ಬುಧವಾರ, ನವೆಂಬರ್ 13, 2019
28 °C
ರಾಜಧಾನಿಯಲ್ಲೇ ಅತ್ಯಧಿಕ ಸಾವು

ರಾಜ್ಯದಲ್ಲಿ ತಾಯಂದಿರ ಮರಣ ಮೃದಂಗ: 4 ತಿಂಗಳಲ್ಲಿ ಕೊನೆಯುಸಿರೆಳೆದ 241 ಮಾತೆಯರು

Published:
Updated:

ಬೆಂಗಳೂರು: ವೈದ್ಯಕೀಯ ಕ್ಷೇತ್ರ ಎಷ್ಟೇ ಮುಂದುವರಿದರೂ ರಾಜ್ಯದಲ್ಲಿ ತಾಯಂದಿರ ಮರಣ ಮಾತ್ರ ನಿಲ್ಲುವ ಲಕ್ಷಣಗಳು ಗೋಚರಿಸುತ್ತಿಲ್ಲ. ರಕ್ತ ಹೀನತೆ, ರಕ್ತಸ್ರಾವ ಸೇರಿದಂತೆ ವಿವಿಧ ಕಾರಣದಿಂದ ಆರ್ಥಿಕ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ 241 ತಾಯಂದಿರು ಹೆರಿಗೆ ವೇಳೆ ಕೊನೆ
ಯುಸಿರೆಳೆದಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ತಾಯಂದಿರ ಸಾವು ತಡೆಯಲು ‘ಜನನಿ ಸುರಕ್ಷಾ’ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇನ್ನೊಂದೆಡೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ತಾಯಂದಿರ ಆರೋಗ್ಯ ಸುಧಾರಣೆಗೆ ಸಾವಿರಾರು ಕೋಟಿ ರೂಪಾಯಿಗಳನ್ನು ಪ್ರತಿ ವರ್ಷ ಖರ್ಚು ಮಾಡುತ್ತಿದೆ. ಅಷ್ಟಾಗಿಯೂ ಸಾವಿನ ಪ್ರಮಾಣ ಮಾತ್ರ ರಾಜ್ಯದಲ್ಲಿ ನಿಯಂತ್ರಣಕ್ಕೆ ಬರದಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. 

ಮೂರು ವರ್ಷದಲ್ಲಿ ಸರ್ಕಾರ ₹241 ಕೋಟಿ ತಾಯಂದಿರ ಆರೋಗ್ಯಕ್ಕೆ ಖರ್ಚು ಮಾಡಿದೆ. ಇದೇ ವೇಳೆ 1,637 ತಾಯಂದಿರು ಸಾವನ್ನಪ್ಪಿದ್ದಾರೆ. ಇದರಲ್ಲಿ ಕಳೆದ ವರ್ಷ 657 ಮಂದಿ ಹೆರಿಗೆ ವೇಳೆ ನಿಧನರಾಗಿದ್ದು, ಈ ವರ್ಷ ಕೂಡಾ ಸಾವಿನ ಪ್ರಮಾಣ ಏರಿಕೆಯತ್ತ ಮುಖಮಾಡಿದೆ.

ರಾಜಧಾನಿಯಲ್ಲೇ ಅಧಿಕ ಸಾವು: ಹಲವು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಹೊಂದಿರುವ ರಾಜಧಾನಿ ಬೆಂಗಳೂರಿನಲ್ಲಿಯೇ ಅಧಿಕ ಸಾವು ಸಂಭವಿಸುತ್ತಿದ್ದು, ಈ ವರ್ಷ ನಾಲ್ಕು ತಿಂಗಳಲ್ಲಿ 31 ಮಹಿಳೆಯರು ಅಸು ನೀಗಿದ್ದಾರೆ. ಅದೇ ರೀತಿ, ಕಲಬುರ್ಗಿ (28), ರಾಯಚೂರು (21), ಬಳ್ಳಾರಿ (13), ಬೆಳಗಾವಿ (12), ದಾವಣಗೆರೆ (12), ತುಮಕೂರು (11) ಜಿಲ್ಲೆಯಲ್ಲಿ ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ತಾಯಂದಿರು ಮೃತಪಟ್ಟಿರುವುದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಕಿ ಅಂಶಗಳಲ್ಲಿಯೇ ಬಹಿರಂಗವಾಗಿದೆ. 

‘ತಾಯಂದಿರ ಮರಣ ಪ್ರಮಾಣ ಇಳಿಕೆ ಆಗುತ್ತಿದೆ. 2000ನೇ ಇಸವಿಯಲ್ಲಿ ಲಕ್ಷ ಹೆರಿಗೆಯಲ್ಲಿ 233 ಮಂದಿ ಸಾವನ್ನಪ್ಪುತ್ತಿದ್ದರು. ಇದೀಗ 70ಕ್ಕೆ ಇಳಿಕೆ ಮಾಡಲಾಗಿದೆ. ಹೆರಿಗೆಗೆ ಆಸ್ಪತ್ರೆಗೆ ಬಂದಲ್ಲಿ ಅಪಾಯ ಇರುವುದಿಲ್ಲ’ ಎಂದು ಇಲಾಖೆಯ ಜಂಟಿನಿರ್ದೇಶಕ  ಡಾ. ರಾಜ್‌ಕುಮಾರ್  ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಗರ್ಭಾವಸ್ಥೆ ಹಾಗೂ ಬಾಣಂತಿ ಅವಧಿಯಲ್ಲಿ ತಲಾ ಆರು ತಿಂಗಳು ಉಚಿತವಾಗಿ ಐಎಫ್‌ಎ ಮತ್ತು ಕ್ಯಾಲ್ಸಿಯಂ ಮಾತ್ರೆ ಉಚಿತವಾಗಿ ನೀಡಲಾಗುತ್ತಿದೆ. ಅದೇ ರೀತಿ, ಲಕ್ಷ್ಯ ಹಾಗೂ ಪ್ರಧಾನ ಮಂತ್ರಿ ಸುರಕ್ಷಿತ್‌ ಮಾತೃತ್ವ ಅಭಿಯಾನದಡಿ ಅಗತ್ಯ ತಪಾಸಣೆಯ ಜತೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಜನನಿ ಸುರಕ್ಷಾ ಯೋಜನೆಯಡಿ ₹500ನಿಂದ ₹700ವರೆಗೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ’ ಎಂದರು.

ತಾಯಂದಿರ ಸಾವಿಗೆ ಪ್ರಮುಖ ಕಾರಣಗಳು

–ರಕ್ತ ಹಿನತೆ, ರಕ್ತಸ್ರಾವ

–ಅಪೌಷ್ಟಿಕತೆ

–ಬಾಲ್ಯವಿವಾಹ

–ಸಕಾಲದಲ್ಲಿ ಪರೀಕ್ಷೆ ಮಾಡಿಸದಿರುವುದು

–ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಕುಂಟಿತ

–ಮುಂಜಾಗ್ರತೆ ಕ್ರಮ ಕೈಗೊಳ್ಳದಿರುವುದು

–ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೌಲಭ್ಯ ಕೊರತೆ

ಪ್ರತಿಕ್ರಿಯಿಸಿ (+)