ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿನ ಅಶೋಕಪುರಂನಿಂದ ಅಸ್ಸಾಂಗೆ 466 ಕಾರ್ಮಿಕರ ಪ್ರಯಾಣ

‘ಶ್ರಮಿಕ್‌ ರೈಲಿ’ನ ಮೂಲಕ ಮೈಸೂರಿನಿಂದ 466 ಕಾರ್ಮಿಕರ ಪ್ರಯಾಣ
Last Updated 31 ಮೇ 2020, 13:35 IST
ಅಕ್ಷರ ಗಾತ್ರ

ಮೈಸೂರು: ಮೈಸೂರು, ಚಾಮರಾಜನಗರ, ಕೊಡಗು, ಮಂಡ್ಯ, ಹಾಸನ ಜಿಲ್ಲೆಯ ವಿವಿಧೆಡೆ ಕೆಲಸ ಮಾಡಿಕೊಂಡಿದ್ದ ಅಸ್ಸಾಂನ 466 ವಲಸೆ ಕಾರ್ಮಿಕರು ಭಾನುವಾರ ಮಧ್ಯಾಹ್ನ ನಗರದ ಅಶೋಕಪುರಂ ರೈಲ್ವೆ ನಿಲ್ದಾಣದಿಂದ ತವರಿಗೆ ತೆರಳಿದರು.

ಶ್ರಮಿಕ್‌ ರೈಲು ಮಧ್ಯಾಹ್ನ 1.10ಕ್ಕೆ ನಿಲ್ದಾಣದಿಂದ ಹೊರಡುವ ಮುನ್ನವೇ ಕುಟುಂಬ ಸಮೇತರಾಗಿ ಹಾಜರಿದ್ದ ವಲಸೆ ಕಾರ್ಮಿಕರು, ಅಂತರ ಕಾಯ್ದುಕೊಂಡು ಕುಳಿತಿದ್ದರು. ಕೋವಿಡ್‌–19ನ ಮಾರ್ಗಸೂಚಿ ಪಾಲಿಸಿದರು. ಎಲ್ಲರ ಆರೋಗ್ಯ ತಪಾಸಣೆಯೂ ನಡೆಯಿತು. ಜಿಲ್ಲಾಡಳಿತ ಊಟದ ವ್ಯವಸ್ಥೆ ಕಲ್ಪಿಸಿದ್ದರೆ, ರೋಟರಿ ಕ್ಲಬ್‌, ಸಿಎಫ್‌ಟಿಆರ್‌ಐ ಸ್ನ್ಯಾಕ್ಸ್‌, ನೀರಿನ ವ್ಯವಸ್ಥೆ ಮಾಡಿದ್ದವು.

‘ಅಶೋಕಪುರಂ ರೈಲ್ವೆ ನಿಲ್ದಾಣದಿಂದ ಅಸ್ಸಾಂನ ಗುವಾಹಟಿ ರೈಲ್ವೆ ನಿಲ್ದಾಣದ ನಡುವಿನ ಅಂತರ 3026 ಕಿ.ಮೀ. ಇದೆ. 20 ಕೋಚ್‌ ಹೊಂದಿದ ಶ್ರಮಿಕ್‌ ರೈಲು ಮಂಗಳವಾರ ಸಂಜೆ 5.30ಕ್ಕೆ ಗುವಾಹಟಿ ನಿಲ್ದಾಣ ತಲುಪಲಿದೆ. ರಾಮನಗರ, ಬೆಂಗಳೂರು ರೈಲ್ವೆ ನಿಲ್ದಾಣಗಳಲ್ಲಿ ಮಾತ್ರ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲಿದ್ದು, ನಡುವೆ ಎಲ್ಲಿಯೂ ಪ್ರಯಾಣಿಕರು ಈ ರೈಲಿಗೆ ಹತ್ತುವುದಿಲ್ಲ. ಇಳಿಯುವುದೂ ಇಲ್ಲ’ ಎಂದು ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ಹೆಸರು ಬಹಿರಂಗಪಡಿಸಲಿಚ್ಚಿಸದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಮೈಸೂರು–ಗುವಾಹಟಿ ನಡುವಿನ ಪ್ರಯಾಣ ದರ ₹ 915. ಪ್ರತಿಯೊಬ್ಬ ಪ್ರಯಾಣಿಕನ ಪ್ರಯಾಣ ದರವನ್ನು ರೈಲ್ವೆ ಇಲಾಖೆಗೆ ರಾಜ್ಯ ಸರ್ಕಾರ ತುಂಬಿದೆ. ದಾರಿ ನಡುವೆ ರೈಲ್ವೆ ಇಲಾಖೆಯ ಐಆರ್‌ಸಿಟಿಸಿ ಸಂಸ್ಥೆ ಎಲ್ಲ ಪ್ರಯಾಣಿಕರಿಗೂ ಊಟ–ನೀರನ್ನು ಉಚಿತವಾಗಿ ಕೊಡಲಿದೆ’ ಎಂದು ಅವರು ಹೇಳಿದರು.

ಮತ್ತೆರಡು ರೈಲು ಇಂದಿನಿಂದ

‘ವಾರದಲ್ಲಿ ಆರು ದಿನ ಬೆಂಗಳೂರು–ಮೈಸೂರು ನಡುವೆ ಮೆಮೊ ರೈಲು ಸಂಚರಿಸುತ್ತಿದೆ. ಆರಂಭದಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಿತ್ತು. ಇದೀಗ 200 ದಾಟಿದೆ’ ಎಂದು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕಿ ಹಾಗೂ ಜನಸಂಪರ್ಕಾಧಿಕಾರಿ ಪ್ರಿಯಾ ಶೆಟ್ಟಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಇಲಾಖೆಯ ಸೂಚನೆಯಂತೆ ಸೋಮವಾರದಿಂದ (ಜೂನ್‌ 1) ಕೆಲ ರೈಲುಗಳ ಸಂಚಾರ ಆರಂಭಗೊಳ್ಳಲಿದೆ. ಇದರಲ್ಲಿ ಮೈಸೂರು ವಿಭಾಗದ ವ್ಯಾಪ್ತಿಯಲ್ಲೂ ಎರಡು ರೈಲು ಸಂಚರಿಸಲಿವೆ’ ಎಂದು ಅವರು ಹೇಳಿದರು.

‘ಬೆಂಗಳೂರು–ಹುಬ್ಬಳ್ಳಿ, ಶಿವಮೊಗ್ಗ–ಯಶವಂತಪುರ ನಡುವೆ ಜನಶತಾಬ್ದಿ ರೈಲು ಸಂಚಾರ ಆರಂಭವಾಗಲಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT