ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಬಿಲ್ ಪಾವತಿ ಗೊಂದಲ ಬೇಡ: ಮೆಸ್ಕಾಂ ಎಂಡಿ ಸ್ನೇಹಲ್‌ ಆರ್‌.

ಹೆಚ್ಚುವರಿ ಪಾವತಿಸಿದ್ದರೆ ಹೊಸ ಬಿಲ್‌ನಲ್ಲಿ ಕಡಿತ
Last Updated 8 ಮೇ 2020, 11:55 IST
ಅಕ್ಷರ ಗಾತ್ರ

ಮಂಗಳೂರು: ಲಾಕ್‌ಡೌನ್‌ ಸಂದರ್ಭದಲ್ಲಿ ವಿದ್ಯುತ್‌ ಬಿಲ್‌ ಪಾವತಿ ಕುರಿತಂತೆ ಗ್ರಾಹಕರು ಗೊಂದಲಕ್ಕೆ ಒಳಗಾಗಬಾರದು. ಎರಡು ತಿಂಗಳು ಹೆಚ್ಚಿನ ಮೊತ್ತ ಪಾವತಿಸಿದ್ದರೆ, ಹೊಸ ಬಿಲ್‌ನಲ್ಲಿ ಅದನ್ನು ಕಡಿತ ಮಾಡುವ ಮೂಲಕ ಸರಿಪಡಿಸಲಾಗುವುದು ಎಂದು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಸ್ನೇಹಲ್‌ ಆರ್‌. ಸ್ಪಷ್ಟಪಡಿಸಿದ್ದಾರೆ.

‘ಪ್ರಜಾವಾಣಿ’ ಮಂಗಳೂರು ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ‘ಪ್ರಜಾವಾಣಿ’ ಫೋನ್‌–ಇನ್‌ ಕಾರ್ಯಕ್ರಮದಲ್ಲಿ ಅವರು ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸಿದರು.

ಲಾಕ್‌ಡೌನ್‌ನಿಂದ ಮೀಟರ್‌ ರೀಡರ್‌ಗಳು ಮನೆಗೆ ಬರಲು ಸಾಧ್ಯವಾಗಿಲ್ಲ. ಹಿಂದಿನ ಬಳಕೆಯ ಸರಾಸರಿಯನ್ನು ಆಧರಿಸಿ ಎರಡು ತಿಂಗಳು ಬಿಲ್‌ ನೀಡಲಾಗಿತ್ತು. ಈ ತಿಂಗಳಿನಿಂದ ಮೀಟರ್‌ ರೀಡರ್‌ಗಳು ಮನೆಗೆ ಬಂದು, ಮೀಟರ್‌ ಮಾಪನ ಓದಿ, ಬಿಲ್‌ಗಳನ್ನು ನೀಡುತ್ತಿದ್ದಾರೆ ಎಂದು ಹೇಳಿದರು.

ಎರಡು ತಿಂಗಳ ಒಟ್ಟು ಬಳಕೆಯನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗುತ್ತದೆ. ಉದಾಹರಣೆಗೆ ಎರಡು ತಿಂಗಳು ಒಟ್ಟಾರೆ 300 ಯುನಿಟ್ ಬಳಕೆ ಆಗಿದ್ದರೆ, ಅದನ್ನು ತಲಾ 150 ಯುನಿಟ್‌ಗಳಂತೆ ಎರಡು ಬಿಲ್‌ಗಳನ್ನು ನೀಡಲಾಗುವುದು. ಅದರಲ್ಲಿ ಮೊದಲ 30 ಯುನಿಟ್‌ಗೆ ಬೇರೆ ದರ, ನಂತರ ಯುನಿಟ್‌ಗೆ ಬೇರೆ ದರವಿದ್ದು, ಅದೇ ರೀತಿ ಬಿಲ್‌ಗಳನ್ನು ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಎರಡು ತಿಂಗಳ ಬಿಲ್‌ಗಳನ್ನು ಬಹುತೇಕ ಗ್ರಾಹಕರು ಈಗಾಗಲೇ ಆನ್‌ಲೈನ್‌ ಮೂಲಕ ಪಾವತಿಸಿದ್ದಾರೆ. ಒಂದು ವೇಳೆ ಎರಡು ತಿಂಗಳ ಬಿಲ್‌ನ ಮೊತ್ತವು, ಆನ್‌ಲೈನ್‌ನಲ್ಲಿ ಪಾವತಿಸಿರುವ ಮೊತ್ತಕ್ಕಿಂತ ಕಡಿಮೆಯಾಗಿದ್ದರೆ, ಹೆಚ್ಚುವರಿ ಮೊತ್ತವನ್ನು ಈ ತಿಂಗಳ ಬಿಲ್‌ನಲ್ಲಿ ಕಡಿತ ಮಾಡಲಾಗುವುದು. ಆ ಮೂಲಕ ಗ್ರಾಹಕರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು.

ಲಾಕ್‌ಡೌನ್‌ನಿಂದಾಗಿ ಜನರು ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ. ಹೀಗಾಗಿ ಟಿವಿ, ಫ್ಯಾನ್‌, ಮೊಬೈಲ್‌ ಚಾರ್ಜಿಂಗ್ ಸೇರಿದಂತೆ ವಿದ್ಯುತ್ ಬಳಕೆಯು ಶೇ 15–20 ರಷ್ಟು ಹೆಚ್ಚಾಗಿದೆ. ಹಾಗಾಗಿ ಸಹಜವಾಗಿ ಬಿಲ್‌ನ ಮೊತ್ತ ಹೆಚ್ಚಾಗಿರುತ್ತದೆ ಎಂದರು.

ಮೆಸ್ಕಾಂ ಮುಖ್ಯ ಎಂಜಿನಿಯರ್‌ ಮಂಜಪ್ಪ, ಅಧೀಕ್ಷಕ ಎಂಜಿನಿಯರ್‌ ಶರಣಪ್ಪ, ಕಾರ್ಯನಿರ್ವಾಹಕ ಎಂಜಿನಿಯರ್ ಕೃಷ್ಣರಾಜ, ಸಾರ್ವಜನಿಕ ಸಂಪರ್ಕಾಧಿಕಾರಿ ವಸಂತ ಶೆಟ್ಟಿ ಇದ್ದರು.

ಬಳಕೆ ಮೊತ್ತ ಪಾವತಿಸಲೇಬೇಕು

ಸರ್ಕಾರವಾಗಲಿ, ಮೆಸ್ಕಾಂನಿಂದಾಗಲೇ 3 ತಿಂಗಳು ವಿದ್ಯುತ್ ಬಿಲ್‌ ಮನ್ನಾ ಮಾಡುವುದಾಗಿ ಎಲ್ಲಿಯೂ ಹೇಳಿಕೆ ನೀಡಿಲ್ಲ. ಹೀಗಾಗಿ ಗ್ರಾಹಕರು ವಿದ್ಯುತ್‌ ಬಳಕೆಯ ಮೊತ್ತವನ್ನು ಪಾವತಿಸಲೇಬೇಕು ಎಂದು ಸ್ನೇಹಲ್‌ ಆರ್‌. ಹೇಳಿದರು.

ಲಘು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ವಿದ್ಯುತ್‌ ಬಿಲ್‌ನ ನಿಗದಿತ ಮೊತ್ತ (ಫಿಕ್ಸ್ಡ್‌ ಚಾರ್ಜ್‌)ವನ್ನು ಮಾತ್ರ ಮೂರು ತಿಂಗಳಿಗೆ ಮನ್ನಾ ಮಾಡುವುದಾಗಿ ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ. ಆದರೆ, ವಿದ್ಯುತ್ ಬಿಲ್‌ ಅನ್ನು ಸಂಪೂರ್ಣ ಮನ್ನಾ ಮಾಡುವುದಾಗಿ ಹೇಳಿಲ್ಲ. ಹಾಗಾಗಿ ಎಂಎಸ್‌ಎಂಇ ಗ್ರಾಹಕರು ಮೂರು ತಿಂಗಳ ನಿಗದಿತ ಮೊತ್ತವನ್ನು ಹೊರತುಪಡಿಸಿ, ಬಳಕೆ ಮಾಡಿದ ವಿದ್ಯುತ್‌ನ ಶುಲ್ಕವನ್ನು ಪಾವತಿಸಲೇಬೇಕು ಎಂದು ತಿಳಿಸಿದರು.

ಸರ್ಕಾರದಿಂದ ₹35 ಕೋಟಿ ಬರಬೇಕು

ಎಂಎಸ್‌ಎಂಇಗಳಿಗೆ ನೀಡಿರುವ ವಿನಾಯಿತಿಯ ಪರಿಹಾರವನ್ನು ನೀಡುವಂತೆ ಈಗಾಗಲೇ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಸ್ನೇಹಲ್‌ ಆರ್‌. ತಿಳಿಸಿದರು.

ಈ ವಿನಾಯಿತಿಯಿಂದ ಮೆಸ್ಕಾಂಗೆ ಸುಮಾರು ₹ 30ರಿಂದ ₹ 35 ಕೋಟಿ ಮೊತ್ತ ಪಾವತಿ ಆಗಬೇಕಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಏನಾಗುತ್ತದೆಯೋ ತಿಳಿದಿಲ್ಲ ಎಂದರು.

ಲಾಕ್‌ಡೌನ್‌ನಿಂದಾಗಿ ಮೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟಾರೆ ಶೇ 15–20 ರಷ್ಟು ವಿದ್ಯುತ್‌ ಬಳಕೆ ಕಡಿಮೆ ಆಗಿದೆ. ಆದರೆ, ಗೃಹಬಳಕೆ ಹಾಗೂ ಕೃಷಿಗಾಗಿ ವಿದ್ಯುತ್‌ ಬಳಕೆ ಹೆಚ್ಚಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT