ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಯಲ್ಲಿ ಮಿಲಿಟರಿ ಪಾಠ!

ಗಣರಾಜ್ಯೋತ್ಸವಕ್ಕೆ ಕವಾಯತು ನಡೆಸಲು ಹಿರೇಕುಂಬಿ ಶಾಲೆಯಲ್ಲಿ ಸಿದ್ಧತೆ
Last Updated 9 ಜನವರಿ 2019, 19:14 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲ್ಲೂಕಿನ ಹಿರೇಕುಂಬಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಮಿಲಿಟರಿ ಶಿಕ್ಷಣ ನೀಡಲಾಗುತ್ತಿದೆ!

ಅಲ್ಲಿನ ಶಿಕ್ಷಕ ರಮೇಶ ಪೂಜಾರಿ ನಿತ್ಯ ತರಗತಿ ಅವಧಿ ಮುಗಿದ ನಂತರ ಮಕ್ಕಳಿಗೆ ಕವಾಯತು ಕಲಿಸುತ್ತಿದ್ದಾರೆ. ಮದ್ರಾಸ್‌ ರೆಜಿಮೆಂಟ್‌ನಲ್ಲಿ 20 ವರ್ಷ ಸುಬೇದಾರ್ ಆಗಿದ್ದ ಅವರು ಸ್ವಯಂ ನಿವೃತ್ತಿ ಪಡೆದಿದ್ದಾರೆ.

2007ರಿಂದ ಸರ್ಕಾರಿ ಶಾಲಾ ಶಿಕ್ಷಕರಾಗಿದ್ದಾರೆ. ಒಬ್ಬ ವಿದ್ಯಾರ್ಥಿಯಿಂದ ಆರಂಭಿಸಿದ ತರಬೇತಿಯನ್ನು ಈಗ 50 ವಿದ್ಯಾರ್ಥಿ– ವಿದ್ಯಾರ್ಥಿನಿಯರಿಗೆ ವಿಸ್ತರಿಸಿದ್ದಾರೆ. ಸ್ವಂತ ಖರ್ಚಿನಲ್ಲಿ ಈ ಕಾರ್ಯ ಕೈಗೊಳ್ಳುತ್ತಿದ್ದಾರೆ.

ಮಕ್ಕಳಿಗೆ ವ್ಯಾಯಾಮ, ಪಥಸಂಚಲನ, ಶಿಸ್ತುಬದ್ಧವಾಗಿ ಸಲ್ಯೂಟ್‌ ಮಾಡುವುದು, ಅತಿಥಿಗಳಿಗೆ ಗೌರವವಂದನೆ ಸಲ್ಲಿಸುವುದನ್ನು ಕಲಿಸಲಾಗುತ್ತದೆ.

ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವ ಆಚರಣೆ ವೇಳೆ, ವಿಶೇಷ ಕವಾಯತು ಪ್ರದರ್ಶನಕ್ಕಾಗಿ ಮಕ್ಕಳಿಗೆ ರಮೇಶ ತರಬೇತಿ ನೀಡುತ್ತಿದ್ದಾರೆ. ಸೇನೆ ಹಾಗೂ ಕಾರ್ಗಿಲ್ ಯುದ್ಧದ ಅನುಭವ ಮಕ್ಕಳಿಗೆ ಧಾರೆ ಎರೆಯುತ್ತಿದ್ದಾರೆ.

ಸೈನಿಕರ ಮಾದರಿಯ ಡ್ರೆಸ್, ಕ್ಯಾಪ್‌, ಬೂಟ್, ಬೆಲ್ಟ್‌ಗಳನ್ನು ಸ್ವಂತ ಖರ್ಚಿನಲ್ಲಿ ಮಕ್ಕಳಿಗೆ ಕೊಡಿಸಿರುವ ಅವರಿಗೆ ಮುಖ್ಯ ಶಿಕ್ಷಕ ಮೋಹನ ರಾಥೋಡ್ ಹಾಗೂ ಇತರ ಶಿಕ್ಷಕರು ಸಹಕಾರ ನೀಡುತ್ತಿದ್ದಾರೆ. ಮಕ್ಕಳು ಸೈನಿಕರ ಹಾಗೆ ಅಭ್ಯಾಸ ಮಾಡುತ್ತಿರುವುದಕ್ಕೆ ಗ್ರಾಮಸ್ಥರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಸೈನಿಕರ ತ್ಯಾಗ–ಬಲಿದಾನ ಹಾಗೂ ದೇಶದ ಬಗ್ಗೆ ಅಭಿಮಾನ ಮೂಡಿಸುವ, ಶಿಸ್ತು ಬೆಳೆಸುವ ಉದ್ದೇಶದಿಂದ ಈ ಕೆಲಸ ಮಾಡುತ್ತಿದ್ದೇನೆ. ಶಾಲೆಯಲ್ಲಿ 175 ವಿದ್ಯಾರ್ಥಿಗಳಿದ್ದಾರೆ. ಈ ಬಾರಿ 4 ಮತ್ತು 5ನೇ ತರಗತಿಯ ಮಕ್ಕಳಿಗೆ ಕಲಿಸುತ್ತಿದ್ದೇನೆ. ಕವಾಯತು ಮುನ್ನಡೆಸುವ ವಿದ್ಯಾರ್ಥಿಗೆ ನನ್ನ ರೈಫಲ್‌ ಕೊಡುತ್ತೇನೆ. ಈ ಎಲ್ಲ ಬದಲಾವಣೆಗಳಿಂದಾಗಿ ಶಾಲಾ ಮಕ್ಕಳನ್ನು ಗ್ರಾಮಸ್ಥರು ಗೌರವದಿಂದ ಕಾಣುತ್ತಿದ್ದಾರೆ’ ಎಂದು ರಮೇಶ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮುಂದಿನ ವರ್ಷ 100 ಮಕ್ಕಳನ್ನು ಕವಾಯತಿಗೆ ಸಜ್ಜುಗೊಳಿಸುವ, ಅವರಿಗೆ ಬೇಕಾಗುವ ಸಮವಸ್ತ್ರಗಳನ್ನು ಕೊಡಿಸುವ ಗುರಿ ಇದೆ. ಗ್ರಾಮದ ಶಾಲೆಗೆ ಮಿಲಿಟರಿ ಪಡೆಯೇ ಬಂದಿದೆಯೇನೋ ಎಂದು ಜನರು ಅಚ್ಚರಿಪಡುವಷ್ಟರ ಮಟ್ಟಿಗೆ ದೊಡ್ಡಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಬೇಕು ಎನ್ನುವ ಯೋಜನೆ ಇದೆ. ತಾಲ್ಲೂಕು ಆಡಳಿತ ಆಯೋಜಿಸುವ ರಾಷ್ಟ್ರೀಯ ಹಬ್ಬಗಳಲ್ಲಿ ನಮ್ಮ ಮಕ್ಕಳಿಂದ ಕವಾಯತು ಪ್ರದರ್ಶನ ಆಯೋಜಿಸಬೇಕು ಆರಂಭಿಸಬೇಕು ಎನ್ನುವ ಬಯಕೆ ಇದೆ’ ಎಂದರು. ಸಂಪರ್ಕ: 99027 53715.

***

ಪ್ರತಿ ವರ್ಷವೂ ಈ ಕಾರ್ಯಕ್ರಮ ಮುಂದುವರಿಸುತ್ತೇನೆ. ಸೈನಿಕ ಪಾಠಗಳಿಂದ ಪ್ರೇರಣೆಯಾಗುವ ಮಕ್ಕಳು ಭವಿಷ್ಯದಲ್ಲಿ ದೇಶ ಸೇವೆಗೆ ಮುಂದಾದರೆ ಅಷ್ಟೇ ಸಾಕು.
-ರಮೇಶ ಪೂಜಾರಿ
ಶಿಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT