ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಇಎಸ್ ಮುಖಂಡರಿಂದ ಗಡಿ ಕ್ಯಾತೆ; ಮಹಾರಾಷ್ಟ್ರ ಸಿಎಂ ಭೇಟಿಯಾಗಿ ದೂರು

Last Updated 25 ಮಾರ್ಚ್ 2019, 9:07 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಸಾಂಬ್ರಾ ವಿಮಾನನಿಲ್ದಾಣಕ್ಕೆ ಭಾನುವಾರ ತಡರಾತ್ರಿ ಬಂದಿಳಿದ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್ ಹಾಗೂ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾದ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮುಖಂಡರು, ‘ಗಡಿ ವಿವಾದವನ್ನು ಕೂಡಲೇ ಬಗೆಹರಿಸಬೇಕು. ನಮ್ಮನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ. ಇದರೊಂದಿಗೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಗಡಿ ವಿವಾದವನ್ನು ಕೆದಕಿ, ಕ್ಯಾತೆ ತೆಗೆದಿದ್ದಾರೆ.

ವಿಶೇಷ ವಿಮಾನದಲ್ಲಿ ತೆರಳಲು ಬಂದಿದ್ದ ಅವರನ್ನು ಭೇಟಿಯಾಗಿ ಕರ್ನಾಟಕ ಸರ್ಕಾರದ ವಿರುದ್ಧ ದೂರುಗಳನ್ನು ಹೇಳಿದ್ದಾರೆ. ‘ಇಲ್ಲಿರುವ ಮರಾಠಿ ಭಾಷಿಕರಾದ ನಮ್ಮ ಮೇಲೆ ಕರ್ನಾಟಕ ಸರ್ಕಾರ ದೌರ್ಜನ್ಯ ನಡೆಸುತ್ತಿದೆ. ದಾಖಲೆಗಳನ್ನು ಮರಾಠಿಯಲ್ಲಿ ನೀಡುತ್ತಿಲ್ಲ. ಗಡಿ ವಿವಾದ ಬಗೆಹರಿಯುವರೆಗೆ ನಮಗೆ ನೆಮ್ಮದಿ ಇಲ್ಲ’ ಎಂದು ಅಳಲು ತೋಡಿಕೊಂಡಿದ್ದಾರೆ.

‘ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ರಚಿಸಲಗಿರುವ ಉನ್ನತ ಸಮಿತಿಯ ಸಭೆಯಲ್ಲಿ ಚರ್ಚಿಸಲಾದ ವಿವರವನ್ನು ನೀಡಬೇಕು. ನಮ್ಮನ್ನೂ ಸಭೆಗೆ ಕರೆಯಬೇಕು. ಕಾನೂನು ತಜ್ಞರ ಜೊತೆ ಚರ್ಚಿಸಿ ವಿವಾದವನ್ನು ಬೇಗನೆ ಬಗೆಹರಿಸುವ ಕ್ರಮಗಳನ್ನು ಅನುಸರಿಸಬೇಕು’ ಎಂದು ಕೋರಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ‘ವಿವಾದ ಬಗೆಹರಿಯಬೇಕು ಎನ್ನುವ ನಿಟ್ಟಿನಲ್ಲಿ ನಮ್ಮ ಬೆಂಬಲವೂ ಇದೆ. ಲೋಕಸಭೆ ಚುನಾವಣೆ ನೀತಿಸಂಹಿತೆ ಮುಕ್ತಾಯವಾದ ನಂತರ ಉನ್ನತ ಮಂಡಳಿ ಸಭೆ ನಡೆಸಲಾಗುವುದು. ಏ. 29ರ ಬಳಿಕ ಎಂಇಎಸ್ ಮುಖಂಡರನ್ನು ಕೂಡ ಮುಂಬೈಗೆ ಆಹ್ವಾನಿಸಲಾಗುವುದು. ಆಗ, ಗಡಿ ವಿವಾದದ ವಿಷಯದ ಕುರಿತು ಚರ್ಚಿಸೋಣ’ ಎಂದು ತಿಳಿಸಿದರು ಎಂದು ಮೂಲಗಳು ಮಾಹಿತಿ ನೀಡಿವೆ.

‘ಎಂಇಎಸ್‌ ಹೋರಾಟಕ್ಕೆ ತಮ್ಮ ಬೆಂಬಲವಿದೆ. ಮರಾಠಿ ಭಾಷಿಕರ ಹಿತ ಕಾಯಲು ಬದ್ಧವಾಗಿದ್ದೇವೆ’ ಎಂದು ಉದ್ಧವ್ ಕೂಡ ಹೇಳಿದ್ದಾರೆ.

‘ಪ್ರಚೋದನಕಾರಿ ಭಾಷಣದ ಮೂಲಕ ವಿವಾದವನ್ನು ಜೀವಂತವಿಡಲು ಪ್ರಯತ್ನಿಸಬೇಕು. ನಗರದಲ್ಲಿ ಕಿಚ್ಚು ಹೊತ್ತಿಕೊಳ್ಳುವಂಥ ಹೋರಾಟ ಕೈಗೊಳ್ಳಬೇಕು. ಈ ಹೋರಾಟಕ್ಕೆ ಶಿವಸೇನೆ ಸದಾ ಬೆಂಬಲ ನೀಡುತ್ತದೆ’ ಎಂದು ಮಹಾರಾಷ್ಟ್ರದ ಸಂಸದ, ಶಿವಸೇನೆಯ ಅನಿಲ ದೇಸಾಯಿ ಎಂಇಎಸ್ ಮುಖಂಡರನ್ನು ಪ್ರಚೋದಿಸಿದರು ಎಂದು ತಿಳಿದುಬಂದಿದೆ.

ಎಂಇಎಸ್ ಕೇಂದ್ರ ಸಮಿತಿ ಅಧ್ಯಕ್ಷ ದೀಪಕ ದಳವಿ, ಪ್ರಧಾನ ಕಾರ್ಯದರ್ಶಿ ಮಾಲೋಜಿ ಅಷ್ಟೇಕರ, ಖಜಾಂಚಿ ಪ್ರಕಾಶ ಮರಗಾಲೆ, ವಕ್ತಾರ ವಿಕಾಸ ಕಲಘಟಗಿ, ಮುಖಂಡರಾದ ಅರವಿಂದ ಪಾಟೀಲ, ವಿಜಯ ಪಾಟೀಲ, ಪ್ರಕಾಶ ಪಾಟೀಲ, ವಿನೋದ ಅಂಬೇವಾಡಿಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT