ನರೇಗಾದಲ್ಲಿ ಹಸನಾದ ಕಾನು, ಶಿರಸಿ ತಾಲ್ಲೂಕು ಬನವಾಸಿ ಪಂಚಾಯ್ತಿಯ ಯೋಜನೆ

7
ಒಳ್ಳೆ ಸುದ್ದಿ

ನರೇಗಾದಲ್ಲಿ ಹಸನಾದ ಕಾನು, ಶಿರಸಿ ತಾಲ್ಲೂಕು ಬನವಾಸಿ ಪಂಚಾಯ್ತಿಯ ಯೋಜನೆ

Published:
Updated:
Deccan Herald

ಶಿರಸಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಮೈತುಂಬ ಜಲಪಾತ್ರೆ (ಇಂಗುಗುಂಡಿ) ಗಳನ್ನು ಹೊತ್ತ ಕಾನು (ಅರಣ್ಯ) ಊರಿನ ಜನರ ಬದುಕನ್ನು ಹಸನಾಗಿಸಿದೆ.

ಅರೆ ಬಯಲು ಸೀಮೆಯ ಹವಾಮಾನ ಹೊಂದಿರುವತಾಲ್ಲೂಕಿನಬನವಾಸಿ ಸುತ್ತಮುತ್ತಲಿನ ಹಳ್ಳಿಗಳು ಪ್ರತಿವರ್ಷ ಬೇಸಿಗೆಯಲ್ಲಿ ಜಲ ಸಂಕಟ ಅನುಭವಿಸುತ್ತವೆ. ಕುಡಿಯುವ ನೀರಿಗೂ ಕಷ್ಟಪಡುವ ಹಳ್ಳಿಗರು, ಗದ್ದೆಯಲ್ಲಿ ಬಾಡುವ ಬೆಳೆಗಳನ್ನು ಕಂಡು ಅಸಹಾಯಕರಾಗುತ್ತಾರೆ. ಅಂತರ್ಜಲ ಮಟ್ಟ ಕುಸಿದ ಪರಿಣಾಮ, ಕೊರೆಯುವ ಬೋರ್‌ವೆಲ್‌ಗಳಲ್ಲೂ ನೀರು ಸಿಗುವುದಿಲ್ಲ. ಪ್ರತಿ ಬೇಸಿಗೆಯಲ್ಲಿ ನೂರಾರು ಹೊಸ ಬೋರ್‌ವೆಲ್‌ಗಳು ವಿಫಲವಾಗುವುದು ಇಲ್ಲಿ ಮಾಮೂಲು.

ಇದನ್ನು ಗಮನಿಸಿದ ಬನವಾಸಿ ಗ್ರಾಮ ಪಂಚಾಯ್ತಿ, ಪ್ರಾಯೋಗಿಕವಾಗಿ ಕಪಗೇರಿಯಲ್ಲಿ ಕಾನು ಅರಣ್ಯದಲ್ಲಿ ಜಲ ಸಂರಕ್ಷಣೆಗೆ ಮುಂದಾಯಿತು. ‘ಕಾನು ರಕ್ಷಣೆಯ ಜತೆಗೆ, ಊರಿನ ಅಂತರ್ಜಲ ಮಟ್ಟ ಹೆಚ್ಚಿಸುವ ಕನಸಿನೊಂದಿಗೆ 2017ರಲ್ಲಿ ನರೇಗಾ ಯೋಜನೆಯಲ್ಲಿ ಕಾಮಗಾರಿ ಪ್ರಾರಂಭಿಸಿದೆವು. 6.5 ಹೆಕ್ಟೇರ್‌ ಅರಣ್ಯದಲ್ಲಿ ರಕ್ಷಣಾ ಕಂದಕ, ಇಂಗುಗುಂಡಿ ನಿರ್ಮಿಸಿ, ಹೊನ್ನೆ, ಮುರುಗಲು, ನಂದಿ, ಮಾವು ಮೊದಲಾದ 500ಕ್ಕೂ ಹೆಚ್ಚು ಸ್ಥಾನೀಯ ಜಾತಿಯ ಸಸಿಗಳನ್ನು ನಾಟಿ ಮಾಡಿದೆವು. ಒಂದೂವರೆ ವರ್ಷದಲ್ಲಿಯೇ ಜಲ ಸಂರಕ್ಷಣೆಯ ಫಲಿತಾಂಶ ಪಡೆದೆವು’ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಗಣೇಶ ಸಣ್ಣಲಿಂಗಣ್ಣನವರ್.

‘ಕಪಗೇರಿಯಲ್ಲಿರುವ ತೆರೆದ ಬಾವಿಗಳ ನೀರಿನ ಮಟ್ಟದಲ್ಲಿ ಏರಿಕೆಯಾಗಿರುವುದು ಬೇಸಿಗೆಯಲ್ಲಿ ಅರಿವಿಗೆ ಬಂತು. ಈ ಪ್ರಯೋಗದಿಂದ ಯಶಸ್ಸು ಕಂಡಿರುವ ನಾವು, ಈ ವರ್ಷ ಕಡಗೋಡ ಅರಣ್ಯದಲ್ಲಿ ಇದೇ ಯೋಜನೆ ಜಾರಿಗೆ ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದು ತಿಳಿಸಿದರು.

‘ಬೇಸಿಗೆಯಲ್ಲಿ ಬಡಕಲಾಗುತ್ತಿದ್ದ ಕಾಡಿನ ಮರಗಳು ಈ ಬಾರಿ ಹಸಿರಾಗಿಯೇ ಇದ್ದವು. ಕಾಡುಪ್ರಾಣಿಗಳಿಗೆ ಕಾಡಿನ ಕೆರೆಗಳ ನೀರು ಸಿಕ್ಕಿದ್ದರಿಂದ, ಕುಡಿಯುವ ನೀರನ್ನು ಅರಸಿ ಹಳ್ಳಿಗೆ ಬರುತ್ತಿದ್ದ ಅವುಗಳ ಉಪಟಳವೂ ಕಮ್ಮಿ ಆಯಿತು. ಒಂದು ಇಂಗುಗುಂಡಿಗೆ ₹1,200 ವೆಚ್ಚ ಮಾಡಲಾಗಿದೆ, ಒಟ್ಟು 247 ಇಂಗುಗುಂಡಿಗಳನ್ನು ನಿರ್ಮಿಸಲಾಗಿದೆ’ ಎಂದರು.

ಕಾನು ಅಭಿವೃದ್ಧಿಗೆ 2017–18ರಲ್ಲಿ ವೆಚ್ಚ ಮಾಡಿರುವ ಹಣ ₹ 2.98 ಲಕ್ಷ. 2018–19ರಲ್ಲಿ ಮಾಡಿರುವ ಖರ್ಚು ₹ 63,900. ಒಟ್ಟು ಬಳಕೆಯಾದ ಮಾನವ ದಿನಗಳು 1,202.

* ನರೇಗಾ ಯೋಜನೆಯಲ್ಲಿ ಕಾನು ಅರಣ್ಯ ಅಭಿವೃದ್ಧಿಪಡಿಸಿದ್ದು, ಅತ್ಯಂತ ಅಪರೂಪವಾಗಿದೆ. ಈ ಕಾರ್ಯ ರಾಜ್ಯಕ್ಕೇ ಮಾದರಿಯಾಗಿದ್ದು, ಎಲ್ಲೆಡೆ ಇದನ್ನು ಅನುಷ್ಠಾನಗೊಳಿಸಬೇಕು

–ಅನಂತ ಅಶೀಸರ,  ಪರಿಸರವಾದಿ 

 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !