಕಾಗಿ ಈ ತೀರ್ಮಾನಕ್ಕೆ ಬಂದಿದ್ದಾರೆ.

ಸ್ಪರ್ಧಿಸಲು ಆಸಕ್ತರಾಗಿರುವವರಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ತಿಳಿಸಿದ್ದಾರೆ. ಠೇವಣಿ ಹಣವನ್ನು ಎಂಇಎಸ್‌ ಬೆಂಬಲಿಗರಿಂದ ದೇಣಿಗೆ ಸಂಗ್ರಹಿಸಲು ನಿರ್ಧರಿಸಲಾಗಿದೆ.

ಅಧ್ಯಕ್ಷ ದೀಪಕ ದಳವಿ ಮಾತನಾಡಿ, ‘ಇಲ್ಲಿಂದ ಆಯ್ಕೆಯಾದ ಸಂಸತ್‌ ಸದಸ್ಯರು ಎಂಇಎಸ್ ಪರವಾಗಿ ಮಾತನಾಡಿಲ್ಲ ಹಾಗೂ ಮರಾಠಿ ಭಾಷಿಕರಿಗೆ ನ್ಯಾಯ ಒದಗಿಸಿಲ್ಲ. ಕರ್ನಾಟಕ ಸರ್ಕಾರದಿಂದ ನಮ್ಮ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ರಿಂಗ್‌ ರೋಡ್ ನಿರ್ಮಾಣದ ನೆಪದಲ್ಲಿ ಜಮೀನುಗಳನ್ನೂ ಕಸಿದುಕೊಳ್ಳಲಾಗುತ್ತಿದೆ. ದೀರ್ಘ ಕಾಲದಿಂದ ಬಾಕಿ ಉಳಿದಿರುವ ಗಡಿ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ದನಿ ಎತ್ತಿಲ್ಲ’ ಎಂದು ದೂರಿದರು.

‘ಈ ಚುನಾವಣೆಯಲ್ಲಿ ನಮ್ಮ ಶಕ್ತಿಯನ್ನು ತೋರಿಸಬೇಕಾಗಿದೆ. ಮಾರ್ಚ್‌ 2ರಂದು ನಮ್ಮ ಬೆಂಬಲಿತ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ’ ಎಂದು ಹೇಳಿದರು.

ಮುಖಂಡರಾದ ಅರವಿಂದ ಪಾಟೀಲ, ಮನೋಹರ ಕಿಣೇಕರ, ಮಾಲೋಜಿ ಅಷ್ಟೇಕರ, ವಿಕಾಸ ಕಲಘಟಗಿ, ಪ್ರಕಾಶ ಮರಗಾಲೆ, ನಿಂಗೋಜಿ ಹುದ್ದಾರ, ಎಲ್‌.ಐ. ಪಾಟೀಲ ಭಾಗವಹಿಸಿದ್ದರು.‌

ಹಿಂದಿನಿಂದಲೂ ಗಡಿ ವಿವಾದ ಕೆದಕುತ್ತಲೇ ಬಂದಿರುವ ಎಂಇಎಸ್‌ನವರು, 1996ರ ಚುನಾವಣೆಯಲ್ಲಿ 452 ಮಂದಿಯನ್ನು ಪಕ್ಷೇತರ ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸಿದ್ದರು. ಅವರಲ್ಲರೂ ಠೇವಣಿ ಕಳೆದುಕೊಂಡಿದ್ದರು. ಜನತಾದಳದ ಶಿವಾನಂದ ಕೌಜಲಗಿ ಆಯ್ಕೆಯಾಗಿದ್ದರು. ಇದರಿಂದ ಎಂಇಎಸ್‌ಗೆ ಮುಖಭಂಗವಾಗಿತ್ತು.

ಸಮಿತಿಯವರು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್ ಅವರನ್ನು ಭಾನುವಾರ ಭೇಟಿಯಾಗಿ, ಕರ್ನಾಟಕ ಸರ್ಕಾರದ ವಿರುದ್ಧ ದೂರು ಸಲ್ಲಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು