ಅಮೂಲ್ಯ ಮರಗಳ ಸಂರಕ್ಷಣೆಗೆ ಮೈಕ್ರೊಚಿಪ್ ತಂತ್ರ

7

ಅಮೂಲ್ಯ ಮರಗಳ ಸಂರಕ್ಷಣೆಗೆ ಮೈಕ್ರೊಚಿಪ್ ತಂತ್ರ

Published:
Updated:

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಮರ ಮಾಫಿಯಾ ಎಗ್ಗಿಲ್ಲದಂತೆ ಬೆಳೆದಿದೆ. ಕಳ್ಳಕಾಕರ, ದಂಧೆಕೋರರ ದುರಾಸೆಗೆ ಎಷ್ಟೋ ಮರಗಳು ಹೇಳ ಹೆಸರಿಲ್ಲದಂತೆ ನಾಶವಾಗಿವೆ. ಇದನ್ನು ತಪ್ಪಿಸಿ ಮರಗಳನ್ನು ಉಳಿಸಲು, ನಾಡನ್ನು ಹಸಿರಾಗಿಸಲು ಕರ್ನಾಟಕ, ಕೇರಳ, ಆಂಧ್ರಪ್ರದೇಶದ ರೈತರು ಮತ್ತು ಅರಣ್ಯಾಧಿಕಾರಿಗಳು ಹೊಸ ಚಿಂತನೆ ಮಾಡಿದ್ದಾರೆ.

ಬೆಂಗಳೂರಿನ ‘ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ’ (ಇನ್‌ಸ್ಟಿಟ್ಯೂಟ್ ಆಫ್ ವುಡ್ ಸೈನ್ಸ್ ಆಂಡ್ ಟೆಕ್ನಾಲಜಿ) ವಿಜ್ಞಾನಿಗಳು ಮರಗಳ ಪ್ರಮುಖ ಸಂತತಿಗಳಾದ ಶ್ರೀಗಂಧ, ರಕ್ತ ಚಂದನ, ತೇಗ, ಮಹಾಗನಿ ಮರಗಳ ಉಳಿಸುವಿಕೆಗೆ ಪಣತೊಟ್ಟಿದ್ದು, ಮೈಕ್ರೊಚಿಪ್ ಅಳವಡಿಸಲು ಮುಂದಾಗಿದ್ದಾರೆ.

ಈ ಸಾಧನ ಕಳ್ಳಸಾಗಾಣೆ ಮಾಡುವ ಕಿಡಿಗೇಡಿಗಳಿಂದ ಮರಗಳನ್ನು ರಕ್ಷಿಸಲಿದ್ದು, ಇದರಿಂದ ಹೊರಹೊಮ್ಮುವ ತರಂಗಗಳು ಮಾಲೀಕರನ್ನು, ಸಂರಕ್ಷಕರನ್ನು ತಕ್ಷಣವೇ ಎಚ್ಚರಿಸಲಿ ಎನ್ನುತ್ತಾರೆ ವಿಜ್ಞಾನಿಗಳು.

‘ಮಲ್ಲೇಶ್ವರದಲ್ಲಿರುವ ಮರ ವಿಜ್ಞಾನ ಸಂಸ್ಥೆಯ ಕ್ಯಾಂಪಸ್‌, ನೆಲಮಂಗಲ ಸಮೀಪ ಇರುವ ಕೃಷಿ ಅರಣ್ಯ ಫಾರಂನಲ್ಲಿ ಕೈಗೊಂಡ ಪ್ರಾಯೋಗಿಕ ಅಧ್ಯಯನಕ್ಕೆ ಸಕಾರಾತ್ಮಕ ಪ್ರತಿಕ್ರಿಯೆಗಳು ಬಂದಿವೆ. ಇದೇ ಮಾದರಿಯನ್ನು  ಕರ್ನಾಟಕ, ಕೇರಳ, ಆಂಧ್ರಪ್ರದೇಶದ ಅರಣ್ಯಗಳು, ಕೃಷಿಭೂಮಿಗಳಲ್ಲಿರುವ ಮರಗಳಿಗೂ ವಿಸ್ತರಿಸುವ ತಯಾರಿ ಆರಂಭವಾಗಿದೆ. ಅರಣ್ಯಗಳಲ್ಲಿರುವ ಅಮೂಲ್ಯ ಮರಗಳಲ್ಲಿ ಸಂವೇದನಾ ಸಾಮರ್ಥ್ಯ (ಸೆನ್ಸಾರ್) ಇರುವ ಮೈಕ್ರೊಚಿಪ್ ಅಳವಡಿಸಲಾಗುತ್ತದೆ. ಇದು ಕಳ್ಳರ, ದಂಧಕೋರರ ಚಟುವಟಿಕೆಗಳ ಬಗ್ಗೆ ಸಂದೇಶ ರವಾನಿಸುತ್ತದೆ’ ಎಂದು ಐಡಬ್ಲ್ಯೂಎಸ್‌ಟಿ ನಿರ್ದೇಶಕ ಸುರೇಂದ್ರ ಕುಮಾರ್ ಮಾಹಿತಿ ನೀಡಿದರು.

‘ಕಳೆದ ವರ್ಷ ಹಿಟಾಚಿ ಇಂಡಿಯಾದ ಸಹಯೋಗದಲ್ಲಿ ಐಡಬ್ಲ್ಯೂಎಸ್‌ಟಿ ಈ ಚಿಪ್‌ ಹಾಗೂ ಇದಕ್ಕೆ ಸಂಬಂಧಿಸಿದ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿತ್ತು. ಮೊದಲು ಪ್ರಾಯೋಗಿಕವಾಗಿ 50 ಶ್ರೀಗಂಧದ ಮರಗಳಿಗೆ ಚಿಪ್ ಅಳವಡಿಸಲಾಗಿತ್ತು. ನೆಲಮಂಗಲ ಹತ್ತಿರದ ತೋಟದಲ್ಲಿ ಸಣ್ಣಪುಟ್ಟ ಮಾರ್ಪಾಡುಗಳೊಂದಿಗೆ ಆರು ತಿಂಗಳವರೆಗೆ ಪ್ರಾಯೋಗಿಕ ಅಧ್ಯಯನ ನಡೆಸಲಾಯಿತು. ಇದು ಈ ಚಿಪ್‌ನ ಗಾತ್ರವನ್ನು ಕಡಿಮೆಗೊಳಿಸಲು ನೆರವಾಯಿತು. ಕಳ್ಳರು ಮರ ಕತ್ತರಿಸಲು ಬಂದಾಗ ಈ ಸಾಧನ ಎಚ್ಚರಿಸುತ್ತದೆ. ಕೆಲ ಸಮಯದ ಸಂಶೋಧನೆಗಳ ಬಳಿಕ ಸಂದೇಶಗಳನ್ನು ರವಾನಿಸಲು ಕೋಡ್‌ ರೂಪಿಸಿದೆವು. ನಂತರ ಬ್ಯಾಟರಿಯ ಕಾಲಾವಧಿಯನ್ನು 8 ತಿಂಗಳಿಂದ 13–14 ತಿಂಗಳುಗಳಿಗೆ ಏರಿಸಿದೆವು’ ಎಂದು ಈ ಯೋಜನೆಯಲ್ಲಿ ಕಾರ್ಯನಿರ್ವಹಿಸಿದ ಹಿರಿಯ ವಿಜ್ಞಾನಿಯೊಬ್ಬರು ವಿವರಿಸಿದರು.

ಹೀಗೆ ಎಲ್ಲಾ ರೀತಿಯಲ್ಲೂ ಸುಧಾರಣೆ ಮಾಡಿದ ಚಿಪ್‌ ಅನ್ನು ಕೇರಳದ ಇಡುಕ್ಕಿ ಅರಣ್ಯ ವಲಯದಲ್ಲಿನ ಮರಯೂರ್‌ನಲ್ಲಿ ಅಳವಡಿಸಲು ನಿರ್ಧರಿಸಲಾಯಿತು. ಇಲ್ಲಿ ಶ್ರೀಗಂಧದ ಮರಗಳು ಸೇರಿದಂತೆ ಬೇರೆ ಸಂತತಿಯ ಮರಗಳು ಸಮೃದ್ಧವಾಗಿವೆ. ರಾಜ್ಯದ ಹೊನ್ನಾವರ, ಯಲ್ಲಾಪುರ ವಲಯದಲ್ಲೂ ಮರಗಳಿಗೆ ಚಿಪ್ ಅಳವಡಿಸುವ ಯೋಜನೆ ಇದೆ. ನಮ್ಮ ಈ ಪ್ರಸ್ತಾವವನ್ನು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಿಸಿಎಫ್) ಒಪ್ಪಿಕೊಂಡಿದ್ದಾರೆ. ಇದನ್ನು ಮರಗಳಿಗೆ ಅಳವಡಿಸಲು ಅಗತ್ಯ ಸಮಯಕ್ಕೆ ಕಾಯುತ್ತಿದ್ದೇವೆ ಎಂದು ವಿಜ್ಞಾನಿಯೊಬ್ಬರು ತಿಳಿಸಿದರು.

ಕರ್ನಾಟಕ–ಆಂಧ್ರಪ್ರದೇಶದ ಗಡಿಭಾಗದಲ್ಲಿರುವ ಚಿಕ್ಕಬಳ್ಳಾಪುರ, ಕೋಲಾರ, ಕಡಪ, ಕರ್ನೂಲ್‌ಗಳಲ್ಲಿ ಹೆಚ್ಚು ರಕ್ತಚಂದನದ ಮರಗಳಿವೆ. ಇದರ ಮೇಲೆ ಅಂತರರಾಷ್ಟ್ರೀಯ ಮಟ್ಟದ ಸಾಗಾಣೆದಾರರು ‌ದೃಷ್ಟಿ ನೆಟ್ಟಿದ್ದಾರೆ. ಈ ಪ್ರದೇಶದ ಇಲ್ಲಿನ ಅರಣ್ಯ, ತೋಟಗಳ ಮರಗಳಲ್ಲಿ ಚಿಪ್‌ ಅಳವಡಿಸಿದರೆ ಮರಗಳನ್ನು ಉಳಿಸಿಕೊಳ್ಳಲು ನೆರವಾಗಲಿದೆ ಎಂದು ಸ್ಪಷ್ಟಪಡಿಸಿದರು.

ಈ ಚಿಪ್ ಕೇವಲ 1.5 ಇಂಚು ಸುತ್ತಳತೆ ಹೊಂದಿದೆ. ಮರಗಳಿಗೆ ಅಳವಡಿಸುವುದು ಸುಲಭ. ಯಾರಾದರೂ ಮರಗಳನ್ನು ಮುಟ್ಟಿದರೆ ಮರಕ್ಕೆ ಅಳವಡಿಸಿರುವ ಚಿಪ್‌ನಲ್ಲಿರುವ ವೇಗೋತ್ಕರ್ಷ ಮಾಪಕ (accelerometer) ಮತ್ತು ರೇಡಿಯೊ ತರಂಗಾತರಗಳು ಸಹಾಯಕ, ಅರಣ್ಯಾಧಿಕಾರಿ, ತೋಟದ ಮಾಲೀಕರಿಗೆ ಸಂದೇಶ ಕಳುಹಿಸುತ್ತದೆ. ಅಲ್ಲದೇ ಭದ್ರತಾ ಸಿಬ್ಬಂದಿಯ ಮೊಬೈಲ್‌ಗಳಿಗೂ ಎಚ್ಚರಿಕೆಯ ಸಂದೇಶ ಹೋಗುತ್ತದೆ. ಇದು ನೀರು ಮತ್ತು ದೂಳು ನಿರೋಧಕವಾಗಿದ್ದು, ಎಲ್ಲಾ ಹವಾಮಾನಕ್ಕೂ ಒಗ್ಗುತ್ತದೆ ಎಂದು ಹೇಳಿದರು.

(ಅನುವಾದ: ವನಿತಾ ವೈ.)

ಬರಹ ಇಷ್ಟವಾಯಿತೆ?

 • 9

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !