ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಯೂಟ:ಅಧಿಕಾರಿಗಳಿಗಿಲ್ಲ ವೇತನ

ಮಧ್ಯಾಹ್ನದ ಉಪಾಹಾರ ಯೋಜನೆ * 6 ತಿಂಗಳಿಂದ ತಪ್ಪದ ಪರದಾಟ
Last Updated 2 ಡಿಸೆಂಬರ್ 2019, 19:35 IST
ಅಕ್ಷರ ಗಾತ್ರ

ಬೆಂಗಳೂರು: ಮಧ್ಯಾಹ್ನದ ಉಪಾಹಾರ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಆರು ತಿಂಗಳುಗಳಿಂದ ವೇತನ ಪಾವತಿಯಾಗಿಲ್ಲ. ವಿದ್ಯಾರ್ಥಿಗಳಿಗೆ ಬಿಸಿಯೂಟ ತಲುಪಿಸುವ ಹೊಣೆ ಹೊತ್ತ ಅಧಿಕಾರಿಗಳೇ ತಮ್ಮ ಊಟಕ್ಕೆ ಅನ್ಯರ ಮುಂದೆ ಕೈಚಾಚಬೇಕಾದ ಸ್ಥಿತಿ ನಿರ್ಮಾಣವಾಗಿದೆ.

‘ಮೇ ತಿಂಗಳಿನಿಂದ ವೇತನವನ್ನೇ ನೋಡಿಲ್ಲ. ಶಾಲಾ ವಿದ್ಯಾರ್ಥಿಗಳ ಹೊಟ್ಟೆ ತಣ್ಣಗಿಡಲು ಶ್ರಮಿಸುವ ನಾವೇ ಒಪ್ಪೊತ್ತಿನ ಊಟಕ್ಕೂ ಪರದಾಡಬೇಕಾಗಿದೆ. ದೈನಂದಿನ ಖರ್ಚಿಗೂ ಹಣವಿಲ್ಲ. ಶಾಲಾ ಭೇಟಿಗಾಗಿ ತಿಂಗಳಿಗೆ ₹ 5 ಸಾವಿರ ಭತ್ಯೆ ನೀಡಲಾಗುತ್ತಿತ್ತು. ಮಾರ್ಚ್‌ನಿಂದ ಅದನ್ನೂ ನೀಡಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಸಹಾಯಕ ನಿರ್ದೇಶಕರೊಬ್ಬರು ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.

‘ಜಿಲ್ಲಾ ಮಟ್ಟದಲ್ಲಿ ಶಿಕ್ಷಣಾಧಿಕಾರಿಗಳು, ಪ್ರಥಮ ದರ್ಜೆ ಸಹಾಯಕರು ಹಾಗೂ ತಾಲ್ಲೂಕು ಮಟ್ಟದಲ್ಲಿ ಸಹಾಯಕ ನಿರ್ದೇಶಕರು ಮತ್ತು ಪ್ರಥಮ ದರ್ಜೆ ಸಹಾಯಕರು ಕಾರ್ಯನಿರ್ವಹಿಸುತ್ತಾರೆ. ಅವರ ವೇತನ ಅನುದಾನದ ಎರಡನೇ ತ್ರೈಮಾಸಿಕ ಕಂತು ಇನ್ನೂ ಬಿಡುಗಡೆಯಾಗಿಲ್ಲ’ ಎಂದು ಅವರು ತಿಳಿಸಿದರು.

‘ಅಡುಗೆ ಸಿಬ್ಬಂದಿಯ ಬ್ಯಾಂಕ್‌ ಖಾತೆ ವಿವರ ಸಂಗ್ರಹಿಸಿ ಖಜಾನೆ– 2 ವ್ಯವಸ್ಥೆಗೆ ಅಳವಡಿಸಲು ಸೆಪ್ಟೆಂಬರ್‌ ತಿಂಗಳ ಗಡುವು ನೀಡಲಾಗಿತ್ತು. ಕೆಲವರು ಇದನ್ನು ಪಾಲಿಸಿಲ್ಲ. ಆದರೆ, ಅನೇಕ ತಾಲ್ಲೂಕುಗಳಲ್ಲಿ ಗಡುವಿಗೆ ಮುನ್ನವೇ ಈ ಕೆಲಸ ಮುಗಿದಿದೆ. ಯಾರೊ ಕೆಲವರು ಮಾಡಿರುವ ತಪ್ಪಿಗೆ ಎಲ್ಲ ಅಧಿಕಾರಿಗಳಿಗೆ ಶಿಕ್ಷೆ ತರವೇ’ ಎಂದುಸಹಾಯಕ ನಿರ್ದೇಶಕರೊಬ್ಬರು ಪ್ರಶ್ನಿಸಿದರು.

‘ಕೆಲಸ ಮಾಡದ ಕಾರಣ ವೇತನಕ್ಕೆ ತಡೆ‌’

‘ಅಡುಗೆ ಸಿಬ್ಬಂದಿಗೆಖಜಾನೆ– 2 ವ್ಯವಸ್ಥೆಯ ಮೂಲಕ ಬ್ಯಾಂಕ್ ಖಾತೆಗೆ ನೇರವಾಗಿ ಗೌರವಧನ ಪಾವತಿಗೆ ಕ್ರಮವಹಿಸುವಂತೆ ಮಧ್ಯಾಹ್ನದ ಉಪಾಹಾರ ಯೋಜನೆಯ ಅಧಿಕಾರಿಗಳಿಗೆ ಗಡುವು ನೀಡಲಾಗಿತ್ತು. ಆದರೆ, ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಿಲ್ಲ. ಹಾಗಾಗಿ ಸಂಬಳ ತಡೆ ಹಿಡಿದಿದ್ದೆವು. ಈಗ ಎರಡನೇ ತ್ರೈಮಾಸಿಕದ ಕಂತು ಬಿಡುಗಡೆ ಮಾಡಿದ್ದೇವೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಕೆ.ಜಿ.ಜಗದೀಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ವೇತನ ಪಾವತಿಗೆ ಅನುದಾನ ಕೊರತೆ ಕಾರಣವಲ್ಲ. ಶೀಘ್ರವೇ ವೇತನ ಪಾವತಿ ಆಗಲಿದೆ’ ಎಂದರು.

‘ಅನೇಕ ಜಿಲ್ಲೆಗಳಲ್ಲಿ ಸರ್ವರ್‌ ಸಮಸ್ಯೆಯಿಂದಾಗಿ ಅಡುಗೆ ಸಿಬ್ಬಂದಿಯ ಬ್ಯಾಂಕ್‌ ಖಾತೆ ವಿವರಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಲು ಸಾಧ್ಯವಾಗಿಲ್ಲ. ಇದಕ್ಕೆ ತಳಮಟ್ಟದ ಅಧಿಕಾರಿಗಳನ್ನು ಹೊಣೆ ಮಾಡುವುದು ಸರಿಯಲ್ಲ’ ಎಂದರು.

ಅಂಕಿ ಅಂಶ

* 34 – ಮಧ್ಯಾಹ್ನದ ಉಪಾಹಾರ ಯೋಜನೆಯಡಿಯ ಶಿಕ್ಷಣಾಧಿಕಾರಿಗಳು

* 234 – ಯೋಜನೆಯಡಿ ಕಾರ್ಯನಿರ್ವಹಿಸುವ ಸಹಾಯಕ ನಿರ್ದೇಶಕರು

* 268 –ಯೋಜನೆಯಡಿ ಕಾರ್ಯನಿರ್ವಹಿಸುವ ಪ್ರಥಮ ದರ್ಜೆ ಸಹಾಯಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT