ಬುಧವಾರ, ಫೆಬ್ರವರಿ 19, 2020
30 °C
ಎಸ್. ವರಲಕ್ಷ್ಮಿ ವಶಕ್ಕೆ * ಪ್ರತಿಭಟನೆ ಅಂತ್ಯ: ಇದೇ 13ರಂದು ಸಭೆ

ನಿಷೇಧಾಜ್ಞೆ ನಡುವೆಯೂ ಹೋರಾಟ: ರೈಲು ನಿಲ್ದಾಣದಲ್ಲೇ ಮಹಿಳೆಯರಿಗೆ ದಿಗ್ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ವೇತನ ಪರಿಷ್ಕರಣೆ ಮಾಡಬೇಕು. ಬಿಸಿಯೂಟ ತಯಾರಿಸುವ ಜವಾಬ್ದಾರಿಯನ್ನು ಖಾಸಗಿಯವರಿಗೆ ನೀಡಬಾರದು’ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲು ಸೋಮವಾರ ನಗರಕ್ಕೆ ಬಂದ ಬಿಸಿಯೂಟ ಕಾರ್ಯಕರ್ತೆಯರಿಗೆ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲೇ ಪೊಲೀಸರು ದಿಗ್ಬಂಧನ ವಿಧಿಸಿದರು.

ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ರ‍್ಯಾಲಿ ನಡೆಸಲು ಹಾಗೂ ಉದ್ಯಾನದಲ್ಲಿ ಪ್ರತಿಭಟನಾ ಸಭೆ ನಡೆಸಲು ಅನುಮತಿ ನಿರಾಕರಿಸಿದ್ದ ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್, ನಗರದಾದ್ಯಂತ 20 ದಿನಗಳವರೆಗೆ ನಿಷೇಧಾಜ್ಞೆ ಹೊರಡಿಸಿದ್ದಾರೆ. ಅದರ ನಡುವೆಯೇ 2 ಸಾವಿರಕ್ಕೂ ಹೆಚ್ಚು ಮಹಿಳೆಯರು ನಗರಕ್ಕೆ ಬಂದಿದ್ದರು.

ರೈಲು ನಿಲ್ದಾಣ ಆವರಣದಲ್ಲೇ ಬ್ಯಾರಿಕೇಡ್‌ಗಳನ್ನು ಹಾಕಿ ಅಡ್ಡಗಟ್ಟಿದ್ದ
ಪೊಲೀಸರು, ಉದ್ಯಾನದತ್ತ ಹೋಗಲು ಬಿಡಲಿಲ್ಲ. ಸುತ್ತಲೂ ಅಳವಡಿಸಿದ್ದ ಬ್ಯಾರಿಕೇಡ್‌ ಮಧ್ಯದಲ್ಲೇ ಕುಳಿತು ಮಹಿಳೆಯರು ಪ್ರತಿಭಟನೆ ಮುಂದುವರಿಸಿದರು. ಶಿಕ್ಷಣ ಸಚಿವರು ಸ್ಥಳಕ್ಕೆ ಬರುವರೆಗೂ ಇಲ್ಲಿಂದ ಹೋಗುವುದಿಲ್ಲ’ ಎಂದು ಅವರು ಪಟ್ಟು ಹಿಡಿದರು. ಮಕ್ಕಳ ಜತೆಗೇ ಪ್ರತಿಭಟನೆಗೆ ಬಂದಿದ್ದ ಮಹಿಳೆಯರ ಪೈಕಿ ನಾಲ್ವರು ಅಸ್ವಸ್ಥಗೊಂಡರು. 

ಬೆಳಿಗ್ಗೆ ರೈಲು ನಿಲ್ದಾಣದತ್ತ ಹೊರಡಲು ಸಿದ್ಧರಾಗಿದ್ದ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಗೌರವ ಅಧ್ಯಕ್ಷೆ ಎಸ್.ವರಲಕ್ಷ್ಮಿ ಅವರನ್ನು ಮಹಾಲಕ್ಷ್ಮಿ ಲೇಔಟ್‌ ಬಳಿ ಇರುವ ಸಿಪಿಎಂ ಕಚೇರಿಯಲ್ಲೇ ಪೊಲೀಸರು ವಶಕ್ಕೆ ಪಡೆದರು. ಹೊರ ಜಿಲ್ಲೆಗಳಿಂದ ಬೆಂಗಳೂರಿನತ್ತ ಬರುತ್ತಿದ್ದ 100ಕ್ಕೂ ಹೆಚ್ಚು ಮಹಿಳೆಯರನ್ನು ಪೀಣ್ಯ ಹಾಗೂ 8ನೇ ಮೈಲಿ ಬಳಿಯೇ ವಶಕ್ಕೆ ಪಡೆದ ಪೊಲೀಸರು, ಸಂಜೆ ಬಿಡುಗಡೆ ಮಾಡಿದರು.    

ಪ್ರಧಾನ ಕಾರ್ಯದರ್ಶಿ ಭೇಟಿ: ಸ್ಥಳಕ್ಕೆ ಭೇಟಿ ನೀಡಿದ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ‘ಶಿಕ್ಷಣ ಸಚಿವರಿಗೆ ಕಾರ್ಮಿಕ ಇಲಾಖೆ ಜವಾಬ್ದಾರಿಯೂ ಇದ್ದು, ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದಾರೆ. ಇಲ್ಲಿಗೆ ಬರಲು ಆಗಿಲ್ಲ. ನನ್ನನ್ನು ಕಳುಹಿಸಿದ್ದಾರೆ’ ಎಂದರು.

‘ಫೆ.13ರಂದು ಶಿಕ್ಷಣ ಸಚಿವರು ಹಾಗೂ ಮುಖಂಡರ ಸಭೆ ಆಯೋಜಿಸುತ್ತೇನೆ. ಪ್ರತಿಭಟನೆ ಕೈಬಿಡಿ’ ಎಂದು ಕೋರಿ ಲಿಖಿತ ಪತ್ರ ನೀಡಿದರು. ಅದಕ್ಕೆ ಒಪ್ಪಿ ಮಹಿಳೆಯರು ಪ್ರತಿಭಟನೆ ಕೈಬಿಟ್ಟರು.

ಭದ್ರತೆಗೆ 1,100 ಪೊಲೀಸರು: ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಕುಳಿತಿದ್ದ ಮಹಿಳೆಯರ ಸುತ್ತಲೂ ಭದ್ರತೆಗಾಗಿ 1,100 ಪೊಲೀಸರನ್ನು ನಿಯೋಜಿಸಲಾಗಿತ್ತು.

‘6 ಎಸಿಪಿಗಳು, 14 ಇನ್‌ಸ್ಪೆಕ್ಟರ್, 41 ಪಿಎಸ್‌ಐ ಹಾಗೂ 600 ಮಹಿಳಾ ಸಿಬ್ಬಂದಿ ಭದ್ರತೆ ಕೈಗೊಂಡಿದ್ದರು. ಕೆಎಸ್‌ಆರ್‌ಪಿಯ 8 ತುಕಡಿ ಹಾಗೂ ಸಿಎಆರ್‌ 4 ತುಕಡಿಗಳೂ ಸ್ಥಳದಲ್ಲಿದ್ದವು’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಬಿ. ರಮೇಶ್ ಹೇಳಿದರು.

‘ಭೂಮಿ ಇವರಪ್ಪನ ಮನೆ ಆಸ್ತಿನಾ’

ಚನ್ನಪಟ್ಟಣ: ಪ್ರತಿಭಟನೆ ನಡೆಸದಂತೆ ನಿಷೇಧಾಜ್ಞೆ ಜಾರಿ ಮಾಡಿರುವ ಕಮಿಷನರ್ ಕ್ರಮ ಖಂಡಿಸಿರುವ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ, ‘ಪ್ರತಿಭಟನೆ ಮಾಡಬೇಡಿ ಎಂದು ಹೇಳಲು ಭೂಮಿ ಇವರಪ್ಪನ ಮನೆ ಆಸ್ತಿನಾ’ ಎಂದು ಕಿಡಿಕಾರಿದರು.

‘ಕಮಿಷನರ್ ನಡೆ ಸರಿಯಲ್ಲ. ಅಧಿಕಾರಿಗಳ ಉದ್ಧಟತನವನ್ನು ಸರಿಪಡಿಸಿಕೊಳ್ಳಲು ಗೃಹ ಸಚಿವರು ಸೂಚಿಸಬೇಕು. ಇಲ್ಲದಿದ್ದರೆ ಸರ್ಕಾರ ದೂಳಿಪಟ ಆಗಬೇಕಾಗುತ್ತದೆ’ ಎಂದು ಎಚ್ಚರಿಸಿದರು.

***

ಶಾಂತಿಯುತ ಪ್ರತಿಭಟನೆಗೆ ಕಮಿಷನರ್ ಅವರು ನಿಷೇಧಾಜ್ಞೆ ಹೇರಿದ್ದಾರೆ. ಇದನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುತ್ತೇವೆ

- ಮಾಲಿನಿ ಮೇಸ್ತ, ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು