ಜಾರಕಿಹೊಳಿ ಕೋಲಾಹಲ; ಕೈ–ದಳ ತಳಮಳ

7
ಸಂಧಾನದ ಬಳಿಕವೂ ಅಸಮಾಧಾನ

ಜಾರಕಿಹೊಳಿ ಕೋಲಾಹಲ; ಕೈ–ದಳ ತಳಮಳ

Published:
Updated:

ಬೆಂಗಳೂರು: ಜಾರಕಿಹೊಳಿ ಸಹೋದರರು ಭಿನ್ನ ಹೇಳಿಕೆಗಳನ್ನು ನೀಡುವ ಮೂಲಕ ಕಾಂಗ್ರೆಸ್‌ಗೆ ಬೆದರಿಕೆ ಒಡ್ಡುವ ತಂತ್ರ ಮುಂದುವರಿಸಿದ್ದು, ಅದರ ಲಾಭ ಪಡೆಯಲು ಬಿಜೆಪಿ ರಾಜ್ಯ ನಾಯಕತ್ವ ತಂತ್ರಗಾರಿಕೆ ಹೆಣೆಯುತ್ತಿದೆ. ಇದು ಸಮ್ಮಿಶ್ರ ಸರ್ಕಾರದ ಬುಡವನ್ನೇ ಅಲ್ಲಾಡಿಸಬಹುದೆಂಬ ಭೀತಿಯಲ್ಲಿರುವ ಮಿತ್ರ ಪಕ್ಷಗಳ ನಾಯಕರು, ಪ್ರತಿ ದಾಳ ಪ್ರಯೋಗಿಸುವ ಎಚ್ಚರಿಕೆ ನೀಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಾಗೂ ಸಚಿವ ಸ್ಥಾನಗಳ ಬೇಡಿಕೆ ಮಂಡಿಸಿದ್ದ ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ, ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಜತೆ ಮಂಗಳವಾರ ಮಾತುಕತೆಯಾಡಿದ ಬಳಿಕ ಪಟ್ಟು ಸಡಿಲಿಸಿದಂತೆ ತೋರಿದರು. ಅದೇ ಹೊತ್ತಿಗೆ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಶಾಸಕ ಸತೀಶ ಜಾರಕಿಹೊಳಿ, ‘ರಮೇಶನ ಜತೆ ಆರೇಳು ಶಾಸಕರಿದ್ದಾರೆ. ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು’ ಎಂದು ಹೇಳುವ ಮೂಲಕ ‘ರಾಜಕೀಯ ಕೋಲಾಹಲ’ ತಣ್ಣಗಾಗಿಲ್ಲ ಎಂಬ ಸುಳಿವನ್ನೂ ನೀಡಿದರು. 

ರಾಜಕೀಯ ಬೆಳವಣಿಗೆಗಳ ಬಗ್ಗೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ‘ಸರ್ಕಾರ ಉರುಳಿಸುವ ‍ಪಿತೂರಿ ನಡೆಸಿದರೆ ನಾವು ಸುಮ್ಮನೆ ಕೂರುವುದಿಲ್ಲ’ ಎಂದು ತಿರುಗೇಟು ಕೊಟ್ಟರು.

ಏತನ್ಮಧ್ಯೆ, ಡಾಲರ್ಸ್ ಕಾಲೋನಿಯ ತಮ್ಮ ಮನೆಯಲ್ಲಿ ಆಪ್ತರ ಜತೆ ಸಭೆ ನಡೆಸಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಪಕ್ಷದ ಮುಂದಿನ ನಡೆಯ ಬಗ್ಗೆ ಸಮಾಲೋಚನೆ ನಡೆಸಿದರು. ತಮ್ಮ ಪಕ್ಷದ ಶಾಸಕರು ಒಗ್ಗಟ್ಟಿನಿಂದ ಇರುವಂತೆ ಸೂಚಿಸಿದ ಅವರು, ಕಾಂಗ್ರೆಸ್‌– ಜೆಡಿಎಸ್‌ನ ಶಾಸಕರು ಮನಸ್ಸು ಬದಲಿಸುವವರೆಗೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುವಂತೆ ಸಲಹೆ ನೀಡಿದರು.

ದಿನವಿಡೀ ಕುತೂಹಲ: ತಮ್ಮ ಹಿಂದೆ ದೊಡ್ಡ ಗುಂಪಿದೆ ಎಂದು ತೋರಿಸಿಕೊಳ್ಳಲು ಮುಂದಾದ ರಮೇಶ ಜಾರಕಿಹೊಳಿ, ತಮ್ಮ ನಿವಾಸದಲ್ಲಿ ಆಪ್ತ ಶಾಸಕರ ಜತೆ ರಹಸ್ಯ ಸಭೆ ನಡೆಸಿದರು. ವಿದೇಶ ಪ್ರವಾಸದಲ್ಲಿರುವ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಜೊತೆ ಚರ್ಚಿಸಿ ಭಾನುವಾರ (ಇದೇ 16) ತಮ್ಮ ಮುಂದಿನ ರಾಜಕೀಯ ನಿರ್ಧಾರ ಪ್ರಕಟಿಸುವುದಾಗಿ ಈ ವೇಳೆ ಹೇಳಿಕೊಂಡರು.

ಅದಾದ ಬಳಿಕ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಅವರನ್ನು ಸದಾಶಿವನಗರದ ಸರ್ಕಾರಿ ನಿವಾಸದಲ್ಲಿ ರಮೇಶ ಭೇಟಿಯಾದರು. ಈ ವೇಳೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಕೂಡಾ ಇದ್ದರು.

ಸುಮಾರು 40 ನಿಮಿಷ ಮಾತುಕತೆ ನಡೆಸಿದ  ರಮೇಶ, ‘ಬೆಳಗಾವಿ ರಾಜಕಾರಣದಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಮೂಗು ತೂರಿಸುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ನಮ್ಮ ದಾರಿ ನಾವು ನೋಡಿಕೊಳ್ಳುತ್ತೇವೆ. ಅದರಿಂದ ಸರ್ಕಾರದ ಮೇಲೆ ಯಾವುದೇ ರೀತಿಯ ಪರಿಣಾಮವಾದರೂ ನಾವು ಹೊಣೆಗಾರರಲ್ಲ ಎಂಬ ಎಚ್ಚರಿಕೆ ನೀಡಿದ್ದಾರೆ’ ಎಂದು ಗೊತ್ತಾಗಿದೆ.

ತಮಗೆ ಆಗಿರುವ ಅವಮಾನವನ್ನು ವರಿಷ್ಠರು ಸರಿಪಡಿಸಬೇಕು, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಮತ್ತು ಬೆಳಗಾವಿ ಲೋಕಸಭೆ ಚುನಾವಣೆಯಲ್ಲಿ ತಾವು ಹೇಳಿದವರಿಗೆ ಟಿಕೆಟ್ ನೀಡಬೇಕು ಎಂಬ ಬೇಡಿಕೆಗಳನ್ನೂ ರಮೇಶ ಮುಂದಿಟ್ಟಿದ್ದಾರೆ. ಈ ವಿಷಯಗಳನ್ನು ಹೈಕಮಾಂಡ್ ಗಮನಕ್ಕೆ ತರುವುದಾಗಿ ಪರಮೇಶ್ವರ ಮತ್ತು ದಿನೇಶ್‌ ಭರವಸೆ ನೀಡಿದ್ದಾರೆ. ಬಳಿಕ ಮಾತನಾಡಿದ ರಮೇಶ, ‘ಎಲ್ಲ ಸಮಸ್ಯೆಗಳು ಬಗೆಹರಿದಿವೆ. ಗೊಂದಲಗಳೆಲ್ಲ ಮುಗಿದ ಅಧ್ಯಾಯ. ಪಕ್ಷದ ವಿರುದ್ಧ ಸಿಡಿದೇಳುವ ಪ್ರಶ್ನೆಯೇ ಇಲ್ಲ’ ಎಂದು ಹೇಳಿದ್ದಾರೆ.

‘ಏನು ಬೇಕಾದರೂ ಆಗಬಹುದು’

‘ಸರ್ಕಾರದ ಬದಲಾವಣೆ ನಾನು ಬಯಸಿಲ್ಲ. ನನ್ನಿಂದ ಸರ್ಕಾರಕ್ಕೆ ಸಮಸ್ಯೆಯಿಲ್ಲ. ಆದರೆ, ಬೇರೆ ಕಡೆಯಿಂದ ಏನು ಬೇಕಾದರೂ ಆಗಬಹುದು’ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ ಸತೀಶ ಜಾರಕಿಹೊಳಿ, ಕಾಂಗ್ರೆಸ್‌ ಪಾಳಯದಲ್ಲಿ ಸೃಷ್ಟಿಯಾಗಿರುವ ಸಂಚಲನಕ್ಕೆ ತುಪ್ಪ ಸುರಿದಿದ್ದಾರೆ.

‘ನಾಲ್ಕು ತಿಂಗಳಿನಿಂದ ರಮೇಶನ  ಜೊತೆಗಿರುವ ಶಾಸಕರೆಲ್ಲ ಪ್ರವಾಸ ಕೂಡಾ ಹೋಗಿ ಬಂದಿದ್ದಾರೆ. ಆ ಶಾಸಕರೆಲ್ಲ ತಮ್ಮ ಕಡೆ ಬರಬಹುದು ಎಂದು ಬಿಜೆಪಿಯವರು ಸ್ವಾಭಾವಿಕವಾಗಿ ನಂಬಿರಬಹುದು. ಬಿಜೆಪಿಯ ಯಾರೂ ನನ್ನನ್ನು ಸಂಪರ್ಕಿಸಿಲ್ಲ. ಬೇರೆಯವರನ್ನು ಮಾಡಿರಲೂಬಹುದು’ ಎಂದಿದ್ದಾರೆ.

‘20 ಶಾಸಕರು ಒಗ್ಗೂಡುವವರೆಗೂ ಬಿಜೆಪಿ ನಿರ್ಲಿಪ್ತ’

ರಾಜೀನಾಮೆ ನೀಡಲು ಕಾಂಗ್ರೆಸ್‌–ಜೆಡಿಎಸ್‌ನ 20ಕ್ಕೂ ಹೆಚ್ಚು ಶಾಸಕರು ಒಗ್ಗೂಡುವವರೆಗೆ ಕಾದು ನೋಡಲು ಬಿಜೆಪಿ ನಿರ್ಧರಿಸಿದೆ.

ಬಿ.ಎಸ್‌.ಯಡಿಯೂರಪ್ಪ ಆಪ್ತರು ಹಾಗೂ ಶಾಸಕರ ಸಭೆ ನಡೆಸಿದರು. 

‘ಕ್ಷೇತ್ರಕ್ಕೆ ಅನುದಾನ ನೀಡುವ ನೆಪದಲ್ಲಿ ಮುಖ್ಯಮಂತ್ರಿ ಆಮಿಷ ಒಡ್ಡಬಹುದು. ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳಬೇಡಿ. ರಾಜ್ಯದಲ್ಲಿ ಬಿಜೆಪಿ ಪರ ಅಲೆ ಇದೆ. ಆಮಿಷಕ್ಕೆ ಬಲಿಯಾಗಿ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ’ ಎಂದು ಶಾಸಕರಿಗೆ ಯಡಿಯೂರಪ್ಪ ಕಿವಿಮಾತು ಹೇಳಿದರು.

‘ಜಾರಕಿಹೊಳಿ ಬಣದಲ್ಲಿರುವ ಶಾಸಕರ ಸಂಖ್ಯೆ ಸದ್ಯ ಹತ್ತು ದಾಟಿಲ್ಲ. ಈಗಲೇ ಗಡಿಬಿಡಿ ಮಾಡುವುದು ಬೇಡ. ಇನ್ನಷ್ಟು ಶಾಸಕರು ಒಗ್ಗೂಡಲಿ. ಮತ್ತೆ ಕಾರ್ಯಾಚರಣೆ ನಡೆಸಿದರೆ ಸಾಕು’ ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು ಎಂದು ತಿಳಿದುಬಂದಿದೆ.

ಯಾರ್‍ಯಾರಯ ಏನೇನಂದರು...?

ಬಿಜೆಪಿಯವರು ನಮ್ಮ ಶಾಸಕರಿಗೆ ರಾಜೀನಾಮೆ ಕೊಡಿಸುವುದಿರಲಿ; ಅಗತ್ಯ ಬಿದ್ದರೆ ನಾವೇ ಬಿಜೆಪಿ ಐವರು ಶಾಸಕರಿಗೆ ರಾಜೀನಾಮೆ ಕೊಡಿಸುತ್ತೇವೆ
– ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ರಮೇಶ ಜಾರಕಿಹೊಳಿ ಯಾವುದೇ ಕಾರಣಕ್ಕೂ ಪಕ್ಷಕ್ಕೆ ಹಾನಿ ಮಾಡುವುದಿಲ್ಲ. ಭಿನ್ನಾಭಿಪ್ರಾಯವಿದ್ದರೆ ಚರ್ಚಿಸಿ ಬಗೆಹರಿಸುತ್ತೇವೆ. ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಯಾವುದೇ ಒಡಕಿಲ್ಲ
– ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ಕಾಂಗ್ರೆಸ್ ನಾಯಕ

ಬಿಜೆಪಿಯ 10 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಸರ್ಕಾರ ಅಸ್ಥಿರಗೊಳಿಸಲು ಅವರು ಯತ್ನಿಸಿದರೆ ಸ್ಥಿರಗೊಳಿಸಲು ನಾವು ಮುಂದಾಗಬೇಕಾಗುತ್ತದೆ
– ಪ್ರಿಯಾಂಕ್ ಖರ್ಗೆ, ಸಮಾಜ ಕಲ್ಯಾಣ ಸಚಿವ

ನಾವು ಆಪರೇಷನ್‌ ಕಮಲ ಮಾಡುತ್ತಿಲ್ಲ. ಅವರಾಗಿಯೇ ಬರುತ್ತಿದ್ದಾರೆ. ಬರುವವರಿಗೆ ಬೇಡ ಎನ್ನಲು ಆಗುತ್ತಾ? ಇದು ರಾಜಕಾರಣ

– ರಮೇಶ ಜಿಗಜಿಣಗಿ, ಕೇಂದ್ರ ಸಚಿವ

ಬೆಳಗಾವಿ ಜಿಲ್ಲೆಯ ಸಮಸ್ಯೆ ಈಗ ಬಗೆಹರಿದಿದೆ. ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಸಮ್ಮಿಶ್ರ ಸರ್ಕಾರ ಸುಭದ್ರವಾಗಿರಲಿದೆ
– ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ 

ಆಂತರಿಕ ಬೇಗುದಿಯಿಂದ ಸರ್ಕಾರ ತಾನಾಗಿಯೇ ಪತನಗೊಳ್ಳಲಿದೆ. ರಾಜಕೀಯ ಬೆಳವಣಿಗೆಗಳನ್ನು ಪಕ್ಷ ಸೂಕ್ಷ್ಮವಾಗಿ ಗಮನಿಸುತ್ತಿದೆ
– ಸಿ.ಟಿ.ರವಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರನ್ನು ಮೂಲೆಗುಂಪು ಮಾಡಲಾಗಿದೆ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಯಾವ ಸರ್ಕಾರ ಇರುತ್ತದೆ ಎಂಬುದು ಗೊತ್ತಿಲ್ಲ
– ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

ಬರಹ ಇಷ್ಟವಾಯಿತೆ?

 • 5

  Happy
 • 4

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !